ಅಫ್ಘಾನಿಸ್ತಾನಕ್ಕೆ ದುಡ್ಡು ಕೊಡಲು ಐಎಂಎಫ್ ನಕಾರ, ರಿಸರ್ವ್ ಬ್ಯಾಂಕ್ ಹಣ ಅಮೆರಿಕಾ ಪಾಲು; ತಾಲಿಬಾನಿಗಳ ಆದಾಯ ಏನು?
ಅಫ್ಘನ್ ರಿಸರ್ವ್ ಬ್ಯಾಂಕ್ನ ಹಣವೆಲ್ಲಾ ಅಮೆರಿಕಾದಲ್ಲಿ ಜಪ್ತಿಯಾಗಿದ್ದರೆ, ಇತ್ತ ಐಎಂಎಫ್ ಕೂಡ ಅಫ್ಘಾನಿಸ್ತಾನಕ್ಕೆ ಹಣ ಕೊಡಲು ನಿರಾಕರಿಸಿದೆ. ಹೀಗಾಗಿ ಹಣ ಇಲ್ಲದೇ ತಾಲಿಬಾನ್ ಹಾಗೂ ಅಫ್ಘಾನಿಸ್ತಾನದಲ್ಲೇ ಉಳಿದ ಜನರು ಕಂಗಾಲಾಗಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಈಗ ಎಲ್ಲೆಲ್ಲೂ ಭಯ, ಭೀತಿ, ಆತಂಕದ ವಾತಾವರಣ ಇದೆ. ತಾಲಿಬಾನ್ ಉಗ್ರಗಾಮಿಗಳು ನಾವು ಬದಲಾಗಿದ್ದೇವೆ, ಉದಾರವಾದಿ ಆಳ್ವಿಕೆ ನೀಡುತ್ತೇವೆ ಎಂದು ಹೇಳುತ್ತಲೇ ರಾಕ್ಷಸ ರೂಪ ಪ್ರದರ್ಶಿಸಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲೇ ಅಫ್ಘಾನಿಸ್ತಾನದ ಜನರಿಗೆ ಹಾಗೂ ತಾಲಿಬಾನಿಗಳಿಗೂ (Taliban) ಹಣಕಾಸಿನ ಸಂಕಷ್ಟ ಎದುರಾಗಿದೆ. ಅಫ್ಘನ್ ರಿಸರ್ವ್ ಬ್ಯಾಂಕ್ನ ಹಣವೆಲ್ಲಾ ಅಮೆರಿಕಾದಲ್ಲಿ (America) ಜಪ್ತಿಯಾಗಿದ್ದರೆ, ಇತ್ತ ಐಎಂಎಫ್ (IMF) ಕೂಡ ಅಫ್ಘಾನಿಸ್ತಾನಕ್ಕೆ (Afghanistan) ಹಣ ಕೊಡಲು ನಿರಾಕರಿಸಿದೆ. ಹೀಗಾಗಿ ಹಣ ಇಲ್ಲದೇ ತಾಲಿಬಾನ್ ಹಾಗೂ ಅಫ್ಘಾನಿಸ್ತಾನದಲ್ಲೇ ಉಳಿದ ಜನರು ಕಂಗಾಲಾಗಿದ್ದಾರೆ.
ಈ ಕಾರಣಗಳಿಂದ ಗಾಂಧಾರ ದೇಶ ಅಫ್ಘಾನಿಸ್ತಾನಕ್ಕೆ ಬಿಕ್ಕಟ್ಟಿನ ಮೇಲೆ ಬಿಕ್ಕಟ್ಟು ಎದುರಾಗುತ್ತಿದೆ. ಆಶ್ರಫ್ ಘನಿ ಸರ್ಕಾರ ಪತನವಾಗಿ ತಾಲಿಬಾನ್ ಸಂಘಟನೆ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಮೇಲೆ ಜನರು ವಿಪರೀತ ಸಂಕಷ್ಟ ಎದುರಿಸುತ್ತಿದ್ದಾರೆ. ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ನಿರ್ದಯವಾಗಿ ತಾಲಿಬಾನ್ ಉಗ್ರರು ಹತ್ಯೆ ಮಾಡುತ್ತಿರುವುದು ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಫ್ಘಾನಿಸ್ತಾನದ ಬಡಗೀಲ್ ಪ್ರಾಂತ್ಯದ ಪೊಲೀಸ್ ಇಲಾಖೆ ಮುಖ್ಯಸ್ಥ ಹಾಜಿ ಮುಲ್ಲಾನ ಕೈ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಲಾಗಿದ್ದು, ಹಾಜಿ ಮುಲ್ಲಾ ಸಾವಿನ ಬಳಿಕ ಆತನ ಮೃತ ದೇಹದ ಮೇಲೂ ಗುಂಡಿನ ಸುರಿಮಳೆಗೈದಿದ್ದಾರೆ. ಇದು ತಾಲಿಬಾನ್ ಉಗ್ರರ ಕ್ರೂರತೆಗೆ ಹಿಡಿದ ಕೈಗನ್ನಡಿ.
ಈಗಾಗಲೇ ನಾಲ್ವರು ಅಪ್ಘನ್ ಮಿಲಿಟರಿ ಕಮ್ಯಾಂಡರ್ ಗಳನ್ನು ತಾಲಿಬಾನ್ ಹತ್ಯೆ ಮಾಡಿದೆ. ಏರ್ ಪೋರ್ಟ್ ಬಳಿ ಮಹಿಳೆಯರು, ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದೆ. ಅಫ್ಘಾನಿಸ್ತಾನದ ಧ್ವಜ ಹಿಡಿದವರನ್ನು ಹತ್ಯೆ ಮಾಡಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಈಗ ಮುಕ್ತ ಪತ್ರಿಕಾ ಸ್ವಾತಂತ್ರ್ಯ ಕೂಡ ಇಲ್ಲ. ಕೆಲ ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಆಮೆರಿಕಾ, ನ್ಯಾಟೋ ಪಡೆಗಳಿಗೆ ಸಹಾಯ ಮಾಡಿದವರನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ. ತಾಲಿಬಾನ್ ಈಗ ತನ್ನ ವಿರುದ್ಧ ಮಾಹಿತಿ ನೀಡಿದವರ ಮೇಲೆ ಪ್ರತೀಕಾರದಿಂದ ಹತ್ಯೆ ಮಾಡುತ್ತಿದೆ. ಕಳೆದ ಭಾನುವಾರ ಅಫ್ಘನ್ ಸೈನಿಕರು, ಜನರಿಗೆ ಕ್ಷಮಾದಾನ ನೀಡಿದ್ದೇವೆ ಎಂದಿತ್ತು. ಆದರೆ ಈಗ ಅದಕ್ಕೆ ವಿರುದ್ಧವಾಗಿ ವರ್ತಿಸಿ ತನ್ನ ವಿರುದ್ಧ ಇರುವವರನ್ನು ಹತ್ಯೆ ಮಾಡುತ್ತಿದೆ. ತಾಲಿಬಾನ್ ಉಗ್ರರ ಮಾತು ಮತ್ತು ಕೃತಿಗೂ ಅಜಗಜಾಂತರ ಇದೆ ಎಂದು ಸಾಬೀತಾಗುತ್ತಿದೆ. ಇದರಿಂದಾಗಿ ತಮ್ಮನ್ನು ರಕ್ಷಿಸುವಂತೆ ಅಫ್ಘನ್ ಜನರು ಬ್ರಿಟನ್, ಕೆನಡಾಗೆ ಮನವಿ ಮಾಡುತ್ತಿದ್ದಾರೆ. ಹಾಳೆಗಳಲ್ಲಿ ತಮ್ಮ ವಿವರ ಬರೆದು ಬ್ರಿಟನ್, ಕೆನಡಾ ರಾಯಭಾರ ಕಚೇರಿಗೆ ಎಸೆದಿದ್ದಾರೆ.
ಇನ್ನೊಂದೆಡೆ ಮಹಿಳಾ ನ್ಯೂಸ್ ಆ್ಯಂಕರ್ ಶಬನಂ ದ್ವಾರನ್ಗೆ ನ್ಯೂಸ್ ಚಾನಲ್ ಉದ್ಯೋಗಕ್ಕೆ ಬಾರದಂತೆ ತಾಲಿಬಾನ್ ಸೂಚಿಸಿದೆ. ಇದರ ಮಧ್ಯೆಯೇ ಅಫ್ಘಾನಿಸ್ತಾನ ಸೇನೆ ಹಾಗೂ ಅಮೆರಿಕಾ ಸೇನೆಗೆ ಸೇರಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ತಾಲಿಬಾನ್ ವಶವಾಗಿವೆ. ಟೆಂಪೋವೊಂದರಲ್ಲಿ ಭಾರೀ ಪ್ರಮಾಣದ ಬಂದೂಕುಗಳನ್ನು ತುಂಬಿಕೊಂಡು ತಾಲಿಬಾನ್ ಉಗ್ರರು ಹೋಗುತ್ತಿರುವ ವಿಡಿಯೋ ಬಿಡುಗಡೆ ಆಗಿದೆ. ಮತ್ತೊಂದೆಡೆ ಕಾಬೂಲ್ನಲ್ಲಿ ತಾಲಿಬಾನ್ ಉಗ್ರರು ಇಂದು ಬಿಳಿಬಟ್ಟೆ ಧರಿಸಿ, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ, ಬಂದೂಕು ಹಿಡಿದು ಮೆರವಣಿಗೆ ನಡೆಸಿದ್ದಾರೆ. ಕಳೆದ ಭಾನುವಾರ ಕಾಬೂಲ್ ವಶಪಡಿಸಿಕೊಂಡ ಬಳಿಕ ಇಂದು ಮೊದಲ ಶುಕ್ರವಾರ ಆಗಿದ್ದರಿಂದ ಈ ರೀತಿ ಮಾರ್ಚ್ ಫಾಸ್ಟ್ ನಡೆಸಿದ್ದಾರೆ.
ತಾಲಿಬಾನಿಗಳಿಗೆ ಹಣ ಕೊಡಲ್ಲ ಎಂದ ಐಎಂಎಫ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳ ಸರ್ಕಾರ ರಚನೆಯಾಗಿಲ್ಲ. ಅಫ್ಘಾನಿಸ್ತಾನದ ರಿಸರ್ವ್ ಬ್ಯಾಂಕ್ ಆದ ದಿ ಅಫ್ಘಾನಿಸ್ತಾನ ಬ್ಯಾಂಕ್ನ ಹಣವೆಲ್ಲಾ ಅಮೆರಿಕಾದ ಬ್ಯಾಂಕ್ಗಳಲ್ಲಿ ಜಪ್ತಿಯಾಗಿದೆ. ಅಫ್ಘಾನಿಸ್ತಾನದ ರಿಸರ್ವ್ ಬ್ಯಾಂಕ್ನ 9.4 ಬಿಲಿಯನ್ ಡಾಲರ್ ಹಣದಲ್ಲಿ ಬಹುಪಾಲು ಹಣ ಅಮೆರಿಕಾದ ನ್ಯೂಯಾರ್ಕ್ ಬ್ಯಾಂಕ್ಗಳಲ್ಲಿದ್ದು, ಆ ಹಣವನ್ನೆಲ್ಲಾ ಅಮೆರಿಕಾ ಜಪ್ತಿ ಮಾಡಿದೆ. ಇತ್ತ ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಅಫ್ಘಾನಿಸ್ತಾನಕ್ಕೆ 650 ಮಿಲಿಯನ್ ಡಾಲರ್ ಹಣ ನೀಡಲು ಈ ಮೊದಲು ಅನುಮೋದನೆ ನೀಡಿತ್ತು. ಅದರಂತೆ ಆಗಸ್ಟ್ 23 ರಂದು 340 ಮಿಲಿಯನ್ ಡಾಲರ್ ಹಣ ಐಎಂಎಫ್ನಿಂದ ಅಫ್ಘಾನಿಸ್ತಾನಕ್ಕೆ ರವಾನೆಯಾಗಬೇಕಾಗಿತ್ತು. ಆದರೆ ಕಳೆದ ಭಾನುವಾರದಿಂದ ಅಫ್ಘಾನಿಸ್ತಾನದ ಸ್ಥಿತಿ ಬದಲಾಗಿದ್ದರಿಂದ ಅಲ್ಲಿಗೆ ಹಣ ನೀಡದೇ ಇರಲು ಐಎಂಎಫ್ ನಿರ್ಧರಿಸಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡುವ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಲ್ಲೇ ಸ್ಪಷ್ಟತೆ ಇಲ್ಲ. ಹೀಗಾಗಿ ಅಫ್ಘಾನಿಸ್ತಾನಕ್ಕೆ ಹಣ ಅಥವಾ ಇನ್ನಿತರ ಸಂಪನ್ಮೂಲಗಳನ್ನು ಐಎಂಎಫ್ ನೀಡಲ್ಲ ಎಂದು ಐಎಂಎಫ್ ವಕ್ತಾರರು ಹೇಳಿದ್ದಾರೆ. ಈಗ ತಾಲಿಬಾನಿಗಳು ಕೈಗೆ ಹಣ ಸಿಗದೇ ಕಂಗಾಲಾಗಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಜರ್ಮನ್, ಭಾರತ ಸೇರಿದಂತೆ ಪ್ರಮುಖ ದೇಶಗಳು ತಾಲಿಬಾನ್ಗೆ ನೆರವು ನೀಡಲ್ಲ. ಪಾಕಿಸ್ತಾನ ಮೊದಲೇ ಆರ್ಥಿಕವಾಗಿ ದಿವಾಳಿಯತ್ತ ಹೋಗುತ್ತಿರುವ ರಾಷ್ಟ್ರ. ಹೀಗಾಗಿ ಈಗ ತಾಲಿಬಾನ್ ಚೀನಾದತ್ತ ಹಣಕ್ಕಾಗಿ ಎದುರು ನೋಡುತ್ತಿದೆ. ಅಫ್ಘಾನಿಸ್ತಾನದ ಅಭಿವೃದ್ದಿಗೆ ಚೀನಾ ಕೊಡುಗೆ ನೀಡಬಹುದು ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಹೀನ್ ಹೇಳಿದ್ದಾನೆ.
ಇದರಿಂದಾಗಿ ದಿ ಅಫ್ಘಾನಿಸ್ತಾನ ಬ್ಯಾಂಕ್ ಗರ್ವನರ್ ಅಜ್ಮಲ್ ಅಹ್ಮದಿ ಹೇಳುವ ಪ್ರಕಾರ, ತಾಲಿಬಾನಿಗಳು ಕನಿಷ್ಠ ವೆಚ್ಚ ಮಾಡಬೇಕು. ಅಫ್ಘಾನಿಸ್ತಾನ ಕರೆನ್ಸಿಯ ಮೌಲ್ಯ ಡಾಲರ್ ಎದುರು ಕುಸಿಯಲಿದೆ. ದೇಶದಲ್ಲಿ ಹಣದುಬ್ಬರ ಏರಿಕೆಯಾಗಲಿದೆ. ಇದರಿಂದ ಬಡವರಿಗೆ ತೊಂದರೆಯಾಗಲಿದ್ದು, ಆಹಾರ ಸಾಮಗ್ರಿ ಖರೀದಿಗೆ ಜನರು ಪರದಾಡಬೇಕಾಗುತ್ತೆ ಎಂದಿದ್ದಾರೆ. ತಾಲಿಬಾನಿಗಳ ಕೈಗೆ ಅಂತಾರಾಷ್ಟ್ರೀಯ ಖಜಾನೆಯಲ್ಲಿರುವ ಹಣದ ಪೈಕಿ ಶೇ.0.1 ರಷ್ಟು ಮಾತ್ರ ಹಣ ಸಿಗಬಹುದು. ಸಾಲದ್ದಕ್ಕೆ ಅಫ್ಘಾನಿಸ್ತಾನವು ಅಪೀಮು, ಹೆರಾಯಿನ್ ಬೆಳೆದು ಕಳ್ಳಸಾಗಣೆ ಮಾಡುವುದಕ್ಕೆ ಕುಖ್ಯಾತ ಕೂಡಾ. ಅಂತಹದ್ದರಲ್ಲೂ ಅಫ್ಘಾನಿಸ್ತಾನವನ್ನು ಡ್ರಗ್ಸ್ ದೇಶ ಮಾಡಲ್ಲ ಎಂದು ತಾಲಿಬಾನ್ ನಾಯಕರು ಹೇಳಿದ್ದರು. ಆದರೆ, ಈಗ ಹಣವಿಲ್ಲದೇ, ಮತ್ತೆ ಅಪೀಮು, ಹೆರಾಯಿನ್ ಬೆಳೆದು ಹಣ ಗಳಿಸಬೇಕು. ಇಲ್ಲವೇ ತಮ್ಮ ಬಳಿ ಇರುವ ಅಫ್ಘನ್ ಸೇನೆ, ಆಮೆರಿಕಾ ಸೇನೆಯ ಶಸ್ತ್ರಾಸ್ತ್ರಗಳನ್ನು ಬೇರೆಯವರಿಗೆ ಮಾರಿ ಹಣ ಗಳಿಸಬೇಕು. ಅಫ್ಘಾನಿಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಬಳಸುವ ಲಿಥಿಯಂ ಹೇರಳ ಪ್ರಮಾಣದಲ್ಲಿದೆ. ಇದನ್ನು ಚೀನಾ ಅಥವಾ ಬೇರೆ ದೇಶಗಳಿಗೆ ನೀಡಿದರೆ ಭಾರೀ ಪ್ರಮಾಣದ ಹಣ ಸಿಗಲಿದೆ. 1 ಟ್ರಿಲಿಯನ್ ಡಾಲರ್ ಅಂದರೆ 74 ಲಕ್ಷ ಕೋಟಿ ರೂಪಾಯಿ ಮೌಲ್ಯದಷ್ಟು ಲಿಥಿಯಂ ಅಫ್ಘಾನಿಸ್ತಾನದಲ್ಲಿದೆ. ಇದನ್ನು ಈಗ ತಾಲಿಬಾನ್ ಹೇಗೆ ಬಳಸಿಕೊಳ್ಳುತ್ತೆ ಎನ್ನುವುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ‘ನೀನು ಮಹಿಳೆ, ಮನೆಗೆ ಹೋಗು’ ಎಂದರು; ತಾಲಿಬಾನ್ ಆಡಳಿತದ ಕರಾಳ ಅನುಭವ ಬಿಚ್ಚಿಟ್ಟ ಅಫ್ಘಾನಿಸ್ತಾನದ ಟಿವಿ ನಿರೂಪಕಿ
ಅಫ್ಘಾನಿಸ್ತಾನಕ್ಕಾಗಿ ಹೋರಾಡುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯಲ್ಲ; ಭಾರತದ ಕವಿಯ ವಿವಾದಾತ್ಮಕ ಹೇಳಿಕೆ
Published On - 6:06 pm, Fri, 20 August 21