ಸರ್ಕಾರದಿಂದ ಎಸ್ಯುಸಿ ದರ ಮನ್ನಾ ಸಾಧ್ಯತೆ; ಏರ್ಟೆಲ್, ಜಿಯೋ, ವೊಡಾಫೋನ್ಗೆ ಸಾವಿರಾರು ಕೋಟಿ ರೂ ಉಳಿತಾಯ
Possibility of waiver of Spectrum Usage Charges: 2021ರ ಸೆಪ್ಟೆಂಬರ್ 15 ಬಳಿಕ ಹರಾಜಾದ ಸ್ಪೆಕ್ಟ್ರಂಗಳಿಗೆ ಸರ್ಕಾರ ಎಸ್ಯುಸಿ ರದ್ದು ಮಾಡಿತ್ತು. ಈಗ 2021ರ ಸೆಪ್ಟೆಂಬರ್ಗೆ ಮುಂಚಿನ ಸ್ಪೆಕ್ಟ್ರಂ ಹರಾಜುಗಳಿಗೂ ಎಸ್ಯುಸಿ ಮನ್ನಾ ಮಾಡಲು ಯೋಜಿಸಿದೆ ಎಂದು ವರದಿಯಾಗಿದೆ. ಸರ್ಕಾರದ ಈ ಕ್ರಮದಿಂದ ಏರ್ಟೆಲ್, ಜಿಯೋ, ವಿಐ ಇತ್ಯಾದಿ ಟೆಲಿಕಾಂ ಕಂಪನಿಗಳಿಗೆ ಸಾವಿರಾರು ಕೋಟಿ ರೂ ಉಳಿತಾಯವಾಗಲಿದೆ.

ನವದೆಹಲಿ, ಮಾರ್ಚ್ 25: ಟೆಲಿಕಾಂ ಕಂಪನಿಗಳಿಗೆ ಹೊರೆಯಾಗುತ್ತಿದ್ದ ಎಸ್ಯುಸಿ ಅಥವಾ ಸ್ಪೆಕ್ಟ್ರಮ್ ಬಳಕೆ ಶುಲ್ಕವನ್ನು (SUC- Spectrum Usage Charge) ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕ್ರಮವೇನಾದರೂ ಜಾರಿಯಾದಲ್ಲಿ ವೊಡಾಫೋನ್ ಐಡಿಯಾ, ಏರ್ಟೆಲ್ ಮತ್ತು ರಿಲಾಯನ್ಸ್ ಜಿಯೋ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂ ಹಣ ಉಳಿತಾಯ ಆಗಲಿದೆ. 2021ರ ಸೆಪ್ಟೆಂಬರ್ಗೆ ಮುಂಚೆ ಸ್ಪೆಕ್ಟ್ರಂ ಹರಾಜುಗಳ ಮೂಲಕ ಈ ಕಂಪನಿಗಳು ಖರೀದಿಸಿದ ಸ್ಪೆಕ್ಟ್ರಂಗಳಿಗೆ ಸರ್ಕಾರ ಎಸ್ಯುಸಿ ಶುಲ್ಕ ಹಿಂಪಡೆದುಕೊಳ್ಳಲು ಯೋಜಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಅಧಿಕೃತ ಮೂಲ ಉಲ್ಲೇಖಿಸಿ ವರದಿ ಮಾಡಿದೆ.
2021ರ ಸೆಪ್ಟೆಂಬರ್ 15ರ ಬಳಿಕ ಹರಾಜಾದ ಸ್ಪೆಕ್ಟ್ರಂಗೆ ಸರ್ಕಾರ 2022ರ ಜೂನ್ನಲ್ಲಿ ಎಸ್ಯುಸಿ ಶುಲ್ಕವನ್ನು ತೆಗೆದುಹಾಕಿತ್ತು. ಆದರೆ, ಅದಕ್ಕೂ ಮುಂಚೆ ಖರೀದಿಸಲಾದ ಸ್ಪೆಕ್ಟ್ರಂ ಬಗ್ಗೆ ಯಾವ ನಿರ್ಧಾರವೂ ಬಂದಿರಲಿಲ್ಲ. ಇದು ಟೆಲಿಕಾಂ ಕಂಪನಿಗಳನ್ನು ಗೊಂದಲಕ್ಕೆ ಕೆಡವಿತ್ತು. ಈಗ ಸರ್ಕಾರ 2021ಕ್ಕೆ ಮುಂಚೆ ಖರೀದಿಯಾದ ಸ್ಪೆಕ್ಟ್ರಂಗೂ ಎಸ್ಯುಸಿ ಶುಲ್ಕ ರದ್ದುಗೊಳಿಸಲು ಮುಂದಾಗಿರುವುದು ಟೆಲಿಕಾಂ ಕಂಪನಿಗಳನ್ನು ನಿರಾಳಗೊಳ್ಳುವಂತೆ ಮಾಡಬಹುದು.
ಇದನ್ನೂ ಓದಿ: ಸೆಬಿ ನಿರ್ಧಾರಗಳು… ಎಫ್ಪಿಐ ವಿವರ ಸಲ್ಲಿಕೆ ಮಿತಿ ಹೆಚ್ಚಳ; ಮುಂಗಡ ಶುಲ್ಕ ಮಿತಿ ಹೆಚ್ಚಳ; ಉನ್ನತ ಮಟ್ಟದ ಸಮಿತಿ ರಚನೆ
ಏನಿದು ಎಸ್ಯುಸಿ ಶುಲ್ಕ?
ಸ್ಪೆಕ್ಟ್ರಂ ಖರೀದಿ ಬಳಿಕ ಆ ನಿರ್ದಿಷ್ಟ ರೇಡಿಯೋ ತರಂಗಾಂತರ ಅಥವಾ ಏರ್ವೇವ್ಸ್ ಅಥವಾ ಸ್ಪೆಕ್ಟ್ರಂ ಅನ್ನು ಬಳಸಲು ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ನಿರ್ದಿಷ್ಟ ಶುಲ್ಕ ನೀಡಬೇಕು. ಮೊದಲಿಗೆ ಶೇ. 8ರಷ್ಟು ಲೈಸೆನ್ಸ್ ಶುಲ್ಕ ನೀಡಬೇಕು. ಬಳಿಕ ತಮ್ಮ ಒಟ್ಟು ಆದಾಯದಲ್ಲಿ (ಎಜಿಆರ್) ಶೇ. 3-4ರಷ್ಟು ಮೊತ್ತವನ್ನು ಸ್ಪೆಕ್ಟ್ರಂ ಬಳಕೆ ಶುಲ್ಕವಾಗಿ ಸರ್ಕಾರಕ್ಕೆ ನೀಡಬೇಕು. ಇವು ಹರಾಜಿನಲ್ಲಿ ಸ್ಪೆಕ್ಟ್ರಂ ಕೊಳ್ಳಲು ವ್ಯಯಿಸಿದ ಹಣಕ್ಕೆ ಹೊರತಾದ ಶುಲ್ಕಗಳು.
ಎಸ್ಯುಸಿ ಮನ್ನಾದಿಂದ ಟೆಲಿಕಾಂ ಕಂಪನಿಗಳಿಗೆ ಆನೆ ಬಲ
ಭಾರತೀಯ ಟೆಲಿಕಾಂ ಕಂಪನಿಗಳು ದೇಶಾದ್ಯಂತ 5ಜಿ ನೆಟ್ವರ್ಕ್ ಅಳವಡಿಕೆ ನಡೆಸುತ್ತಿವೆ. ಹಾಗೆಯೇ, 6ಜಿ ನೆಟ್ವರ್ಕ್ಗೂ ಅಣಿಗೊಳ್ಳುತ್ತಿವೆ. ಈ ಹಂತದಲ್ಲಿ ಸಾಕಷ್ಟು ಬಂಡವಾಳದ ಅವಶ್ಯಕತೆ ಇದೆ. ಸರ್ಕಾರವು ಸ್ಪೆಕ್ಟ್ರಂ ಬಳಕೆಗೆ ಎಸ್ಯುಸಿ ಶುಲ್ಕವನ್ನು ಮನ್ನಾ ಮಾಡಿರುವುದರಿಂದ ಈ ಕಂಪನಿಗಳಿಗೆ ಸಾವಿರಾರು ಕೋಟಿ ರೂ ಉಳಿತಾಯವಾಗುತ್ತದೆ. ಈ ಹಣವನ್ನು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಬಳಸಬಹುದು.
ಇದನ್ನೂ ಓದಿ: 2,000 ರೂ ಒಳಗಿನ ಯುಪಿಐ ಪಾವತಿ: 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್ಗೆ ಸಂಪುಟ ಅನುಮೋದನೆ; ಏನಿದು ಯೋಜನೆ? ಯಾರಿಗೆ ಅನುಕೂಲ?
ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸರ್ವಿಸ್ ಭಾರತದಲ್ಲಿ ಆರಂಭವಾಗುತ್ತಿದೆ. ಈ ಸ್ಪರ್ಧೆಯನ್ನು ಎದುರಿಸಲು ಭಾರತೀಯ ಕಂಪನಿಗಳಿಗೆ ಸರ್ಕಾರದ ಈ ಕ್ರಮ ಹೊಸ ಭರವಸೆ ಮೂಡಿಸಿದಂತಾಗಿದೆ.
ಸರ್ಕಾರ ಯಾಕೆ ಎಸ್ಯುಸಿ ಮನ್ನಾ ಮಾಡಿದೆ?
ಸರ್ಕಾರ ಸ್ಪೆಕ್ಟ್ರಂ ಹರಾಜುಗಳನ್ನು ನಡೆಸಿದಾಗ ನಿರೀಕ್ಷೆಮೀರಿದ ಪೈಪೋಟಿ ಸೃಷ್ಟಿಯಾಗಿತ್ತು. ಅದರ ಪರಿಣಾಮವಾಗಿ ಸರ್ಕಾರ ಎಣಿಸಿದ್ದಕ್ಕಿಂತ ಹೆಚ್ಚು ಮೊತ್ತಕ್ಕೆ ಸ್ಪೆಕ್ಟ್ರಂ ಮಾರಾಟವಾಗಿದೆ. ಸ್ಪೆಕ್ಟ್ರಂ ಬಳಕೆ ಶುಲ್ಕದಿಂದ ಬರಬಹುದಾದ ಆದಾಯವು ಸರ್ಕಾರಕ್ಕೆ ಹರಾಜಿನಲ್ಲೇ ಸಿಕ್ಕಿತ್ತು. ಈ ಕಾರಣಕ್ಕೆ ಎಸ್ಯುಸಿಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Tue, 25 March 25