Stock Market New Margin Rules: ಷೇರು ಮಾರುಕಟ್ಟೆಯಲ್ಲಿ ಸೆ. 1ರಿಂದ ಹೊಸ ಮಾರ್ಜಿನ್ ನಿಯಮ; ಟ್ರೇಡರ್ಸ್​ಗಳ ಆಕ್ರೋಶ

| Updated By: Srinivas Mata

Updated on: Sep 02, 2021 | 11:47 AM

ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯಿಂದ ಹೊಸ ಮಾರ್ಜಿನ್ ನಿಯಮ ಪರಿಚಯಿಸಲಾಗಿದೆ. ಈ ಬಗ್ಗೆ ಟ್ರೇಡರ್​ಗಳಿಂದ ಭಾರೀ ಬೇಸರ ವ್ಯಕ್ತವಾಗಿದೆ. ಏನಿದು ಹೊಸ ನಿಯಮ ಎಂಬ ಬಗ್ಗೆ ವಿವರ ಇಲ್ಲಿದೆ.

Stock Market New Margin Rules: ಷೇರು ಮಾರುಕಟ್ಟೆಯಲ್ಲಿ ಸೆ. 1ರಿಂದ ಹೊಸ ಮಾರ್ಜಿನ್ ನಿಯಮ; ಟ್ರೇಡರ್ಸ್​ಗಳ ಆಕ್ರೋಶ
ಸೆಬಿ (ಸಾಂದರ್ಭಿಕ ಚಿತ್ರ)
Follow us on

ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯೂರಿಟೀಸ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 2021ರ ಸೆಪ್ಟೆಂಬರ್ 1ನೇ ತಾರೀಕಿನಿಂದ (ಬುಧವಾರ) ಹೊಸ ನಿಯಮ ಜಾರಿಗೆ ಬಂದಿದ್ದು, ಈ ಬಗ್ಗೆ ಟ್ವಿಟ್ಟರ್​ನಲ್ಲಿ ಟ್ರೇಡರ್​ಗಳು ಭಾರೀ ಸಿಟ್ಟು ಹೊರಹಾಕಿದ್ದಾರೆ. #SEBIAgainstRetailers ಎಂಬ ಹ್ಯಾಷ್​ಟ್ಯಾಗ್​ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದು, ಅದೀಗ ಟ್ರೆಂಡಿಂಗ್ ಆಗಿದೆ. ಹಾಗಿದ್ದರೆ ಟ್ರೇಡರ್​ಗಳ ಕೋಪಕ್ಕೆ ಕಾರಣವಾದ ಸೆಬಿಯ ಹೊಸ ನಿಯಮ ಯಾವುದು ಎಂಬುದರ ವಿವರ ಈ ಲೇಖನದಲ್ಲಿದೆ. ಹೊಸ ಮಾರ್ಜಿನ್ ನಿಯಮದ ಪ್ರಕಾರ, ಫ್ಯೂಚರ್​ ಅಂಡ್ ಆಪ್ಷನ್ಸ್​ನಲ್ಲಿ ವಹಿವಾಟು ನಡೆಸುವವರಿಗೆ ಆ ಸ್ಟಾಕ್​ನ ಒಟ್ಟು ಮೊತ್ತದ ಪೂರ್ಣ ಪ್ರಮಾಣದ ಮಾರ್ಜಿನ್, ಅಂದರೆ ಶೇ 100ರಷ್ಟು ಹಣ ಬ್ಯಾಂಕ್ ಖಾತೆಯಲ್ಲಿ ಇರಲೇಬೇಕು. ಇದು ವ್ಯಾಲ್ಯೂ ಅಟ್ ರಿಸ್ಕ್ (VaR) ಎಂದು ಎಕ್ಸ್​ಚೇಂಜ್​ನಿಂದ ಎಷ್ಟು ಮೊತ್ತವನ್ನು ನಿಗದಿ ಮಾಡಲಾಗುತ್ತದೋ ಆಯಾ ಸ್ಟಾಕ್​ಗೆ ಅಷ್ಟು ಮೊತ್ತ ಇರಬೇಕಾಗುತ್ತದೆ. VaR ಮಾರ್ಜಿನ್ ಪ್ರತಿ ಸ್ಟಾಕ್​ಗೂ ಬೇರೆ ಬೇರೆ ಇರುತ್ತದೆ ಮತ್ತು ಪೆನ್ನಿ ಸ್ಟಾಕ್​ ಎಂದು ಕರೆಸಿಕೊಳ್ಳುವ ಕಡಿಮೆ ಬೆಲೆಯದ್ದಕ್ಕೆ ಹೆಚ್ಚಿನ ಮೊತ್ತ ಅಗತ್ಯ ಇರುತ್ತದೆ. ಇಲ್ಲಿಯ ತನಕ, ಅಂದರೆ ಆಗಸ್ಟ್​ 31ರ ತನಕ ಒಟ್ಟಾರೆ ಮಾರ್ಜಿನ್​ನ ಶೇ 75ರಷ್ಟು ಇದ್ದರೆ ಸಾಕಿತ್ತು.

ಮಾರ್ಜಿನ್​ ಅಂದರೆ, ಒಂದು ಸ್ಟಾಕ್​ನ ಖರೀದಿಗೆ ಇರಲೇಬೇಕಾದ ನಿರ್ದಿಷ್ಟ ಮೊತ್ತ. ಈಗ ಒಂದು ಉದಾಹರಣೆ ತೆಗೆದುಕೊಳ್ಳಿ. ರಿಲಯನ್ಸ್ ಇಂಡಸ್ಟ್ರೀಸ್​ನ VaR ಮಾರ್ಜಿನ್​ ಶೇ 16.11 ಮತ್ತು ರಿಲಯನ್ಸ್​ ಪವರ್​ಗೆ ಶೇ 100 (ಮಾರ್ಜಿನ್ ಯಾಕೆ ಜಾಸ್ತಿ ಬೇಕೆಂದರೆ ಇದನ್ನು ಪೆನ್ನಿ ಸ್ಟಾಕ್ ಎಂದು ಪರಿಗಣಿಸಲಾಗುತ್ತದೆ ಹಾಗೂ ಇದರಲ್ಲಿ ಟ್ರೇಡರ್​ಗಳಿಗೆ ಅಪಾಯದ ಪ್ರಮಾಣ ಹೆಚ್ಚು). ಇದೀಗ ವಹಿವಾಟಿಗೂ ಮೊದಲೇ ಸ್ಟಾಕ್​ ಬ್ರೋಕರ್​ ಆದವರು ಸಂಪೂರ್ಣ ಮಾರ್ಜಿನ್ ಮೊತ್ತವು ತಮ್ಮ ಕ್ಲೈಂಟ್​ಗಳ ಬಳಿ ಇದೆ ಎಂಬುದನ್ನು ಖಾತ್ರಿಪಡಿಸಬೇಕು. ಅಥವಾ ದಂಡವನ್ನು ವಿಧಿಸಲಾಗುತ್ತದೆ. ಇದಕ್ಕೂ ಮುನ್ನ ಶೇ 75ರಷ್ಟು ಮಾರ್ಜಿನ್ ಇದ್ದರೂ ಸಾಕಿತ್ತು. ಹೊಸದಾದ ಈ ಮಾರ್ಜಿನ್ ನಿಯಮಾವಳಿ ಬಗ್ಗೆ ಟ್ರೇಡರ್​ಗಳು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್​ ಟ್ವಿಟ್ಟರ್​ನಲ್ಲಿ #notradingday ಹ್ಯಾಶ್​ಟ್ಯಾಗ್​ನಲ್ಲಿ ಟ್ರೆಂಡ್ ಆಗಿತ್ತು.

ಈಗಿನ ಹೊಸ ನಿಯಮದಿಂದ ಸ್ಟಾಕ್​ ಟ್ರೇಡರ್ಸ್​ ಮೇಲೆ ಪರಿಣಾಮ ಆಗುತ್ತದೆ. ಏಕೆಂದರೆ ಇಂಟ್ರಾಡೇ ಮತ್ತು ಫ್ಯೂಚರ್ಸ್​ ಮಾರ್ಕೆಟ್ಸ್​ಗೆ ಹೆಚ್ಚಿನ ಹಣ ಬೇಕಾಗುತ್ತದೆ. ಟ್ರೇಡಿಂಗ್ ಸೆಷನ್ ಅವಧಿಯಲ್ಲಿ ಮಾರ್ಜಿನ್​ ಮೊತ್ತವನ್ನು ನಿರ್ವಹಿಸದಿದ್ದಲ್ಲಿ ದಂಡ ಬೀಳುತ್ತದೆ. ಸೆಬಿಯ ಈ ನಿಯಮದ ಹಿಂದಿನ ಉದ್ದೇಶ ಏನೆಂದರೆ, ಟ್ರೇಡರ್ಸ್​ಗಳನ್ನು ಹತೋಟಿಯಲ್ಲಿ ಇಡುವುದು ಹಾಗೂ ಅಪಾಯದ ಪ್ರಮಾಣ ಕಡಿಮೆ ಮಾಡುವುದಾಗಿದೆ. ಈ ವರೆಗೆ ಹೂಡಿಕೆದಾರರು ತಮ್ಮ ಮಾರ್ಜಿನ್​ ಮೊತ್ತಕ್ಕಿಂತ ಬಹಳ ಹೆಚ್ಚಿನ ಅಪಾಯ ಮೈ ಮೇಲೆ ಎಳೆದುಕೊಳ್ಳುವುದನ್ನು ನಿಲ್ಲಿಸಲು ಈ ನಿಯಮದಿಂದ ಸಹಾಯ ಆಗಲಿದೆ.

ಇದನ್ನೂ ಓದಿ: ಅಮೆರಿಕದ ಗೂಗಲ್, ಆಪಲ್​ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?

(SEBI New Margin Rules Introduced From September 1st 2021 Traders Angry Against Regulator)