Semiconductor: ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ನ ಗ್ಲೋಬಲ್ ಸಪ್ಲಯರ್ ಕಂಪನಿಗಳು ಭಾರತಕ್ಕೆ ಬರಲು ಸಜ್ಜು
Applied Materials: ಅಮೆರಿಕದ ಸೆಮಿಕಂಡಕ್ಟರ್ ಟೂಲ್ ತಯಾರಕ ಸಂಸ್ಥೆ ಅಪ್ಲೈಡ್ ಮೆಟೀರಿಯಲ್ಸ್ ಬೆಂಗಳೂರಿನಲ್ಲಿ ಹೊಸ ಟೆಕ್ ಸೆಂಟರ್ ಸ್ಥಾಪಿಸುವುದರ ಜೊತೆಗೆ ತನ್ನ ಜಾಗತಿಕ ಸರಬರಾಜುದಾರ ಕಂಪನಿಗಳನ್ನೂ ಭಾರತದಲ್ಲಿ ಉತ್ಪಾದನೆಗೆ ಓಲೈಸುತ್ತಿದೆ.
ನವದೆಹಲಿ, ಆಗಸ್ಟ್ 6: ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ (Semiconductor Sector) ಸ್ಥಾಪಿಸುವ ಕಾರ್ಯಕ್ಕೆ ಎಲ್ಲಿಲ್ಲದ ಪ್ರೋತ್ಸಾಹ ಮತ್ತು ಜಾಗತಿಕ ಸ್ಪಂದನೆ ಸಿಗುತ್ತಿದೆ. ವಿಶ್ವದ ಸೆಮಿಕಂಡಕ್ಟರ್ ಚಿಪ್ ಕ್ಷೇತ್ರದ ಹಲವು ದೈತ್ಯ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ. ಅಮೆರಿಕ, ಯೂರೋಪ್, ಜಪಾನ್ ಮತ್ತು ತೈವಾನ್ ದೇಶಗಳ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ಘಟಕ ಸ್ಥಾಪಿಸಿ ಇಲ್ಲಿಯೇ ಉತ್ಪಾದನೆ ಆರಂಭಿಸುವ ಇರಾದೆಯಲ್ಲಿವೆ. ಇದೇ ಹೊತ್ತಿನಲ್ಲಿ ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ (Applied Materials) ತನ್ನ ಸಪ್ಲಯರ್ ಕಂಪನಿಗಳನ್ನೂ ಭಾರತಕ್ಕೆ ಸೆಳೆಯುವ ಕೆಲಸ ಮಾಡುತ್ತಿದೆ. ಸೆಮಿಕಂಡಕ್ಟರ್ ಟೂಲ್ಮೇಕರ್ ಸಂಸ್ಥೆಯಾದ ಅಪ್ಲೈಡ್ ಮೆಟೀರಿಯಲ್ಸ್ ಬೆಂಗಳೂರಿನಲ್ಲಿ ಹೊಸ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲಿದ್ದು, ಮುಂದಿನ ಕೆಲ ವರ್ಷಗಳಲ್ಲಿ 400 ಮಿಲಿಯನ್ ಡಾಲರ್ (ಸುಮಾರು 3,300 ಕೋಟಿ ರೂ) ಹೂಡಿಕೆ ಮಾಡುವ ಯೋಜನೆಯಲ್ಲಿದೆ.
2002ರಿಂದಲೂ ಭಾರತದಲ್ಲಿ ನೆಲಸಿರುವ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ ಸೆಮಿಕಂಡಕ್ಟರ್ ಚಿಪ್ ತಯಾರಿಸಲು ಬೇಕಾದ ಸಾಧನವನ್ನು ತಯಾರಿಸುತ್ತದೆ. ಅಪ್ಲೈಡ್ ಮೆಟೀರಿಯಲ್ಸ್ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿಲ್ಲ. ಪ್ರಾಡಕ್ಟರ್ ಡೆಲವಪ್ಮೆಂಟ್, ಸಾಫ್ಟ್ವೇರ್ ಹಾಗೂ ಬ್ಯುಸಿನೆಸ್ ಆಪರೇಷನ್ಸ್ಗಳನ್ನು ಭಾರತದಿಂದ ನಿಭಾಯಿಸುತ್ತದೆ. ಇಲ್ಲಿ 7,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಅದು ಹೊಸ ಟೆಕ್ ಸೆಂಟರ್ ಆರಂಭಿಸುತ್ತಿರುವುದು.
ಮೈಕ್ರೋನ್ ಟೆಕ್ನಾಲಜೀಸ್, ಎಎಂಡಿ ಮೊದಲಾದ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ತಯಾರಿಕೆ ಆರಂಭಿಸಲು ಉತ್ಸುಕವಾಗಿವೆ. ಎಎಂಡಿ ಭಾರತದಲ್ಲಿ ಚಿಪ್ ಡಿಸೈನ್ ಸೆಂಟರ್ ತೆರೆಯುತ್ತಿದೆ. ಮೈಕ್ರೋನ್ ಸಂಸ್ಥೆ ಸೆಮಿಕಂಡಕ್ಟರ್ ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಘಟಕ ಸ್ಥಾಪಿಸಲಿದೆ. ಅಪ್ಲೈಡ್ ಮೆಟೀರಿಯಲ್ಸ್ ಕೂಡ ಈ ಬೆಳವಣಿಗೆಯತ್ತ ಕಣ್ಣಿಟ್ಟಿದೆ. ಈ ಸೆಮಿಕಂಕ್ಟರ್ ಘಟಕಗಳಿಗೆ ಬೇಕಾಗುವ ಪರಿಕರಗಳನ್ನು ಅಪ್ಲೈಡ್ ಮೆಟೀರಿಯಲ್ಸ್ ಪೂರೈಸುತ್ತದೆ. ಹೀಗಾಗಿ, ತನ್ನ ಜಾಗತಿಕ ಪೂರೈಕೆದಾರ ಕಂಪನಿಗಳು ಭಾರತದಲ್ಲೇ ಇದ್ದರೆ ಅನುಕೂಲ ಎಂಬುದು ಅಮೆರಿಕ ಸಂಸ್ಥೆಯ ಅನಿಸಿಕೆ.
ಇತ್ತೀಚೆಗೆ ಗುಜರಾತ್ನಲ್ಲಿ ನಡೆದ ಸೆಮಿಕಾನ್ ಸಮ್ಮೇಳನದಲ್ಲಿ ಅಪ್ಲೈಡ್ ಮೆಟೀರಿಯಲ್ಸ್ನ ಕೆಲ ಜಾಗತಿಕ ಸಪ್ಲಯರ್ ಕಂಪನಿಗಳು ಬಂದಿದ್ದವು. ಜಪಾನ್, ಸೌತ್ ಕೊರಿಯಾ, ಅಮೆರಿಕ, ಯೂರೋಪ್ ಮೊದಲಾದ ಕಡೆ ಇರುವ ಅದರ 25 ಸಪ್ಲಯರ್ಗಳನ್ನು ಆಕರ್ಷಿಸಲು ಭಾರತದ ವಿವಿಧ ರಾಜ್ಯಗಳು ಯತ್ನಿಸುತ್ತಿವೆ. ಇವೆಲ್ಲವೂ ಕೂಡ ಭಾರತದಲ್ಲಿ ಸೆಮಿಕಂಡಕ್ಟರ್ ಮಾರುಕಟ್ಟೆ ಅಮೂಲಾಗ್ರವಾಗಿ ಬೆಳೆಯಲು ಸಹಕಾರಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: API: ಚೀನಾ ಅವಲಂಬನೆ ತಗ್ಗಿಸಲು ಭಾರತದಲ್ಲೇ ತಯಾರಾಗುತ್ತಿವೆ 38 APIಗಳು; ಏನಿವುಗಳ ವಿಶೇಷತೆ?
ಸದ್ಯ, ಸೆಮಿಕಂಡಕ್ಟರ್ ಉದ್ಯಮ ಹೆಚ್ಚಾಗಿ ನೆಲೆನಿಂತಿರುವುದು ಚೀನಾದಲ್ಲೇ. ಈ ಎಲ್ಲಾ ಜಾಗತಿಕ ಸೆಮಿಕಂಡಕ್ಟರ್ ದೈತ್ಯ ಸಂಸ್ಥೆಗಳು ಚೀನಾದಲ್ಲಿ ಕಾರ್ಯಾಚರಿಸುತ್ತಿವೆ. ಈಗ ಚೀನಾದಿಂದ ಹೊರಗೆ ತಯಾರಿಕಾ ಉದ್ಯಮ ಸ್ಥಾಪಿಸುವ ಪ್ರಯತ್ನವಾಗುತ್ತಿದ್ದು, ಭಾರತ ಇದರ ಲಾಭ ಪಡೆಯುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ