ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಆಗಸ್ಟ್ 23ರಂದು ಭಾರತಕ್ಕೆ ಸುಮಾರು 17.86 ಬಿಲಿಯನ್ ಡಾಲರ್‌ಗೆ ಸಮಾನವಾದ ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ಹಂಚಿಕೆಯನ್ನು ಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸೆಪ್ಟೆಂಬರ್ 1ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಭಾರತದ ಒಟ್ಟು ಎಸ್‌ಡಿಆರ್ ಹೋಲ್ಡಿಂಗ್ಸ್ ಆಗಸ್ಟ್ 23, 2021ರ ವೇಳೆಗೆ ಸುಮಾರು 19.41 ಬಿಲಿಯನ್ ಡಾಲರ್ ಸಮನಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಎಸ್‌ಡಿಆರ್ ಹೋಲ್ಡಿಂಗ್ಸ್ ಹೆಚ್ಚಳವು ವಿದೇಶೀ ವಿನಿಮಯ ಮೀಸಲು (ಎಫ್‌ಇಆರ್) ಡೇಟಾದಲ್ಲಿ ಪ್ರತಿಫಲಿಸುತ್ತದೆ, ಅದು ಆಗಸ್ಟ್ 27, 2021ಕ್ಕೆ ಕೊನೆಗೊಂಡ ವಾರಕ್ಕೆ ಪ್ರಕಟವಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಎಸ್‌ಡಿಆರ್ ಹೋಲ್ಡಿಂಗ್ಸ್ ದೇಶದ ವಿದೇಶೀ ವಿನಿಮಯ ಮೀಸಲುಗಳಲ್ಲಿ ಒಂದು. ಐಎಂಎಫ್ ತನ್ನ ಸದಸ್ಯರಿಗೆ ನಿಧಿಯಲ್ಲಿ ಅವರ ಪ್ರಸ್ತುತ ಕೋಟಾಗಳಿಗೆ ಅನುಗುಣವಾಗಿ ಸಾಮಾನ್ಯ ಎಸ್‌ಡಿಆರ್ ಹಂಚಿಕೆಯನ್ನು ಮಾಡುತ್ತದೆ. ಐಎಂಎಫ್ನ ಆಡಳಿತ ಮಂಡಳಿಯು ಆಗಸ್ಟ್ 2, 2021ರಂದು ಎಸ್‌ಡಿಆರ್ 456 ಬಿಲಿಯನ್ ಸಾಮಾನ್ಯ ಹಂಚಿಕೆಗೆ ಅನುಮೋದನೆ ನೀಡಿತು. ಇದು ಆಗಸ್ಟ್ 23, 2021ರಿಂದ ಅನ್ವಯವಾಗುತ್ತದೆ. ಅದರಲ್ಲಿ ಭಾರತದ ಪಾಲು ಎಸ್‌ಡಿಆರ್ 12.57 ಬಿಲಿಯನ್.
ಆಗಸ್ಟ್ 20ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶೀ ವಿನಿಮಯ ಮೀಸಲು 2.47 ಬಿಲಿಯನ್ ಡಾಲರ್ ಇಳಿಕೆಯಾಗಿ, 616.895 ಬಿಲಿಯನ್ ಡಾಲರ್ ತಲುಪಿದೆ ಎಂದು ಆರ್‌ಬಿಐ ಡೇಟಾದಲ್ಲಿ ಕಳೆದ ಶುಕ್ರವಾರ ಕಂಡುಬಂದಿದೆ. ಆಗಸ್ಟ್ 13, 2021ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ಮೀಸಲು 2.099 ಬಿಲಿಯನ್ ಕುಸಿದು, 619.365 ಬಿಲಿಯನ್ ಡಾಲರ್‌ಗೆ ಇಳಿದಿದೆ. ವಿದೇಶೀ ವಿನಿಮಯ ಆಗಸ್ಟ್ 6, 2021ಕ್ಕೆ ಕೊನೆಗೊಂಡ ವಾರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 621.464 ಬಿಲಿಯನ್ ಡಾಲರ್ ಮುಟ್ಟಿತ್ತು. ವರದಿ ಮಾಡುವ ವಾರದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಪ್ತಾಹಿಕ ಮಾಹಿತಿಯ ಪ್ರಕಾರ, ಒಟ್ಟಾರೆ ಮೀಸಲುಗಳ ಪ್ರಮುಖ ಭಾಗವಾದ ವಿದೇಶಿ ಕರೆನ್ಸಿ ಸ್ವತ್ತುಗಳ (ಎಫ್‌ಸಿಎ) ಕುಸಿತದಿಂದಾಗಿ ಮೀಸಲು ಕಡಿಮೆಯಾಗಿದೆ. ಎಫ್ಸಿಎಗಳು 3.365 ಬಿಲಿಯನ್ ಡಾಲರ್ ಇಳಿಕೆಯಾಗಿ, 573.009 ಬಿಲಿಯನ್ ಡಾಲರ್‌ಗೆ ಇಳಿದಿದೆ.
ಡಾಲರ್ ಪರಿಭಾಷೆಯಲ್ಲಿ ಹೇಳುವುದಾದರೆ, ವಿದೇಶಿ ಕರೆನ್ಸಿ ಸ್ವತ್ತುಗಳು ಅಂದರೆ ವಿದೇಶೀ ವಿನಿಮಯ ಮೀಸಲುಗಳಲ್ಲಿ ಇರುವ ಯೂರೋ, ಪೌಂಡ್ ಮತ್ತು ಯೆನ್ನಂತಹ ಯುಎಸ್ ಡಾಲರ್ನಲ್ಲಿ ಅಲ್ಲದ ಯೂನಿಟ್ಗಳ ಏರಿಕೆ ಅಥವಾ ಸವಕಳಿಯ (ಡಿಪ್ರಿಸಿಯೇಷನ್) ಪರಿಣಾಮವನ್ನು ಒಳಗೊಂಡಿದೆ. ವರದಿ ವಾರದಲ್ಲಿ ಚಿನ್ನದ ನಿಕ್ಷೇಪಗಳು 913 ಮಿಲಿಯನ್ ಡಾಲರ್‌ನಿಂದ 37.249 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಾಗಿದೆ ಎಂದು ಡೇಟಾದಲ್ಲಿ ತೋರಿಸಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಿಶೇಷ ಡ್ರಾಯಿಂಗ್ ಹಕ್ಕುಗಳು (ಎಸ್‌ಡಿಆರ್) 3 ಮಿಲಿಯನ್ ಇಳಿಕೆಯಾಗಿ 1.541 ಬಿಲಿಯನ್ ಡಾಲರ್ ಆಗಿದೆ.
ವಿಶೇಷ ಡ್ರಾಯಿಂಗ್ ರೈಟ್ಸ್ (SDR) ಎಂಬುದು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 1969ರಲ್ಲಿ ಸೃಷ್ಟಿಸಿದ ಅಂತರಾಷ್ಟ್ರೀಯ ವಿಧದ ಹಣದ ಮೀಸಲು ಕರೆನ್ಸಿಯನ್ನು ತಿಳಿಸುತ್ತದೆ. ಇದು ಸದಸ್ಯ ರಾಷ್ಟ್ರಗಳ ಅಸ್ತಿತ್ವದಲ್ಲಿರುವ ಹಣದ ಮೀಸಲಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ದುಡ್ಡು ಕೊಡಲು ಐಎಂಎಫ್ ನಕಾರ, ರಿಸರ್ವ್ ಬ್ಯಾಂಕ್ ಹಣ ಅಮೆರಿಕಾ ಪಾಲು; ತಾಲಿಬಾನಿಗಳ ಆದಾಯ ಏನು?
(SDR Allocation Of 17.86 Billion USD Made To India By IMF Said By Reserve Bank Of India)