ಕಚೇರಿಗೆ ಕೆಲಸಕ್ಕೆ ಬನ್ನಿ ಎಂದು ಕಟ್ಟಪ್ಪಣೆ ಮಾಡಿದ್ದೇ ಬಂತು, ರಾಜೀನಾಮೆಗೆ ನಿಂತ ಅಮೇಜಾನ್ ಉದ್ಯೋಗಿಗಳು
Amazon Employees: ಅಮೆರಿಕದ ವಿವಿಧ ನಗರಗಳಲ್ಲಿರುವ ಅಮೇಜಾನ್ ಸೆಂಟ್ರಲ್ ಹಬ್ಗೆ ಬಂದು ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಅಪ್ಪಣೆ ಮಾಡಲಾಗಿದೆ. ಇದರ ಬೆನ್ನಲ್ಲೇ, ಮನೆಯಿಂದ ಕೆಲಸ ಮಾಡುತ್ತಿರುವ ಹಲವು ಉದ್ಯೋಗಿಗಳು ರಾಜೀನಾಮೆ ನೀಡಲೂ ಸಿದ್ಧವಾಗಿರಉವ ಸಂಗತಿ ಬೆಳಕಿಗೆ ಬಂದಿದೆ.
ವಾಷಿಂಗ್ಟನ್, ಆಗಸ್ಟ್ 25: ಕೋವಿಡ್ ಬಳಿಕ ಚಾಲ್ತಿಯಲ್ಲಿದ್ದ ವರ್ಕ್ ಫ್ರಂ ಹೋಮ್ (Work From Home) ಪದ್ಧತಿಗೆ ಬಹುತೇಕ ಎಲ್ಲಾ ಉದ್ಯೋಗಿಗಳೂ ಹೊಂದಿಕೊಂಡಿದ್ದರು. ಕೋವಿಡ್ ಸ್ಥಿತಿ ಸುಧಾರಿಸಿದ ಬಳಿಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳುತ್ತಿವೆ. ಭಾರತದಂಥ ದೇಶಗಳಲ್ಲಿ ಹೆಚ್ಚಿನ ಉದ್ಯೋಗಿಗಳು ಕಚೇರಿ ಕರೆಗೆ ಸ್ಪಂದಿಸಿದ್ದಾರೆ. ಆದರೆ, ಅಮೆರಿಕದಂಥ ದೇಶಗಳಲ್ಲಿ ಬಹಳಷ್ಟು ಉದ್ಯೋಗಿಗಳು ಕಚೇರಿಗೆ ಹೋಗಿ ಕೆಲಸ ಮಾಡಲು ಸುತಾರಾಂ ಇಷ್ಟಪಡುತ್ತಿಲ್ಲದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲ ಕಂಪನಿಗಳ ಉದ್ಯೋಗಿಗಳು ರಾಜೀನಾಮೆ ಕೂಡ ನೀಡಿರುವ ಘಟನೆ ನಡೆದಿವೆ. ಈಗ ಅಮೇಜಾನ್ ಸಂಸ್ಥೆಯ ಉದ್ಯೋಗಿಗಳಿಂದ (Amazon Employees) ರಾಜೀನಾಮೆ ಪರ್ವ ಆರಂಭವಾಗುತ್ತಿದೆ.
ಅಮೇಜಾನ್ನ ಸೆಂಟ್ರಲ್ ಹಬ್ಗೆ ಬಂದು ಕೆಲಸ ಮಾಡುವಂತೆ ಎಲ್ಲಾ ಉದ್ಯೋಗಿಗಳಿಗೂ ಕಟ್ಟಪ್ಪಣೆ ಮಾಡಲಾಗಿದ್ದು, ಇದರಿಂದ ವಿಚಲಿತಗೊಂಡ ಉದ್ಯೋಗಿಗಳು ರಾಜೀನಾಮೆಗೂ ಮುಂದಾಗಿದ್ದಾರೆ ಎನ್ನಲಾಗಿದೆ. ಕಚೇರಿಗೆ ಬಂದು ಕೆಲಸ ಶುರು ಮಾಡಲು 2024ರ ಮಧ್ಯಭಾಗದವರೆಗೂ ಅವಕಾಶ ಕೊಡಲಾಗಿದೆ. ಆದರೆ, ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕಚೇರಿಗೆ ಬರಲು ಹಲವು ಕಾರಣಗಳಿಗೆ ಮೀನ ಮೇಷ ಎಣಿಸುತ್ತಿದ್ದಾರೆ. ಅಮೆರಿಕದ ಸಿಯಾಟಲ್, ನ್ಯೂಯಾರ್ಕ್, ಆಸ್ಟಿನ್, ಟೆಕ್ಸಾಸ್ ಮತ್ತು ಆರ್ಲಿಂಗ್ಟನ್ ಈ ಪ್ರದೇಶಗಳಲ್ಲಿರುವ ಅಮೇಜಾನ್ ಹಬ್ಗಳಲ್ಲಿ ಯಾವುದಾರೂ ಒಂದಕ್ಕೆ ಹೋಗಿ ಕೆಲಸ ಮಾಡುವಂತೆ ಕಂಪನಿ ತಾಕೀತು ಮಾಡಿದೆ.
ಇದನ್ನೂ ಓದಿ: AB-PMJAY Scheme: ಕೇಂದ್ರದ ಆಯುಷ್ಮಾನ್ ಭಾರತ್ ಕಾರ್ಡ್ದಾರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ಮುಂದೇನು ಕ್ರಮ?
ಆದರೆ, ಅಮೇಜಾನ್ ಉದ್ಯೋಗಿಗಳು ಕಚೇರಿಗೆ ಹೋಗಿ ಕೆಲಸ ಮಾಡಲು ಹಿಂದೇಟು ಹಾಕಲು ಕೆಲ ಕಾರಣಗಳಿವೆ. ಮನೆಯಿಂದ ಕೆಲಸ ಮಾಡುವಾಗ ಸಿಗುವ ಫ್ಲೆಕ್ಸಿಬಿಲಿಟಿ ಕಚೇರಿಯಲ್ಲಿ ಕೆಲಸ ಮಾಡುವಾಗ ಸಿಗುವುದಿಲ್ಲ. ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯ ಎಂಬ ಭಾವನೆ ಹೆಚ್ಚಿನವರಲ್ಲಿ ಇದೆ. ಇದು ಕಚೇರಿಗೆ ಹೋಗಲು ಮನಸು ಒಲ್ಲೆ ಎನ್ನಲು ಕಾರಣ.
ಹಾಗೆಯೇ, ಕಚೇರಿ ಸ್ಥಳ ಮನೆಯಿಂದ ಬಹಳ ದೂರ ಇರುವುದರಿಂದ ವಾಸಸ್ಥಳ ಬದಲಾಯಿಸಬೇಕಾಗುತ್ತದೆ. ಇದರಿಂದ ವೆಚ್ಚ ಹೆಚ್ಚಾಗುತ್ತದೆ. ಕಚೇರಿಗೆ ಹೋಗಿ ಕೆಲಸ ಮಾಡಿದರೆ ಹೆಚ್ಚಿನ ಸಂಬಳ ಸಿಗದೇ ಹೋಗಬಹುದು ಎಂಬ ಆತಂಕ. ಇವೆಲ್ಲಾ ಸಂದೇಹಗಳು ಉದ್ಯೋಗಿಗಳನ್ನು ಕಾಡುತ್ತಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಚಂದ್ರನ ನೆಲ ಸೇಲ್ಗೆ; ಎಕರೆಗೆ 5,000 ರೂಗಿಂತ ಕಡಿಮೆ ಬೆಲೆ; ಚಂದ್ರನಲ್ಲಿ ಪ್ರಾಪರ್ಟಿ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಕೆಲ ಸಮೀಕ್ಷೆಗಳ ಪ್ರಕಾರ ಅಮೇಜಾನ್ ಮಾತ್ರವಲ್ಲ, ಬೇರೆಲ್ಲಾ ಕಂಪನಿಗಳ ಹೆಚ್ಚಿನ ಉದ್ಯೋಗಿಗಳು ಮನೆ ಮತ್ತು ಕಚೇರಿ ಎರಡೂ ಕಡೆಯಿಂದ ಕೆಲಸ ಮಾಡುವ ಆಯ್ಕೆಗಳನ್ನು ಉದ್ಯೋಗಿಗಳಿಗೆ ಕೊಡಬೇಕು. ಕಂಪನಿಗಳ ಸಿಇಒ ಇತ್ಯಾದಿ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿರುವವರದ್ದು ಇದಕ್ಕೆ ತದ್ವಿರುದ್ಧದ ಅಭಿಪ್ರಾಯ. ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಿದರೆ ಟೀಮ್ ವರ್ಕ್ ಸಾಧ್ಯವಾಗುತ್ತದೆ. ಕ್ರಿಯಾಶೀಲತೆ ಹೆಚ್ಚುತ್ತದೆ ಎಂಬುದು ಅವರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ