ನವದೆಹಲಿ, ಡಿಸೆಂಬರ್ 14: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರ (US Fed Rates) ಯಥಾಸ್ಥಿತಿ ಮುಂದುವರಿಸುವ ನಿರ್ಧಾರ ಮಾಡಿರುವುದು, ಹಾಗೂ ಮುಂದಿನ ವರ್ಷ ಮೂರು ಬಾರಿ ಬಡ್ಡಿದರ ಇಳಿಕೆ ಮಾಡುವ ಸುಳಿವು ನೀಡಿರುವುದು ವಿಶ್ವಾದ್ಯಂತ ಸಾಕಷ್ಟು ಮಾರುಕಟ್ಟೆಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ಪರಿಣಾಮವಾಗಿ ಭಾರತದ ಷೇರುಮಾರುಕಟ್ಟೆ ಗರಿಗೆದರಿ ನಿಂತಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ವಿವಿಧ ಸೂಚ್ಯಂಕಗಳು (sensex and nifty) ಹೆಚ್ಚಳ ಕಂಡಿವೆ. ಇಂದು ಗುರುವಾರ (ಡಿ. 14) ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿವೆ.
ಬಿಎಸ್ಇ ಸೆನ್ಸೆಕ್ಸ್ ಗುರುವಾರ ಬೆಳಗಿನ ವಹಿವಾಟಿನಲ್ಲಿ 796 ಅಂಕಗಳಷ್ಟು ಹೆಚ್ಚಳ ಕಂಡು, 70,381.24 ಮಟ್ಟ ಮುಟ್ಟಿದೆ. ಇದು ಸೆನ್ಸೆಕ್ಸ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.
ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ 50 ಷೇರುಗಳ ನಿಫ್ಟಿ ಸೂಚ್ಯಂಕ ಕೂಡ ಗುರುವಾರ 222.1 ಅಂಕಗಳಷ್ಟು ಮೇಲೇರಿದೆ. ಒಟ್ಟು 21,148.45 ಅಂಕಗಳ ಮಟ್ಟ ತಲುಪಿತ್ತು. ಇದೂ ಕೂಡ ನಿಫ್ಟಿ ಸೂಚ್ಯಂಕದ ಈವರೆಗಿನ ಗರಿಷ್ಠ ಎತ್ತರ ಎನಿಸಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಯಥಾಸ್ಥಿತಿ; ಮುಂದಿನ ವರ್ಷ ದರ ಇಳಿಸುವ ಸುಳಿವು ನೀಡಿದ ಫೆಡರಲ್ ರಿಸರ್ವ್
ಭಾರತದ ಷೇರು ಮಾರುಕಟ್ಟೆಗಳು ಮಾತ್ರವಲ್ಲ, ಏಷ್ಯಾದ ಇತರ ಪೇಟೆಗಳೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ. ದಕ್ಷಿಣ ಕೊರಿಯಾದ ಸೋಲ್, ಚೀನಾದ ಶಾಂಘೈ ಹಾಗೂ ಹಾಂಕಾಂಗ್ ಷೇರು ಮಾರುಕಟ್ಟೆಗಳಲ್ಲಿ ಟ್ರೇಡಿಂಗ್ ಹೆಚ್ಚಿದೆ. ಆದರೆ, ಜಪಾನ್ ಟೋಕಿಯೋ ಪೇಟೆಯಲ್ಲಿ ಮಾತ್ರ ಇಳಿಕೆ ಆಗಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ನ ಛೇರ್ಮನ್ ಜಿರೊಮ್ ಪೋವೆಲ್ ಇಂದು ಗುರುವಾರ ಬಡ್ಡಿದರ ಯಥಾಸ್ಥಿತಿ ಮುಂದುವರಿಸುವ ನಿರ್ಧಾರ ಪ್ರಕಟಿಸಿದರು. ಸದ್ಯ ಅಮೆರಿಕದಲ್ಲಿ ಶೇ. 5.25ರಿಂದ ಶೇ. 5.50ರಷ್ಟು ಬಡ್ಡಿದರ ಇದೆ. ಸತತ ಮೂರು ಬಾರಿಯಿಂದಲೂ ಇದೇ ಬಡ್ಡಿದರ ಇದೆ. ಕಳೆದ ವರ್ಷ ಶೇ. 7ಕ್ಕಿಂತಲೂ ಹೆಚ್ಚಿದ್ದ ಹಣದುಬ್ಬರವನ್ನು ಇಳಿಸಲು ಸೆಂಟ್ರಲ್ ಬ್ಯಾಂಕ್ ಸತತವಾಗಿ ಬಡ್ಡಿದರ ಹೆಚ್ಚಿಸಿತ್ತು. ಹಣದುಬ್ಬರ ತಹಬದಿಗೆ ಬರುತ್ತಿರುವುದರಿಂದ ಬಡ್ಡಿ ಏರಿಕೆ ಕ್ರಮ ನಿಲ್ಲಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಫಾಕ್ಸ್ಕಾನ್ನ ಪ್ರಧಾನ ಕಾರ್ಯಕ್ಷೇತ್ರ ಕರ್ನಾಟಕವಾಗುತ್ತಾ? ಹೆಚ್ಚುವರಿ ಹೂಡಿಕೆ ಮಾಡುತ್ತಿದೆ ಐಫೋನ್ ತಯಾರಕ
ಅಷ್ಟೇ ಅಲ್ಲ, 2024ರಲ್ಲಿ ಮೂರು ಬಾರಿ ಬಡ್ಡಿದರ ಇಳಿಕೆ ಮಾಡುವ ಸುಳಿವನ್ನು ಪೋವೆಲ್ ನೀಡಿದ್ದಾರೆ. ಹಣದುಬ್ಬರ ಇಳಿಯುತ್ತಿರುವುದು, ಹಾಗು ಆರ್ಥಿಕತೆಯ ಬೆಳವಣಿಗೆ ಮಂದಗೊಂಡಿರುವುದು ಬಡ್ಡಿದರ ಇಳಿಕೆ ಸಾಧ್ಯತೆಯನ್ನು ಹೆಚ್ಚಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ