ಟ್ಯಾಕ್ಸ್ ಒಪ್ಪಂದ ಇದ್ದಾಗ ಶೇ. 20 ಟಿಡಿಎಸ್ ಮುರಿದುಕೊಳ್ಳುವಂತಿಲ್ಲ: ಐಟಿ ಇಲಾಖೆಗೆ ಸುಪ್ರೀಂ ಆದೇಶ

Supreme Court ruling on TDS over foreign companies: ಟ್ಯಾಕ್ಸ್ ಒಪ್ಪಂದ ಇರುವ ದೇಶಗಳ ಕಂಪನಿಗಳಿಗೆ ಪಾವತಿಸುವ ಹಣಕ್ಕೆ ಶೇ. 10ಕ್ಕಿಂತ ಹೆಚ್ಚು ಟಿಡಿಎಸ್ ಮುರಿದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿದೇಶೀ ಕಂಪನಿಗಳಿಗೆ ಹಣ ಪಾವತಿಸುವಾಗ ಭಾರತೀಯ ಕಂಪನಿಗಳು ಶೇ. 20 ಟಿಡಿಎಸ್ ಮುರಿದುಕೊಳ್ಳಬೇಕು ಎಂಬುದು ಐಟಿ ತಾಕೀತಾಗಿತ್ತು. ವಿದೇಶೀ ಕಂಪನಿಗಳಿಗೆ ಪ್ಯಾನ್ ಇಲ್ಲದಿರುವುದರಿಂದ ಶೇ. 20 ಟಿಡಿಎಸ್ ಅನ್ವಯ ಆಗುತ್ತದೆ ಎನ್ನುವುದು ಐಟಿ ವಾದ.

ಟ್ಯಾಕ್ಸ್ ಒಪ್ಪಂದ ಇದ್ದಾಗ ಶೇ. 20 ಟಿಡಿಎಸ್ ಮುರಿದುಕೊಳ್ಳುವಂತಿಲ್ಲ: ಐಟಿ ಇಲಾಖೆಗೆ ಸುಪ್ರೀಂ ಆದೇಶ
ಸುಪ್ರೀಂ ಕೋರ್ಟ್

Updated on: Nov 26, 2025 | 12:12 PM

ನವದೆಹಲಿ, ನವೆಂಬರ್ 26: ಒಂದು ದೇಶದ ಜೊತೆ ಡಬಲ್ ಟ್ಯಾಕ್ಸೇಶನ್ ವಿನಾಯಿತಿಯ ಒಪ್ಪಂದ (DTAA- Double Taxation Avoidance Agreement) ಇದ್ದಾಗ, ಆ ದೇಶದ ಕಂಪನಿಗಳಿಗೆ ಹಣ ಪಾವತಿಸುವಾಗ ಶೇ. 10ಕ್ಕಿಂತ ಹೆಚ್ಚು ಟಿಡಿಎಸ್ ಮುರಿದುಕೊಳ್ಳುವಂತಿಲ್ಲ ಎಂದು ಆದಾಯ ತೆರಿಗೆ ಇಲಾಖೆಗೆ ಸುಪ್ರೀಂಕೋರ್ಟ್ (Supreme Court) ಆದೇಶ ನೀಡಿದೆ. ಭಾರತೀಯ ಕಂಪನಿಗಳು ವಿದೇಶೀ ಕಂಪನಿಗಳಿಗೆ ಹಣ ಪಾವತಿಸುವಾಗ ಶೇ. 20ರಷ್ಟು ಟಿಡಿಎಸ್ ಮುರಿದುಕೊಳ್ಳಬೇಕು ಎಂಬುದು ಐಟಿ ಇಲಾಖೆಯ ತಾಕೀತು. ಆದರೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಮಹತ್ವದ್ದಾಗಿದೆ. ಇದೇ ವಿಚಾರದಲ್ಲಿ ಕರ್ನಾಟಕ ಹಾಗೂ ದೆಹಲಿ ಉಚ್ಚ ನ್ಯಾಯಾಲಯಗಳು ಕೂಡ ಇದೇ ಅಭಿಪ್ರಾಯ ನೀಡಿದ್ದವು. ಹೈಕೋರ್ಟ್​ಗಳ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಆದಾಯ ತೆರಿಗೆ ಇಲಾಖೆಯು ಪ್ಯಾನ್ ನಂಬರ್ ವಿಚಾರ ಮುಂದಿಟ್ಟುಕೊಂಡು ಅಧಿಕ ಟಿಡಿಎಸ್ ಮುರಿದುಕೊಳ್ಳಲು ಬಯಸುತ್ತಿದೆ. ಆದಾಯ ತೆರಿಗೆ ಸೆಕ್ಷನ್ 206ಎಎ ಅಡಿಯಲ್ಲಿ ಹಣ ಸ್ವೀಕರಿಸುವವರ ಬಳಿ ಪ್ಯಾನ್ ನಂಬರ್ ಇಲ್ಲವಾದರೆ ಶೇ. 20ರಷ್ಟು ಟಿಡಿಎಸ್ ಮುರಿದುಕೊಳ್ಳಬೇಕು ಎನ್ನುವ ನಿಯಮ ಇದೆ. ಭಾರತೀಯ ಕಂಪನಿಗಳಿಂದ ಹಣ ಸ್ವೀಕರಿಸುವ ವಿದೇಶೀ ಕಂಪನಿಗಳ ಬಳಿ ಪರ್ಮನೆಂಟ್ ಅಕೌಂಟ್ ನಂಬರ್ ಇಲ್ಲ. ಹೀಗಾಗಿ, ಅವುಗಳಿಗೆ ಹಣಪಾವತಿಸುವಾಗ ಭಾರತೀಯ ಕಂಪನಿಗಳು ಶೇ. 10 ಬದಲು ಶೇ. 20ರಷ್ಟು ಟಿಡಿಎಸ್ ಮುರಿದುಕೊಳ್ಳಲಿ ಎಂಬುದು ಆದಾಯ ತೆರಿಗೆ ಇಲಾಖೆಯ ವಾದವಾಗಿದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗುವುದು ಹೇಗೆ? ಆದಾಯ ಎಷ್ಟು? ಪರೀಕ್ಷೆ ಶುಲ್ಕ, ಕಮಿಷನ್ ಇತ್ಯಾದಿ ವಿವರ

ಕೋರ್ಟ್ ಉಲ್ಲೇಖಿಸಿದ ಡಿಟಿಎಎ ಏನು?

ಡಿಟಿಎಎ ಎಂದರೆ ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಅಗ್ರೀಮೆಂಟ್. ಇದು ಎರಡು ದೇಶಗಳ ಮಧ್ಯೆ ನಡೆಯುವ ಟ್ಯಾಕ್ಸ್ ಒಪ್ಪಂದ. ಎರಡು ದೇಶಗಳ ಕಂಪನಿಗಳ ನಡುವೆ ವ್ಯವಹಾರ ನಡೆದಾಗ ಎರಡೂ ದೇಶಗಳ ಟ್ಯಾಕ್ಸ್ ಸಿಸ್ಟಂ ಅಡ್ಡಬರಬಹುದು. ಒಂದು ಕಂಪನಿಯು ಎರಡೂ ದೇಶಗಳಿಗೆ ತೆರಿಗೆ ಪಾವತಿಸಬೇಕಾಗಬಹುದು. ಇದನ್ನು ತಪ್ಪಿಸಲು ಎರಡು ದೇಶಗಳ ಮಧ್ಯೆ ಡಿಟಿಎಎ ಒಪ್ಪಂದ ಏರ್ಪಡಬಹುದು. ಇಂಥ ಒಪ್ಪಂದ ಇದ್ದಾಗ ಕಂಪನಿಯು ಒಂದು ದೇಶಕ್ಕೆ ಟ್ಯಾಕ್ಸ್ ಕಟ್ಟಿದರೆ ಸಾಕು. ಡಿಟಿಎಎ ನಿಯಮದಲ್ಲಿ ಇದು ಇದೆ. ಸುಪ್ರೀಂಕೋರ್ಟ್ ಈ ನಿಯಮ ಉಲ್ಲೇಖಿಸಿ ತನ್ನ ನಿರ್ಧಾರ ಹೇಳಿದೆ.

ಭಾರತೀಯ ಕಂಪನಿಗಳು ಶೇ. 20 ಟಿಡಿಎಸ್ ಮುರಿದುಕೊಳ್ಳುವುದರಿಂದ ಏನು ತೊಂದರೆ?

ವಿದೇಶೀ ಕಂಪನಿಗಳಿಗೆ ಹಣ ಪಾವತಿಸುವಾಗ ಭಾರತೀಯ ಕಂಪನಿಗಳು ಶೇ. 10 ಬದಲು ಶೇ. 20 ಟಿಡಿಎಸ್ ಮುರಿದುಕೊಳ್ಳಬಹುದು. ಆದರೆ, ಅದರಿಂದ ವ್ಯವಹಾರ ಕುಂಠಿತಗೊಳ್ಳಬಹುದು. ವಿದೇಶೀ ಕಂಪನಿಗಳು ಭಾರತೀಯ ಕಂಪನಿಗಳಿಗೆ ಸೇವೆ ನೀಡಲು ಅಥವಾ ವ್ಯವಹರಿಸಲು ಹಿಂದೇಟು ಹಾಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Wed, 26 November 25