ಎಲ್ಐಸಿ ಐಪಿಒ (LIC IPO)ದ ಮೊದಲ ದಿನವಾದ ಮೇ 4ನೇ ತಾರೀಕಿನ ಬುಧವಾರದಂದು ನಿರೀಕ್ಷೆ ಮಾಡಿದಂತೆಯೇ ಅದ್ಭುತವಾದ ಪ್ರತಿಕ್ರಿಯೆ ಬಂದಿದೆ. ಆರಂಭದ ಮೊದಲ ದಿನ ಐಪಿಒ ಗಾತ್ರದ ಶೇ 67ರಷ್ಟು ಸಬ್ಸ್ಕ್ರೈಬ್ ಆಗಿದೆ ಎಂದು ಎನ್ಎಸ್ಇ ಡೇಟಾ ತಿಳಿಸಿದೆ. ಎಲ್ಐಸಿ ಐಪಿಒ ಆಫರ್ ಫಾರ್ ಸೇಲ್ ಮೂಲಕವಾಗಿ 22,13,74,920 ಈಕ್ವಿಟಿ ಷೇರುಗಳ ತನಕ ಮಾರಾಟ ಮಾಡಲಾಗುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ 21,000 ಕೋಟಿ ರೂಪಾಯಿ ಸಂಗ್ರಹ ಆಗಲಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ಹಿಂತೆಗೆತ ಗುರಿ ತಲುಪುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಎಲ್ಐಸಿ ಐಪಿಒ ಸಬ್ಸ್ಕ್ರಿಪ್ಷನ್ ಐಪಿಒ ಬಿಡ್ ಮೇ 4ರಿಂದ 9ರ ತನಕ ಮುಕ್ತವಾಗಿರುತ್ತದೆ. ಇದರಲ್ಲಿ ಸರ್ಕಾರವು ಶೇ 3.5ರಷ್ಟು ಎಲ್ಐಸಿಯ ಷೇರಿನ ಪಾಲನ್ನು ಮಾರಾಟ ಮಾಡುತ್ತಿದೆ. ಎಲ್ಐಸಿ ಐಪಿಒ ಶನಿವಾರದಂದು (ಮೇ 7, 2022) ಬೆಳಗ್ಗೆ 10ರಿಂದ ರಾತ್ರಿ 7ರ ತನಕ ಇರುತ್ತದೆ ಎಂದು ಎನ್ಎಸ್ಇಯಿಂದ ಬುಧವಾರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಎಲ್ಐಸಿ ದರದ ಬ್ಯಾಂಡ್ ಪ್ರತಿ ಷೇರಿಗೆ 902 ರೂಪಾಯಿಯಿಂದ 949 ನಿಗದಿಯಾಗಿದ್ದು, ಕೆಲವು ವರ್ಗಗಳಿಗೆ ರಿಯಾಯಿತಿ ಇದೆ.
ಎಲ್ಐಸಿ ಸಬ್ಸ್ಕ್ರಿಪ್ಷನ್ ಸ್ಥಿತಿ
ಎನ್ಎಸ್ಇ ಡೇಟಾದ ಪ್ರಕಾರ, ಪಾಲಿಸಿದಾರರಿಗೆ ಮೀಸಲಾದ ಭಾಗದಲ್ಲಿ ಮೊದಲ ದಿನ 2,21,37,492 ಷೇರುಗಳಲ್ಲಿ 1.99ರಷ್ಟು ಅಥವಾ 4,40,31,225 ಷೇರುಗಳಿಗೆ ಸಬ್ಸ್ಕ್ರೈಬ್ ಆಗಿದ್ದಾರೆ. ಉದ್ಯೋಗಿಗಳ ಕೋಟಾದ ಅಡಿಯಲ್ಲಿ 1.17 ಪಟ್ಟು ಸಬ್ಸ್ಕ್ರೈಬ್ ಆಗಿದ್ದಾರೆ. ಇನ್ನು ರೀಟೇಲ್ ಹೂಡಿಕೆದಾರರಿಗೆ ಮೀಸಲಾದ ಭಾಗದಲ್ಲಿ ಶೇ 60ರಷ್ಟು ಷೇರುಗಳಿಗೆ ಅಪ್ಲೈ ಮಾಡಿದ್ದಾರೆ. ನಾನ್ ರೀಟೇಲ್ ಹೂಡಿಕೆದಾರರು ಒಟ್ಟು ಮೀಸಲಾಗಿದ್ದರಲ್ಲಿ ಶೇ 27ರಷ್ಟು, ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಬಿಡ್ಡರ್ಸ್ ಶೇ 33ರಷ್ಟು ಅಪ್ಲೈ ಮಾಡಿದ್ದಾರೆ. 16,20,78,067 ಷೇರುಗಳ ಪೈಕಿ 10,86,91,770 ಷೇರುಗಳಿಗೆ ಬೇಡಿಕೆ ಬಂದಿದೆ.
ಎಲ್ಐಸಿ ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ
ಮೇ 4ನೇ ತಾರೀಕಿನ ಪ್ರಕಾರ, ಪ್ರತಿ ಅನ್ಲಿಸ್ಟೆಡ್ ಎಲ್ಐಸಿ ಈಕ್ವಿಟಿ ಷೇರಿಗೆ 85 ರೂಪಾಯಿ ಪ್ರೀಮಿಯಂ ಇತ್ತು, ಎಂದು ತಜ್ಞರು ಹೇಳಿದ್ದಾರೆ. ಎಲ್ಐಸಿ ಐಪಿಒ ಜಿಎಂಪಿ ಶೇ 9ರಷ್ಟು ನಿಗದಿಯಾಗಿದೆ. ಅದರ ಅರ್ಥ, ದರದ ಬ್ಯಾಂಡ್ನ ಮೇಲ್ಸ್ತರವಾದ 949ಕ್ಕಿಂತ 85 ರೂಪಾಯಿ ಹೆಚ್ಚೆಂದರೆ, (949+85) 1034 ರೂಪಾಯಿ ಆಗುತ್ತದೆ.
ಎಲ್ಐಸಿ ಪಾಲಿಸಿದಾರರ ಕೋಟಾ ಏನು?
ಎಲ್ಐಸಿ ಪಾಲಿಸಿದಾರರಿಗೆ ಅಂತ ಮೀಸಲಿಟ್ಟು, ಸರ್ಕಾರದಿಂದ ಹೊಸ ಕೋಟಾವನ್ನು ಎಲ್ಐಸಿ ಐಪಿಒ ಮೂಲಕ ತಂದಿದೆ. ವಿತರಣೆ ಬೆಲೆಯ ಮೇಲೆ ಪಾಲಿಸಿದಾರರಿಗೆ ರಿಯಾಯಿತಿ ಸಿಗುತ್ತದೆ. “ಪಾಲಿಸಿದಾರರು ಸಹ ಈ ಕಂಪೆನಿಯನ್ನು ಮಾಡಿದ್ದಾರೆ. ಅವರೂ ಷೇರುದಾರರಾಗಲು ಆಹ್ವಾನಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಹತ್ತಾರು ಲಕ್ಷ ಭಾರತೀಯರು ಪಾಲ್ಗೊಳ್ಳಲಿ, ಎಲ್ಐಸಿ ತನ್ನ ಮೌಲ್ಯ ತಿಳಿಸಲಿದೆ,” ಎಂದು DIPAM ಕಾರ್ಯದರ್ಶಿ ತುಹೀನ್ ಕಾಂತ್ ಪಾಂಡೆ ಹೇಳಿದ್ದಾರೆ.
ಎಲ್ಐಸಿ ಐಪಿಒ ಪಾಲಿಸಿದಾರರ ರಿಯಾಯಿತಿ
ರೀಟೇಲ್ ಹೂಡಿಕೆದಾರರಿಗೆ ಒಂದು ಷೇರಿಗೆ 45 ರೂಪಾಯಿ, ಅರ್ಹ ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂಪಾಯಿ ರಿಯಾಯಿತಿ ಸಿಗುತ್ತದೆ. ಆದರೆ ಈ ರಿಯಾಯಿತಿ ಅರ್ಹ ಪಾಲಿಸಿದಾರರಿಗೆ ಅನ್ವಯಿಸುತ್ತದೆ. ಯಾರು ಫೆಬ್ರವರಿ 28ರೊಳಗೆ ಪ್ಯಾನ್ ಜೋಡಣೆ ಮಾಡಿರುವವರು ಅರ್ಹರು.
ಪಾಲಿಸಿದಾರರು ಅಪ್ಲೈ ಮಾಡುವುದು ಹೇಗೆ?
ಎಲ್ಐಸಿ ಪಾಲಿಸಿದಾರರು ಗರಿಷ್ಠ ಮೊತ್ತ 2 ಲಕ್ಷ ರೂಪಾಯಿ ತನಕ ಬಿಡ್ ಮಾಡಬಹುದು. ಯಾರಿಗೆ ಗುಂಪು ಪಾಲಿಸಿ ಇರುತ್ತದೋ ಅಂಥವರು ಈ ಕೋಟಾದ ಅಡಿಯಲ್ಲಿ ಬಿಡ್ ಮಾಡುವುದಕ್ಕೆ ಅರ್ಹರಲ್ಲ. ಎಲ್ಐಸಿ ಪಾಲಿಸಿ ಜತೆಗೆ ಪ್ಯಾನ್ ಜೋಡಣೆ ಮಾಡುವುದರ ಹೊರತಾಗಿ ಅರ್ಹ ಹೂಡಿಕೆದಾರರಿಗೆ ಡಿಮ್ಯಾಟ್ ಖಾತೆ ಸಹ ಇರಬೇಕು.
ಈ ಷೇರುಗಳು ಖರೀದಿಸಲೇಬೇಕಾ?
ಈಗಿನ ಮೇಲ್ಸ್ತರದ ದರವಾದ 949 ರೂಪಾಯಿಯಲ್ಲಿ ಬೆಲೆ ಆಕರ್ಷಕವಾಗಿದೆ. ಖಾಸಗಿ ಇನ್ಷೂರೆನ್ಸ್ ಕಂಪೆನಿಗಳಿಗೆ ಹೋಲಿಸಿದಲ್ಲಿ ಎಲ್ಐಸಿ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದು, ಅಲ್ಪಾವಧಿಯಿಂದ ಮಧ್ಯಮಾವಧಿಗೆ “ಸಬ್ಸ್ಕ್ರೈಬ್” ರೇಟಿಂಗ್ ನೀಡಲಾಗಿದೆ. ಎಲ್ಐಸಿ ಐಪಿಒ ಮೇ 17ರಂದು ಲಿಸ್ಟಿಂಗ್ ಆಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: LIC IPO: ಎಲ್ಐಸಿ ಐಪಿಒ ಗ್ರೇ ಮಾರ್ಕೆಟ್ನಲ್ಲಿ ಎಂಥ ಬೇಡಿಕೆ ಪಡೆದಿದೆ? ಏನಿದು ಗ್ರೇ ಮಾರ್ಕೆಟ್ ಗೊತ್ತಿದೆಯಾ?
Published On - 2:23 pm, Thu, 5 May 22