Closing Bell: ಸತತ ನಾಲ್ಕನೇ ಸೆಷನ್ ನೆಲ ಕಚ್ಚಿದ ಸೆನ್ಸೆಕ್ಸ್, ನಿಫ್ಟಿ; ಕರಗಿತು ಹೂಡಿಕೆದಾರರ 8 ಲಕ್ಷ ಕೋಟಿ ರೂಪಾಯಿ ಸಂಪತ್ತು

| Updated By: Srinivas Mata

Updated on: Jan 21, 2022 | 5:24 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ನಾಲ್ಕನೇ ಟ್ರೇಡಿಂಗ್ ಸೆಷನ್ ಇಳಿಕೆ ಆಗಿದೆ. ಹೂಡಿಕೆದಾರರ ಸಂಪತ್ತು 8 ಲಕ್ಷ ಕೋಟಿಯಷ್ಟು ಕರಗಿದೆ.

Closing Bell: ಸತತ ನಾಲ್ಕನೇ ಸೆಷನ್ ನೆಲ ಕಚ್ಚಿದ ಸೆನ್ಸೆಕ್ಸ್, ನಿಫ್ಟಿ; ಕರಗಿತು ಹೂಡಿಕೆದಾರರ 8 ಲಕ್ಷ ಕೋಟಿ ರೂಪಾಯಿ ಸಂಪತ್ತು
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಜನವರಿ 21ನೇ ತಾರೀಕಿನ ಶುಕ್ರವಾರದಂದು ಸತತ ನಾಲ್ಕನೇ ಸೆಷನ್ ಕೂಡ ಇಳಿಕೆ ದಾಖಲಿಸಿದೆ. ಈ ಮೂಲಕ ಈಕ್ವಿಟಿ ಹೂಡಿಕೆದಾರರ ಸಂಪತ್ತು (Investors Wealth) 8 ಲಕ್ಷ ಕೋಟಿ ರೂಪಾಯಿ ಕರಗಿಹೋಗಿದೆ. ಸೂಚ್ಯಂಕಗಳು ಹತ್ತಿರಹತ್ತಿರ ಶೇ 4ರಷ್ಟು ಇಳಿಕೆ ಕಂಡಿದೆ. ಶುಕ್ರವಾರದಂದು ಬಿಎಸ್​ಇ ಸೆನ್ಸೆಕ್ಸ್ 427 ಪಾಯಿಂಟ್ಸ್​ ಅಥವಾ ಶೇ 0.72ರಷ್ಟು ಕೆಳಗೆ ಇಳಿದು, 59,037 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿದಿದೆ. ಇನ್ನು ಎಸ್​ಎಸ್​ಇ ನಿಫ್ಟಿ 139.80 ಅಥವಾ ಶೇ 0.79ರಷ್ಟು ಕುಸಿದು, 17,617.20 ಪಾಯಿಂಟ್ಸ್​​ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ನಿಫ್ಟಿ ಬ್ಯಾಂಕ್ ಸೂಚ್ಯಂಕವು 276.50 ಪಾಯಿಂಟ್ಸ್ ಅಥವಾ ಶೇ 0.73ರಷ್ಟು ನೆಲ ಕಚ್ಚಿ 37,574.30 ಪಾಯಿಂಟ್ಸ್​ನೊಂದಿಗೆ ವಾರಾಂತ್ಯದ ವಹಿವಾಟು ಕೊನೆಗೊಳಿಸಿದೆ. ನಿಫ್ಟಿ 50 ಸೂಚ್ಯಂಕದಲ್ಲಿ 15 ಸ್ಟಾಕ್ ಇಳಿಕೆಯಲ್ಲಿ ಕೊನೆಯಾದರೆ, 35 ಸ್ಟಾಕ್​ಗಳು ಗಳಿಕೆಯಲ್ಲಿ ಮುಗಿಸಿದವು.

ಇಂದಿನ ವಹಿವಾಟಿನಲ್ಲಿ ಒಟ್ಟಾರೆಯಾಗಿ ಬಿಎಸ್​ಇಯಲ್ಲಿ 2329 ಸ್ಟಾಕ್​ಗಳು ಇಳಿಕೆಯಲ್ಲಿ ದಿನ ಮುಗಿಸಿದರೆ, 1048 ಸ್ಟಾಕ್​ಗಳು ಏರಿಕೆಯನ್ನು ದಾಖಲಿಸಿದವು. ವಲಯವಾರು ಗಮನಿಸಿದಾಗ ನಿಫ್ಟಿ ಎಫ್​ಎಂಸಿಜಿ ಸೂಚ್ಯಂಕವನ್ನು ಏರಿಕೆ ದಾಖಲಿಸಿ, ಶೇ 0.36ರಷ್ಟು ಮೇಲೇರಿತು. ಮತ್ತೊಂದು ಕಡೆ, ನಿಫ್ಟಿ ಪಿಎಸ್​ಯು ಬ್ಯಾಂಕ್​ ಸೂಚ್ಯಂಕ ಶೇ 3ರಷ್ಟು ಇಳಿಕೆ ಕಂಡಿತು, ಇತರ ಎಲ್ಲ ಸೂಚ್ಯಂಕಗಳು ಶೇ 0.5ರಿಂದ ಶೇ 2.4ರಷ್ಟು ಜಾರಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಜಾಜ್ ಆಟೋ ಶೇ 3.36
ಹಿಂದೂಸ್ತಾನ್ ಯುನಿಲಿವರ್ ಶೇ 2.81
ಮಾರುತಿ ಸುಜುಕಿ ಶೇ 1.91
ಹೀರೋ ಮೋಟೋಕಾರ್ಪ್ ಶೇ 1.50
ನೆಸ್ಟ್ಲೆ ಶೇ 1.28

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಜಾಜ್ ಫಿನ್​ಸರ್ವ್ ಶೇ -5.35
ಟೆಕ್​ ಮಹೀಂದ್ರಾ ಶೇ -4.40
ಶ್ರೀ ಸಿಮೆಂಟ್ಸ್ ಶೇ -3.97
ಕೋಲ್​ ಇಂಡಿಯಾ ಶೇ -3.82
ಡಿವೀಸ್​ ಲ್ಯಾಬ್ಸ್ ಶೇ -3.47

ಇದನ್ನೂ ಓದಿ: PTC India Financial: ಸ್ವತಂತ್ರ ನಿರ್ದೇಶಕರ ರಾಜೀನಾಮೆ ನಂತರ ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಷೇರು ಶೇ 20ರಷ್ಟು ಕುಸಿತ