NSE Scam: ಪಾರದರ್ಶಕ ಹೆಜ್ಜೆಗಳನ್ನು ಈಗಾಗಲೇ ಇಡಲಾಗಿದೆ ಎಂದ ಎನ್‌ಎಸ್‌ಇ ಸಿಇಒ ವಿಕ್ರಮ್ ಲಿಮಯೆ
ಎನ್‌ಎಸ್‌ಇ ಮಾಜಿ ಎಂ.ಡಿ. ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ನಿರ್ಗಮನದ ನಂತರ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಇಒ ವಿಕ್ರಮ್ ಲಿಮಯೆ ಹೇಳಿದ್ದಾರೆ.
ಎನ್‌ಎಸ್‌ಇ-ಹಿಮಾಲಯದ ಯೋಗಿ ಪ್ರಕರಣದಲ್ಲಿ (NSE Scam) ನಡೆಯುತ್ತಿರುವ ತನಿಖೆ ಮಧ್ಯೆ ಭಾರತದ ಪ್ರಮುಖ ಷೇರು ವಿನಿಮಯ ಕೇಂದ್ರವು ಕಳೆದ ಕೆಲವು ವರ್ಷಗಳಲ್ಲಿ ನಿಯಂತ್ರಕ, ತಾಂತ್ರಿಕ ಮತ್ತು ಕಣ್ಗಾವಲು ವಿಭಾಗಕ್ಕೆ ಸಂಬಂಧಿಸಿದಂತೆ ಪರಿವರ್ತನೆಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ. ಆನಂದ್ ಸುಬ್ರಮಣಿಯನ್ ಅವರನ್ನು ಮುಖ್ಯ ಕಾರ್ಯತಂತ್ರ ಸಲಹೆಗಾರರಾಗಿ ಹಾಗೂ ಅದಾದ ಮೇಲೆ ಜಿಒಒ ಆಗಿ ಹುದ್ದೆ ಮರು ನಾಮಕರಣ ಮತ್ತು ಎಂ.ಡಿ. ಸಲಹೆಗಾರರಾಗಿ ನೇಮಕ ಮಾಡಿದ ವಿಚಾರವಾಗಿ ಕಳೆದ ತಿಂಗಳು ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಹಾಗೂ ಇತರರ ವಿರುದ್ಧ ಆಡಳಿತ ಲೋಪದೋಷದ ಆರೋಪ ಹೊರಿಸಲಾಗಿತ್ತು. ಆ ನಂತರ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು (ಎನ್‌ಎಸ್‌ಇ) ಕೆಲವು ದಿನಗಳಿಂದ ಸುದ್ದಿಯಲ್ಲಿದೆ.
2016ರ ಡಿಸೆಂಬರ್ನಲ್ಲಿ ಚಿತ್ರಾ ರಾಮಕೃಷ್ಣ ಅವರನ್ನು ಹೊರಹಾಕಿದ ಮೇಲೆ ಎನ್‌ಎಸ್‌ಇ ತನ್ನ ನಾಯಕತ್ವದ ಬದಲಾವಣೆ ನಂತರ ತೆಗೆದುಕೊಂಡ ಕ್ರಮಗಳ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿನಿಮಯ ಕೇಂದ್ರದ ಎಂಡಿ ಮತ್ತು ಸಿಇಒ ವಿಕ್ರಮ್ ಲಿಮಯೆ, ಎನ್‌ಎಸ್‌ಇಯ ವ್ಯಾಲ್ಯೂ ಚೈನ್ “ಆಧುನೀಕರಣ ಮತ್ತು ರೂಪಾಂತರಕ್ಕೆ ಒಳಗಾಗಿದೆ” ಎಂದು ಹೇಳಿದ್ದಾರೆ. ಎನ್ಎಸ್ಇಯಲ್ಲಿನ ಪ್ರಸ್ತುತ ಅವಧಿಯು ಜುಲೈನಲ್ಲಿ ಕೊನೆಗೊಳ್ಳಲಿದೆ. ಲಿಮಯೆ ಅವರು 2017ರ ಜುಲೈನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಚಿತ್ರಾ ರಾಮಕೃಷ್ಣ ಅವರ ಉತ್ತರಾಧಿಕಾರಿ ಆದರು. ಹೂಡಿಕೆದಾರರ ಆಸ್ತಿಗಳ ದುರುಪಯೋಗವನ್ನು ತಡೆಗಟ್ಟಲು, ವಿನಿಮಯ ಕೇಂದ್ರವು ಹೊಸ ಷೇರು ಮಾರಾಟ ಕಾರ್ಯವಿಧಾನದಲ್ಲಿ ಸೆಬಿಯೊಂದಿಗೆ ಕೆಲಸ ಮಾಡಿದೆ ಮತ್ತು ದಲ್ಲಾಳಿಗಳ ಬಳಿ ಇರುವ ಹೂಡಿಕೆದಾರರ ನಿಧಿಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಡೀಫಾಲ್ಟ್‌ಗಳ ನಂತರ ಎನ್‌ಎಸ್‌ಇ ತನ್ನ ವಹಿವಾಟು ಸದಸ್ಯರ ಆಡಿಟ್ ವರದಿಗಳು ಮತ್ತು ಬ್ಯಾಲೆನ್ಸ್ ಶೀಟ್‌ಗಳನ್ನು ಆಗಾಗ ವಿಶ್ಲೇಷಿಸಲು ಪ್ರಾರಂಭಿಸಿದೆ. ತಂತ್ರಜ್ಞಾನದ ಸಹಾಯದಿಂದ ಬ್ರೋಕರ್‌ಗಳಿಗೆ ವರದಿ ಮಾಡುವ ಪ್ರಕ್ರಿಯೆಯನ್ನು ವಿನಿಮಯವು ಸುವ್ಯವಸ್ಥಿತಗೊಳಿಸಿದೆ ಎಂದು ಲಿಮಯೆ ಹೇಳಿದ್ದಾರೆ. ನಿಶ್ಚಿತ ಆದಾಯವನ್ನು ಖಾತ್ರಿಪಡಿಸುವ ಯೋಜನೆಗಳಂತಹ ದುಷ್ಕೃತ್ಯಗಳಿಗೆ ಹೂಡಿಕೆದಾರರು ಬೀಳದಂತೆ ತಡೆಯಲು, ವಿನಿಮಯವು ತನ್ನ ಶೈಕ್ಷಣಿಕ ಅಭಿಯಾನಗಳನ್ನು ಸಹ ಹೆಚ್ಚಿಸುತ್ತಿದೆ. ತಂತ್ರಜ್ಞಾನದ ಮುಂಚೂಣಿಯಲ್ಲಿ ಎನ್ಎಸ್ಇಯಿಂದ ದೊಡ್ಡ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಅದರ ವ್ಯವಸ್ಥೆಗಳು ಈಗ ಪ್ರತಿ ಸೆಕೆಂಡಿಗೆ 3,00,000 ಆರ್ಡರ್ ಸಂದೇಶಗಳನ್ನು ಪ್ರಕ್ರಿಯೆಗೊಳಿಸಲು ಸಿದ್ಧವಾಗಿವೆ.
ಇನ್ನು ಈ ಮಧ್ಯೆ, ಷೇರು ವಿನಿಮಯ ಕೇಂದ್ರವು ಹೊಸ ವ್ಯವಸ್ಥಾಪಕ ನಿರ್ದೇಶಕರ ಹುಡುಕಾಟವನ್ನು ಪ್ರಾರಂಭಿಸಿದೆ. ಸಾರ್ವಜನಿಕ ಪ್ರಕಟಣೆಯ ಪ್ರಕಾರವಾಗಿ ಮಾರ್ಚ್ 25ರ ಮೊದಲು ಉನ್ನತ ಹುದ್ದೆಯ ಪಾತ್ರಕ್ಕಾಗಿ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ವಿನಿಮಯ ಕೇಂದ್ರವು ಅರ್ಜಿಗಳನ್ನು ಆಹ್ವಾನಿಸಿದೆ.
ಇದನ್ನೂ ಓದಿ: NSE Scam: ಎನ್‌ಎಸ್‌ಇ ಹಗರಣದಲ್ಲಿ ಮಾಜಿ ಸಿಒಒ ಆನಂದ್ ಸುಬ್ರಮಣಿಯನ್ರನ್ನು ಬಂಧಿಸಿದ ಸಿಬಿಐ