ನವದೆಹಲಿ, ಡಿಸೆಂಬರ್ 10: ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಅವರ ಅಧಿಕಾರಾವಧಿ ಇಂದು ಅಂತ್ಯಗೊಳ್ಳುತ್ತಿದೆ. 2018ರ ಡಿಸೆಂಬರ್ 12ರಂದು ಆರ್ಬಿಐನ 25ನೇ ಗವರ್ನರ್ ಆಗಿ ನೇಮಕವಾಗಿದ್ದ ದಾಸ್ ಅವರು ಆರು ಹಾಗು ಹೆಚ್ಚು ವರ್ಷ ಆಡಳಿತದಲ್ಲಿದ್ದ ಎರಡನೇ ವ್ಯಕ್ತಿ ಎನಿಸಿದ್ದಾರೆ. ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರು 26ನೇ ಗವರ್ನರ್ ಆಗಿ ನೇಮಕವಾಗಿದ್ದು ನಾಳೆ, ಬುಧವಾರ ಪದಗ್ರಹಣ ಮಾಡಲಿದ್ದಾರೆ.
ಇದೇ ವೇಳೆ, ಶಕ್ತಿಕಾಂತದಾಸ್ ಆರ್ಬಿಐ ಗವರ್ನರ್ ಆಗಿ ತಮ್ಮ ಕೊನೆಯ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ಸಣ್ಣದಾಗಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಚಿವ ದಿವಂಗತ ಅರುಣ್ ಜೇಟ್ಲಿ ಮೊದಲಾದವರಿಗೆ ದಾಸ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿವಿಧ ಆರ್ಥಿಕ ತಜ್ಞರು, ಉದ್ಯಮ ಸಂಘಟನೆಗಳು, ಸಹಕಾರಿ ಸಂಸ್ಥೆಗಳು ಮೊದಲಾದವುಗಳ ಸಹಕಾರಕ್ಕೂ ಧನ್ಯವಾದ ಹೇಳಿದ್ದಾರೆ. ಆರ್ಬಿಐಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.
‘ಇಡೀ ಟೀಮ್ ಆರ್ಬಿಐಗೆ ನನ್ನ ದೊಡ್ಡ ನಮನಗಳು. ಅಸಾಧಾರಣವಾದ ಕ್ಲಿಷ್ಟ ಕಾಲದಲ್ಲಿ ನಾವೆಲ್ಲರೂ ಒಟ್ಟಿಗೆ ಸಾಗಿದ್ದೇವೆ. ವಿಶ್ವಾಸ ಮತ್ತು ನಂಬುಗೆಯ ಸಂಸ್ಥೆಯಾಗಿ ಆರ್ಬಿಐ ಇನ್ನೂ ಎತ್ತರಕ್ಕೆ ಹೋಗಲಿ. ನಿಮ್ಮ ಪ್ರತಿಯೊಬ್ಬರಿಗೂ ನನ್ನ ಶುಭ ಹಾರೈಕೆಗಳು,’ ಎಂದು ಶಕ್ತಿಕಾಂತ ದಾಸ್ ತಮ್ಮ ಸರಣಿ ಎಕ್ಸ್ ಪೋಸ್ಟ್ಗಳಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಜಯ್ ಮಲ್ಹೋತ್ರಾ ಹೊಸ ಆರ್ಬಿಐ ಗವರ್ನರ್ ಆಗಿ ನೇಮಕ; ಶಕ್ತಿಕಾಂತ ದಾಸ್ ಅವಧಿ ಡಿ. 10ಕ್ಕೆ ಅಂತ್ಯ
ಹಣಕಾಸು ಸೆಕ್ಟರ್ ಹಾಗೂ ಆರ್ಥಿಕತೆಯ ಎಲ್ಲಾ ಭಾಗಿದಾರರು; ಉದ್ಯಮ ಸಂಘಟನೆಗಳು, ಕೃಷಿ ಸಂಘಟನೆಗಳು, ಸಹಕಾರಿ ಮತ್ತು ಸೇವಾ ವಲಯಗಳ ಭಾಗಿದಾರರ ಸಲಹೆಗಳಿಗೆ ನನ್ನ ವಂದನೆಗಳು ಎಂದು ಅವರು ಮತ್ತೊಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
A BIG thank you to the entire Team RBI. Together, we successfully navigated an exceptionally difficult period of unprecedented global shocks. May the RBI grow even taller as an institution of trust and credibility. My best wishes to each one of you. (5/5)
— Shaktikanta Das (@DasShaktikanta) December 10, 2024
ಶಕ್ತಿಕಾಂತ ದಾಸ್ ಅವರು ಕಳೆದ ವಾರವಷ್ಟೇ ತಮ್ಮ ಕೊನೆಯ ಎಂಪಿಸಿ ಕಮಿಟಿ ಸಭೆ ನಡೆಸಿದ್ದರು. ಒತ್ತಡಗಳ ನಡುವೆಯೂ ಅವರು ರಿಪೋದರ ಯಥಾಸ್ಥಿತಿ ಮುಂದುವರಿಸುವ ಕ್ಲಿಷ್ಟಕರ ನಿರ್ಧಾರ ತೆಗೆದುಕೊಂಡಿದ್ದರು. ಮುಂದಿನ ಎಂಪಿಸಿ ಸಭೆಯು ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಫೆಬ್ರುವರಿಯಲ್ಲಿ ನಡೆಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ