ಬೆಂಗಳೂರು, ಆಗಸ್ಟ್ 25: ಸಿಲಿಕಾನ್ ನಗರಿಯಲ್ಲಿ ಸೈಬರ್ ಅಪರಾಧ ಘಟನೆಗಳು (Cyber Crime Incidents) ಅಗಣಿತ ರೀತಿಯಲ್ಲಿ ಹೆಚ್ಚುತ್ತಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಹಣ ಲಪಟಾಯಿಸುವುದು, ನಕಲಿ ಉದ್ಯೋಗ ಭರವಸೆ ನೀಡಿ ವಂಚಿಸುವುದು ಹೀಗೆ ನಾನಾ ರೀತಿಯಲ್ಲಿ ಆನ್ಲೈನ್ನಲ್ಲೇ ದುಷ್ಕರ್ಮಿಗಳು ವಂಚಿಸುವುದಿದೆ. ಬೆಂಗಳೂರಿನಂಥ ಚಟುವಟಿಕೆಭರಿತ ನಗರದಲ್ಲಿ ಇಂಥ ಸೈಬರ್ ಕ್ರೈಮ್ಗಳು ಬಹಳ ಹೆಚ್ಚೇ ಆಗುತ್ತಿವೆ. ಜನರ ಅವಸರ ಬುದ್ಧಿಯನ್ನು ಅಪರಾಧಿಗಳು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾರ್ಸಲ್ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳೂ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಫೆಡ್ಎಕ್ಸ್ ಕೊರಿಯರ್ (FedEx Courier) ಹೆಸರಿನಲ್ಲಿ ಬೆಂಗಳೂರಿನಲ್ಲಿ ಹಲವು ಹಗರಣಗಳು ನಡೆದಿವೆ.
ಫೆಡ್ಎಕ್ಸ್ ಎಂಬುದು ಕೊರಿಯರ್ ಕಂಪನಿ. ದುಷ್ಕರ್ಮಿಗಳು ಫೆಡೆಕ್ಸ್ ಕೊರಿಯರ್ ಕಂಪನಿಯ ಉದ್ಯೋಗಿಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡುತ್ತಾರೆ. ಕಸ್ಟಮ್ಸ್ ಅಫಿಶಿಯಲ್ಸ್ ಸೇರಿದಂತೆ ವಿವಿಧ ಅಧಿಕಾರಿಗಳ ಸೋಗಿನಲ್ಲೂ ಕರೆ ಮಾಡುತ್ತಾರೆ. ಜನರಿಗೆ ಅನುಮಾನ ಬರದಿರಲೆಂದು ಐವಿಆರ್ ಸಿಸ್ಟಮ್ಸ್ ವ್ಯವಸ್ಥೆಯನ್ನೂ ಹೊಂದಿರುತ್ತಾರೆ. ಫೆಡ್ಎಕ್ಸ್ ಉದ್ಯೋಗಿಗಳು, ಕಸ್ಟಮ್ಸ್ ಅಧಿಕಾರಿಗಳು ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳ ಧ್ವನಿ ಅನುಕರಿಸುವ ಆಟೊಮೇಟೆಡ್ ಕಾಲ್ ಅನ್ನು ಈ ಐವಿಆರ್ನಲ್ಲಿ ಅಳವಡಿಸಲಾಗಿರುತ್ತದೆ.
ಇದನ್ನೂ ಓದಿ: ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದಾಗ ಎಳನೀರು ಖರೀದಿಸಿದಾಗ, ಅಂಗಡಿಯವನ ರಿಯಾಕ್ಷನ್ ಹೇಗಿತ್ತು?
ತಮಗೆ ಕಳುಹಿಸಲಾದ ಪಾರ್ಸಲ್ವೊಂದು ಮುಂಬೈ ಏರ್ಪೋರ್ಟ್ನ ಕಸ್ಟಮ್ಸ್ನಲ್ಲಿ ಸಿಕ್ಕಿಕೊಂಡಿದೆ. ಅದನ್ನು ಪರಿಶೀಲಿಸುವ ವೇಳೆ ಮಾದಕವಸ್ತು ಇತ್ಯಾದಿ ಅಕ್ರಮ ವಸ್ತುಗಳಿರುವುದು ಗೊತ್ತಾಗಿದೆ. ಇದರಿಂದ ನಿಮಗೆ ಕಾನೂನಾತ್ಮಕ ತೊಂದರೆಗಳು ಎದುರಾಗುತ್ತವೆ. ನೀವು ತಪ್ಪಿಸಿಕೊಳ್ಳಬೇಕಾದರೆ ಇಂತಿಷ್ಟು ಲಕ್ಷ ರೂ ಹಣ ಪಾವತಿಸಿ ಎಂದು ದುಷ್ಕರ್ಮಿಗಳು ಅಮಾಯಕ ಮಂದಿಗೆ ಕರೆ ಮಾಡಿ ತಿಳಿಸುತ್ತಾರೆ. ಈ ಕರೆಯಿಂದ ಕೆಲವರು ಭಯ ಪಟ್ಟು, ಮಾನ ಮರ್ಯಾದೆಗೆ ಅಂಜಿ ಹಣ ಕಳುಹಿಸುವುದಿದೆ.
ಇದಕ್ಕೆ ಬಗ್ಗದವರಿಗೆ ನಕಲಿ ಪೊಲೀಸ್ ಅಧಿಕಾರಿಯಿಂದ ಸ್ಕೈಪ್ ವಿಡಿಯೋ ಕಾಲ್ ಕೂಡ ಬರುತ್ತದೆ. ತಮಗೆ ಕಳುಹಿಸಲಾದ ಪಾರ್ಸಲ್ನಲ್ಲಿ ಅಕ್ರಮ ವಸ್ತುಗಳಿವೆ. ತಮ್ಮ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆ ಅಧಿಕಾರಿ ವಿಡಿಯೋ ಕಾಲ್ನಲ್ಲಿ ಬೆದರಿಕೆ ಹಾಕುತ್ತಾನೆ. ಬಳಿಕ ಆಧಾರ್, ಪ್ಯಾನ್ ನಂಬರ್ ಇತ್ಯಾದಿ ಮಾಹಿತಿ ಪಡೆಯುತ್ತಾರೆ. ಈ ಆಧಾರ್ ನಂಬರ್ಗೆ ಜೋಡಿತವಾದ ಬ್ಯಾಂಕ್ ಖಾತೆಯನ್ನು ಅಕ್ರಮ ಹಣ ವರ್ಗಾವಣೆಗೆ ದುರ್ಬಳಕೆ ಆಗುತ್ತಿದೆ ಎಂದು ಸುಳ್ಳು ಹೇಳಿ ಹೆದರಿಸುತ್ತಾರೆ. ಮುಂದಾಗುವ ಕಾನೂನು ತೊಂದರೆಗಳನ್ನು ಊಹಿಸಿ ಜನರು ಆ ದುಷ್ಕರ್ಮಿಗಳು ಕೇಳಿದಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಬಹುದು.
ಬೆಂಗಳೂರಿನಲ್ಲಿ ಈ ವರ್ಷದಲ್ಲೇ ಇಂಥ 163 ಪ್ರಕರಣಗಳು ಬೆಳಕಿಗೆ ಬಂದಿವೆ. ಇಷ್ಟೂ ಪ್ರಕರಣಗಳಿಂದ 5 ಕೋಟಿ ರೂ ಹಣವನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ.
ಇದನ್ನೂ ಓದಿ: AB-PMJAY Scheme: ಕೇಂದ್ರದ ಆಯುಷ್ಮಾನ್ ಭಾರತ್ ಕಾರ್ಡ್ದಾರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ಮುಂದೇನು ಕ್ರಮ?
ನಿಮಗೆ ಫೆಡ್ಎಕ್ಸ್ ಕೊರಿಯರ್ ಮೂಲಕ ಯಾವುದಾದರೂ ಪಾರ್ಸಲ್ ಬರುವುದಿದ್ದರೆ ಅದನ್ನು ಅಧಿಕೃತ ವೆಬ್ಸೈಟ್ ಮೂಲಕವೇ ಟ್ರ್ಯಾಕ್ ಮಾಡಬಹುದು. ಆಗಂತುಕರು ಕಳುಹಿಸುವ ಎಸ್ಸೆಮ್ಮೆಸ್, ಇಮೇಲ್ ಅಥವಾ ವಾಟ್ಸಾಪ್ಗಳಲ್ಲಿನ ಮೆಸೇಜ್ನಲ್ಲಿನ ಲಿಂಕ್ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ.
ದುಷ್ಕರ್ಮಿಗಳು ಕರೆ ಮಾಡಿದಾಗ, ಅವರ ಬಗ್ಗೆ ನಿಮಗೆ ಸಂಶಯ ಬಂದರೆ ಕೂಡಲೇ ಕರೆ ಕಟ್ ಮಾಡಿ. ಇಲ್ಲದಿದ್ದರೆ ಅವರು ನಿಮ್ಮನ್ನು ಭಾವನಾತ್ಮಕವಾಗಿ ಹೈಜಾಕ್ ಮಾಡಲು ಯತ್ನಿಸಬಹುದು.
ನೀವು ಈ ಹಗರಣಕ್ಕೆ ತುತ್ತಾಗಿದ್ದರೆ ಕೂಡಲೇ 112 ಅಥವಾ 1930 ನಂಬರ್ಗೆ ಡಯಲ್ ಮಾಡಿ ದೂರು ದಾಖಲಿಸಬಹುದು. ಅಥವಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಹೋಗಿ ಅಧಿಕೃತವಾಗಿ ದೂರು ಕೊಡಬಹುದು.
(ಮಾಹಿತಿ ಕೃಪೆ: ಸಿ.ಕೆ. ಬಾಬಾ, ಪೊಲೀಸ್ ಅಧಿಕಾರಿ)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ