Share Market: ನಿಲ್ಲದ ಸಂಘರ್ಷ: ಮತ್ತೆ ಕುಸಿದ ಷೇರುಪೇಟೆ, ಚಿನ್ನದ ಬೆಲೆ ಹೆಚ್ಚಳ

ಸಂಕಷ್ಟ ಸಮಯದಲ್ಲಿ ಹೂಡಿಕೆದಾರರ ನೆಚ್ಚಿನ ಆಸರೆ ಎನಿಸಿರುವ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಹತ್ತು ಗ್ರಾಂ ಚಿನ್ನದ ಬೆಲೆ ಇದೀಗ ₹ 53 ಸಾವಿರ ದಾಟಿದೆ.

Share Market: ನಿಲ್ಲದ ಸಂಘರ್ಷ: ಮತ್ತೆ ಕುಸಿದ ಷೇರುಪೇಟೆ, ಚಿನ್ನದ ಬೆಲೆ ಹೆಚ್ಚಳ
ಚಿನ್ನ ಮತ್ತು ಷೇರುಪೇಟೆ
Edited By:

Updated on: Mar 08, 2022 | 12:28 PM

ಮುಂಬೈ: ಉಕ್ರೇನ್ ಮತ್ತು ರಷ್ಯಾ ಸಂಘರ್ಷ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಷೇರುಪೇಟೆಗಳು ಸತತ ಕುಸಿತ ದಾಖಲಿಸುತ್ತಿವೆ. ಮುಂಬೈ ಪೇಟೆಯ ಸೆನ್ಸೆಕ್ಸ್​ ಮಂಗಳವಾರದ ವಹಿವಾಟಿನಲ್ಲಿ 500 ಅಂಶಗಳ ಕುಸಿತ ಕಂಡಿದೆ. ಲೋಹ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಆಟೊ, ತೈಲಸಂಸ್ಕರಣಾ ಕಂಪನಿಗಳ ಷೇರುಗಳ ಬೆಲೆಗಳೂ ಕುಸಿದಿವೆ. ಇಂಧನ, ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳ ಮೌಲ್ಯ ವೃದ್ಧಿಯಾಗಿದೆ. ಸಂಕಷ್ಟ ಸಮಯದಲ್ಲಿ ಹೂಡಿಕೆದಾರರ ನೆಚ್ಚಿನ ಆಸರೆ ಎನಿಸಿರುವ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಹತ್ತು ಗ್ರಾಂ ಚಿನ್ನದ ಬೆಲೆ ಇದೀಗ ₹ 53 ಸಾವಿರ ದಾಟಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್​ಗೆ 2000 ಅಮೆರಿಕನ್ ಡಾಲರ್ ದಾಟಿದೆ. ಕೊವಿಡ್ ಸಂಕಷ್ಟದಿಂದ ವಿಶ್ವದ ಹಲವು ದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದಾಗಲೇ ಶುರುವಾದ ರಷ್ಯಾ-ಉಕ್ರೇನ್ ಸಂಘರ್ಷವು ಈಗಾಗಲೇ ವಿಶ್ವದ ಹಲವು ದೇಶಗಳನ್ನು ನಲುಗಿಸಿರುವ ಹಣದುಬ್ಬರವನ್ನು ಇನ್ನಷ್ಟು ಏರಿಸುವ ಸಾಧ್ಯತೆ ಕಂಡು ಬರುತ್ತಿದೆ. ಹೀಗಾಗಿ ಜನರು ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.

ಪ್ರತಿಬಾರಿ ಷೇರುಪೇಟೆಯಲ್ಲಿ ಹೊಯ್ದಾಟ ಹೆಚ್ಚಾಗಿದ್ದಾಗ, ಬಡ್ಡಿದರ ಇಳಿಕೆ ಕಂಡಿದ್ದಾಗ ಚಿನ್ನದ ಮೌಲ್ಯ ಹೆಚ್ಚಾಗುವುದು ಸಹಜ ವಿದ್ಯಮಾನ ಎನಿಸಿಕೊಳ್ಳುತ್ತದೆ. ಹಣದುಬ್ಬರ ಭೀತಿಯ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ದೇಶೀಯವಾಗಿ ಆರ್ಥಿಕ ಪರಿಸ್ಥಿತಿ ಕಳೆದ ಮೂರು ವರ್ಷಗಳ ಕಳಾಹೀನ ಸ್ಥಿತಿಯಿಂದ ಹೊರಬರುತ್ತಿದೆ. ಸಂಗ್ರಹವಾಗಿದ್ದ ಹಣವನ್ನು ಜನರು ಹೊರತೆಗೆಯಲು ಆರಂಭಿಸಿದ್ದಾರೆ. ಆಭರಣ ಚಿನ್ನದ ಬೇಡಿಕೆ ಕುದುರುತ್ತಿರುವುದು ಸಹ ಚಿನ್ನದ ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ ಎನಿಸಿದೆ.

ಷೇರುಪೇಟೆ ಹೊಯ್ದಾಟ

ವಿಶ್ವದ ವಿವಿಧೆಡೆ ಷೇರುಪೇಟೆಗಳು ಏರಿಳಿತ ಕಾಣುತ್ತಿವೆ. ಅಮೆರಿಕದ ನ್ಯೂಯಾರ್ಕ್​ ಸ್ಟಾಕ್​ ಎಕ್ಸ್​ಚೇಂಜ್ (ನಾಸ್​ಡಾಕ್) ಈಚಿನ ದಿನಗಳಲ್ಲಿ ಶೇ 20ರಷ್ಟು ಕುಸಿದಿದೆ. ಭಾರತದ ಷೇರುಪೇಟೆಯ ಸಂವೇದಿಕೆ ಸೂಚ್ಯಂಕ ನಿಫ್ಟಿ ಶೇ 15ರಷ್ಟು ಕುಸಿದಿದೆ. ಕಮಾಡಿಟಿ ಮಾರುಕಟ್ಟೆಯಲ್ಲಿ ವಹಿವಾಟಾಗುವ ಸರಕುಗಳ ಮೌಲ್ಯ ಹಣದುಬ್ಬರದ ಭೀತಿಯಿಂದ ಭಾರೀ ಏರಿಕೆ ಕಂಡಿವೆ.

‘ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ಎಕ್ಸಿಟ್ ಪೋಲ್​ಗಳ ಭವಿಷ್ಯ ಮತ್ತು ಅಮೆರಿಕದ ಬಾಂಡ್​ ಯೀಲ್ಡ್ ಕಡಿಮೆ ಆಗಬಹುದು ಎಂಬ ಮುನ್ಸೂಚನೆಯಿಂದ ಭಾರತದ ಷೇರುಪೇಟೆ ಮಂಗಳವಾಗ (ಮಾರ್ಚ್ 8) ತುಸು ಚೇತರಿಕೆ ಕಂಡಿದೆ. ಈ ಹಂತದಲ್ಲಿ ಐಟಿ, ಎನರ್ಜಿ, ಮೆಟಲ್ಸ್ ಮತ್ತು ಫಾರ್ಮಾ ವಲಯದ ಹೂಡಿಕೆ ಬೇಗ ಕರಗದು. ದೀರ್ಘಾವಧಿ ಹೂಡಿಕೆದಾರರಿಗೆ ಬ್ಯಾಂಕಿಂಗ್ ವಲಯ ಪ್ರವೇಶಿಸಲು ಇದು ಸೂಕ್ತ ಸಮಯ’ ಎಂದು ಅಭಿಪ್ರಾಯಪಟ್ಟಿದ್ದಾರೆ ಜಿಯೊಜಿತ್ ಫೈನಾನ್ಷಿಯಲ್ ಸರ್ವೀಸಸ್​ನ ಮುಖ್ಯ ಕಾರ್ಯತಂತ್ರ ಅಧಿಕಾರಿ ವಿ.ಕೆ.ವಿಜಯಕುಮಾರ್.

ಇದನ್ನೂ ಓದಿ: Russia Ukrain War: ಕರ್ನಾಟಕದಲ್ಲಿ ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ 100 ರೂಪಾಯಿ ಏರಿಕೆ; ಗ್ರಾಹಕರಿಗೆ ಸಂಕಷ್ಟ

ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆಗೆ ಮುಂದಾದ ಭಾರತ: ಪುಟಿನ್ ಮತ್ತು ಝೆಲೆನ್​ಸ್ಕಿ ಮಧ್ಯೆ ಸಂಧಾನಕ್ಕೆ ಮೋದಿ ಪ್ರಸ್ತಾವ