ಬೆಂಗಳೂರು, ಆಗಸ್ಟ್ 25: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಐದಾರು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಹೋದ ಸಂದರ್ಭದಲ್ಲಿ ನಡೆದ ಘಟನೆಯೊಂದು ಈಗ ವೈರಲ್ ಆಗಿದೆ. ಅಲಸೂರಿನ ಬಳಿಯ ಅಂಚೆ ಕಚೇರಿಯೊಂದರ ಮಹಿಳಾ ಸಿಬ್ಬಂದಿಯೊಬ್ಬರ ಬಗ್ಗೆ ಬಿಲ್ ಗೇಟ್ಸ್ ಶ್ಲಾಘನೆ ವ್ಯಕ್ತಪಡಿಸಿದ್ದರು. ಅದೇ ಸಂದರ್ಭದಲ್ಲಿ ಬಿಲ್ ಗೇಟ್ಸ್ ಎಳನೀರು (Tender coconut) ಖರೀದಿಸಿ ಕುಡಿದ ಘಟನೆ ಗಮನ ಸೆಳೆಯುತ್ತಿದೆ. ಅಲಸೂರು ಕೆರೆ ಬಳಿಕ 22 ವರ್ಷಗಳಿಂದ ಎಳನೀರು ಮಾರುವ ಹರಿಬಾಬುಗೆ ಮಾರ್ಚ್ 5ರಂದು ಅನಿರೀಕ್ಷಿತ ಗಿರಾಕಿಯಾಗಿ ಬಿಲ್ ಗೇಟ್ಸ್ ಸಿಕ್ಕಿದ್ದರು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಅತಿಶ್ರೀಮಂತರಲ್ಲಿ ಒಬ್ಬರು ಎಂಬುದು ಆ ಎಳನೀರು ವ್ಯಾಪಾರಿಗೆ ತಿಳಿದಿತ್ತು. ಅಂತಿಪ್ಪ ಆ ಶ್ರೀಮಂತ ತನ್ನಲ್ಲಿ ಎಳನೀರು ಖರೀದಿಸಿ ಕುಡಿದು ಹೋಗುತ್ತಾರೆಂದು ಹರಿಬಾಬು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.
ಅಲಸೂರು ಕೆರೆ ಬಳಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅಂದು ಜಾಗೃತಿ ಶಿಬಿರ ಆಯೋಜಿಸಿತ್ತು. ಅದಕ್ಕೆ ಪಾಲ್ಗೊಳ್ಳಲು ಬಿಲ್ ಗೇಟ್ಸ್ ಆಗಮಿಸಿರುತ್ತಾರೆ. ಅಲ್ಲೇ ಸಮೀಪದಲ್ಲೇ 40 ವರ್ಷದ ಹರಿಬಾಬು ಎಳನೀರು ಮಾರುತ್ತಿರುತ್ತಾರೆ. ತಮ್ಮ ಸಹವರ್ತಿಗಳೊಂದಿಗೆ ಬಿಲ್ ಗೇಟ್ಸ್ ಹೋಗಿ ಎಳನೀರು ಕುಡಿದಿದ್ದಾರೆ. ಈ ವೇಳೆ ಬಿಲ್ ಗೇಟ್ಸ್ ಸಹವರ್ತಿಯೊಬ್ಬರು ಹಣ ಪಾವತಿಸಿದ್ದಾರೆ. ಹರಿಬಾಬುಗೆ ಬಿಲ್ ಗೇಟ್ಸ್ ಧನ್ಯವಾದ ಕೂಡ ಹೇಳಿದರಂತೆ.
ಇದನ್ನೂ ಓದಿ: ಕಚೇರಿಗೆ ಕೆಲಸಕ್ಕೆ ಬನ್ನಿ ಎಂದು ಕಟ್ಟಪ್ಪಣೆ ಮಾಡಿದ್ದೇ ಬಂತು, ರಾಜೀನಾಮೆಗೆ ನಿಂತ ಅಮೇಜಾನ್ ಉದ್ಯೋಗಿಗಳು
ಬಿಲ್ ಗೇಟ್ಸ್ ಬಗ್ಗೆ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದರು ಹರಿಬಾಬು. ಅಂಥ ವ್ಯಕ್ತಿ ಜೊತೆ ತನ್ನದೊಂದು ಫೋಟೋ ತೆಗೆಸಿಕೊಳ್ಳಲಿಲ್ಲವಲ್ಲ ಎಂಬ ಕೊರಗು ಅವರಿಗೆ ಇದೆ. ಆದರೂ ಕೂಡ ಬಿಲ್ ಗೇಟ್ಸ್ರಂಥ ವ್ಯಕ್ತಿತ್ವದವರಿಗೆ ಎಳನೀರು ಕೊಟ್ಟ ಧನ್ಯತಾ ಭಾವ ಹರಿಬಾಬುಗೆ ಇದೆ.
‘ಇಂಥ ಒಂದು ದಿನ ಬರುತ್ತದೆ ಎಂದು ನಾನು ಎಣಿಸಿರಲಿಲ್ಲ. ದೊಡ್ಡದೊಡ್ಡ ವ್ಯಕ್ತಿಗಳನ್ನು ಭೇಟಿ ಮಾಡಲೂ ಸಮಯ ಇಲ್ಲದಷ್ಟು ಬ್ಯುಸಿ ಇರುವ ವ್ಯಕ್ತಿ ನನ್ನ ಅಂಗಡಿಗೆ ಬಂದು ಎಳನೀರು ಕುಡಿದು ಹೋಗುತ್ತಾರೆಂದರೆ ಅದು ಕನಸೋ ನನಸೋ ಎಂದು ಗೊಂದಲ ಆಗುತ್ತದೆ. ಅಂದು ನಾನೇನೇ ಮಾಡಿದ್ದರೂ ಯಾವುದೋ ನಿಮಿತ್ತ ಮಾತ್ರ ಎಂದು ಆ ಕ್ಷಣಕ್ಕೆ ನನಗೆ ಅನಿಸಿತು’ ಎಂದು ಎಳನೀರು ವ್ಯಾಪಾರಿ ಹರಿಬಾಬು ಭಾವುಕರಾಗಿ ಹೇಳುತ್ತಾರೆ.
The India Post Payments Bank (@IPPBOnline) has enabled rural communities, especially women, with financial services. To learn about how IPPB is creating impact till the last mile, @BillGates interacted with their agents & the beneficiaries of these services. pic.twitter.com/MoVdh1Mivp
— Gates Foundation India (@BMGFIndia) March 5, 2023
ಇದನ್ನೂ ಓದಿ: ಚಂದ್ರನ ನೆಲ ಸೇಲ್ಗೆ; ಎಕರೆಗೆ 5,000 ರೂಗಿಂತ ಕಡಿಮೆ ಬೆಲೆ; ಚಂದ್ರನಲ್ಲಿ ಪ್ರಾಪರ್ಟಿ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಬಿಲ್ ಗೇಟ್ಸ್ ಅವರ ಗೇಟ್ಸ್ ಫೌಂಡೇಶನ್ ಸಂಸ್ಥೆಯ ಭಾರತೀಯ ವಿಭಾಗದ ಟ್ವಿಟ್ಟರ್ ಅಕೌಂಟ್ ಮಾರ್ಚ್ 5ರಂದು ಆ ದಿನದ ಕಾರ್ಯಕ್ರಮಗಳ ಫೋಟೋಗಳನ್ನು ಒಳಗೊಂಡು ಟ್ವೀಟ್ ಮಾಡಿತ್ತು. ಅದರಲ್ಲಿ ಬಿಲ್ ಗೇಟ್ಸ್ ಎಳನೀರು ಕುಡಿದು ಹಣ ಪಾವತಿಸುತ್ತಿರುವ ಒಂದು ಫೋಟೋ ಕೂಡ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Fri, 25 August 23