ವಿಪ್ರೋ ಕಂಪನಿಯ ಅಜೀಂ ಪ್ರೇಮ್​ಜಿ ವಿರುದ್ಧ ಆರೋಪ ಮಾಡಿದ್ದ ವಕೀಲನಿಂದ ಬೇಷರತ್ ಸಾರ್ವಜನಿಕ ಕ್ಷಮೆಯಾಚನೆ

ಕ್ಷಮೆ ಕೋರುವುದರ ಜೊತೆಗೆ ಇನ್ನು ಮುಂದೆ ಸ್ವತಃ ಯಾವುದೇ ಪ್ರಕರಣಗಳನ್ನು ದಾಖಲಿಸುವುದಿಲ್ಲ ಹಾಗೂ ಬೇರೆಯವರು ಮೊಕದ್ದಮೆ ದಾಖಲಿಸಲು ನೆರವನ್ನೂ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಪ್ರೋ ಕಂಪನಿಯ ಅಜೀಂ ಪ್ರೇಮ್​ಜಿ ವಿರುದ್ಧ ಆರೋಪ ಮಾಡಿದ್ದ ವಕೀಲನಿಂದ ಬೇಷರತ್ ಸಾರ್ವಜನಿಕ ಕ್ಷಮೆಯಾಚನೆ
ವಿಪ್ರೊ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್​ಜಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 05, 2022 | 10:59 AM

ಬೆಂಗಳೂರು: ವಿಪ್ರೋ ಕಂಪನಿಯ ಮಾಲೀಕ ಅಜೀಂ ಪ್ರೇಮ್​ಜಿ, ಕುಟುಂಬ ಸದಸ್ಯರು ಮತ್ತು ಪಾಲುದಾರರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದ ವಕೀಲರೊಬ್ಬರು ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಗುರುವಾರ ಬೇಷರತ್ ಕ್ಷಮಾಪಣೆ ಕೋರಿದ್ದಾರೆ. ಕ್ಷಮೆ ಕೋರುವುದರ ಜೊತೆಗೆ ಇನ್ನು ಮುಂದೆ ಸ್ವತಃ ಯಾವುದೇ ಪ್ರಕರಣಗಳನ್ನು ದಾಖಲಿಸುವುದಿಲ್ಲ ಹಾಗೂ ಬೇರೆಯವರು ಮೊಕದ್ದಮೆ ದಾಖಲಿಸಲು ನೆರವನ್ನೂ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಲವು ಸರ್ಕಾರಿ ಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳು, ನ್ಯಾಯಾಂಗ ವ್ಯವಸ್ಥೆ, ಆಡಿಟರ್​ಗಳ ಕ್ಷಮೆಯನ್ನೂ ಅವರು ಕೋರಿದ್ದಾರೆ.

ತೆಲಂಗಾಣ ಬಾರ್​ ಕೌನ್ಸಿಲ್​ನಲ್ಲಿ ನೋಂದಾಯಿಸಿಕೊಂಡಿರುವ, ಪ್ರಸ್ತುತ ಚೆನ್ನೈ ನಗರದಲ್ಲಿ ವಾಸವಿರುವ ವಕೀಲ ಆರ್.ಸುಬ್ರಹ್ಮಣ್ಯಂ ವಿಪ್ರೋ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್​ಜಿ ವಿರುದ್ಧ 45,000 ಕೋಟಿ ರೂಪಾಯಿ ಅಕ್ರಮ ಎಸಗಿರುವ ಆರೋಪ ಮಾಡಿದ್ದರು. ಖಾಸಗಿ ಟ್ರಸ್ಟ್​ ಒಂದಕ್ಕೆ ಪ್ರೇಮ್​ಜಿ ಅವರು ಆಸ್ತಿಗಳನ್ನು ವರ್ಗಾಯಿಸುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ದೂರಿ ಬೆಂಗಳೂರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಜನವರಿ 27, 2021ರಲ್ಲಿ ಸಮನ್ಸ್ ಜಾರಿಯಾಗಿತ್ತು. ಇದನ್ನು ಅಜೀಂ ಪ್ರೇಮ್​ಜಿ ಮತ್ತಿತರರು ಹೈಕೋರ್ಟ್​​ನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್​ ಸಹ ಕಳೆದ ವರ್ಷ ಮೇ 15ರಂದು ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಅಜೀಂ ಪ್ರೇಮ್​ಜಿ ಇತರರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು.

ಈ ಸಂಬಂಧ ಮಾರ್ಚ್ 10, 2022ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದಲ್ಲದೆ ಆರ್.ಸುಬ್ರಹ್ಮಣ್ಯಂ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೋರಬೇಕು ಎಂದು ಹೇಳಿತ್ತು. ಅಜೀಂ ಪ್ರೇಮ್​ಜಿ ಅವರು ಸಹ ವಕೀಲರನ್ನು ಕ್ಷಮಿಸುವ ಮೂಲಕ ಈ ವಿಷಯವನ್ನು ಇಲ್ಲಿಗೇ ಬಿಡಬೇಕು. ಮುಂದಿನ ದಿನಗಳಲ್ಲಿ ವಕೀಲರ ವಿರುದ್ಧ ಮೊಕದ್ದಮೆಗಳನ್ನು ಹೂಡಬಾರದು ಎಂದು ಸಲಹೆ ಮಾಡಿತ್ತು. ಸುಪ್ರೀಂಕೋರ್ಟ್ ಸೂಚನೆಗೆ ಒಪ್ಪಿಕೊಂಡಿದ್ದ ಪ್ರೇಮ್​ಜಿ ವಕೀಲರು ಬಹಿರಂಗವಾಗಿ ಕ್ಷಮೆಯಾಚಿಸಿದರೆ, ಅವರನ್ನು ಕ್ಷಮಿಸುವುದಾಗಿ ಹೇಳಿದ್ದರು.

ವಿಪ್ರೋ ಗ್ರೂಪ್ ವಿರುದ್ಧ 70 ಕ್ರಿಮಿನಲ್ ಪ್ರಕರಣಗಳನ್ನು ಇಂಡಿಯಾ ಅವೇಕ್ ಫಾರ್ ಟ್ರಾನ್ಸ್​ಪರೆನ್ಸಿ ಹೆಸರಿನ ಎನ್​ಜಿಒ ದಾಖಲಿಸಿತ್ತು. ಈ ಎಲ್ಲ ಪ್ರಕರಣಗಳನ್ನೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕೃಷ್ಣನ್ ಕೌಲ್ ಮತ್ತು ಎಂ.ಸುಂದರೇಶ್ ಅವರಿದ್ದ ನ್ಯಾಯಪೀಠವು ವಜಾ ಮಾಡಿತ್ತು. ಪ್ರಕರಣ ದಾಖಲಿಸಿದ್ದ ಸುಬ್ರಹ್ಮಣ್ಯಂ ಅವರ ಅಫಿಡವಿಟ್ ಪರಿಶೀಲಿಸಿದ್ದ ನ್ಯಾಯಪೀಠವು ಪ್ರೇಮ್​ಜಿ ಮತ್ತು ಇತರರ ಕ್ಷಮೆ ಕೋರಿ, ಹೊಸ ಬದುಕು ಆರಂಭಿಸಬೇಕು ಎಂದು ಸಲಹೆ ಮಾಡಿತ್ತು.

Azim-Premji-Wipro-AD

ವಕೀಲ ಸುಬ್ರಹ್ಮಣ್ಯಂ ನೀಡಿರುವ ಪತ್ರಿಕಾ ಜಾಹೀರಾತು

ನಂತರದ ದಿನಗಳಲ್ಲಿ ವಕೀಲರಾದ ಮುಕುಲ್ ರೋಹಟಗಿ ಮತ್ತು ಎ.ಗಣೇಶ್ ಅವರ ಮನವೊಲಿಕೆಯ ನಂತರ ಅಜೀಂ ಪ್ರೇಮ್​ಜಿ ಅವರು ಸುಬ್ರಹ್ಮಣ್ಯಂ ಅವರನ್ನು ಕ್ಷಮಿಸಲು ಒಪ್ಪಿಕೊಂಡಿದ್ದರು. ಪ್ರಕರಣ ಸಂಬಂಧ ಕೇವಲ ಅಜೀಂ ಪ್ರೇಮ್​ಜಿ ಒಬ್ಬರ ಕ್ಷಮೆ ಕೋರಿದರೆ ಸಾಲದು. ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಕ್ಷಮೆಯನ್ನೂ ಯಾಚಿಸಬೇಕು, ಮುಂದೆಂದೂ ವಿಪ್ರೋ ವಿರುದ್ಧ ಪ್ರಕರಣ ದಾಖಲಿಸಬಾರದು, ತಮ್ಮ ಸಂಸ್ಥೆಯನ್ನು ಮುಚ್ಚಬೇಕು, ಹೊಸದಾಗಿ ಯಾವುದೇ ಸಂಸ್ಥೆಗಳನ್ನು ಹುಟ್ಟುಹಾಕಬಾರದು, ಬೇರೆಯವರು ಮೊಕದ್ದಮೆ ದಾಖಲಿಸಲು ನೆರವಾಗಬಾರದು ಎಂಬ ಷರತ್ತುಗಳನ್ನು ನ್ಯಾಯಪೀಠ ವಿಧಿಸಿತ್ತು.

ಅದರಂತೆ ವಕೀಲ ಆರ್.ಸುಬ್ರಹ್ಮಣ್ಯಂ ಇಂದು (ಮೇ 5) ಕ್ಷಮೆ ಕೋರಿದ್ದು, ವಿಪ್ರೋ ಕಂಪನಿ ಮಾಲೀಕರಾದ ಅಜೀಂ ಪ್ರೇಮ್​, ಯಾಸೀಂ ಪ್ರೇಮ್​ಜಿ, ನಿರ್ದೇಶಕರಾದ ಶ್ರೀನಿವಾಸನ್ ಪಗಲ್​ತಿವರ್ತಿ, ಆಡಿಟರ್​ಗಳಾದ ಜಿ.ವೆಂಕಟೇಶ್ವರರಾವ್, ಕಂಪನಿಗಳ ನೋಂದಣಿ ಅಧಿಕಾರಿ ಎಂ.ಆರ್.ಭಟ್ ಅವರ ಕ್ಷಮೆ ಯಾಚಿಸಿ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ.

ಇದನ್ನೂ ಓದಿ: Azim Premji | ಅಜೀಂ ಪ್ರೇಮ್ ಜಿ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿ ವಜಾ; ಅರ್ಜಿದಾರರಿಗೆ ಭಾರಿ ದಂಡ ವಿಧಿಸಿದ ಹೈಕೋರ್ಟ್

ಇದನ್ನೂ ಓದಿ: Wipro Interim Dividend: ವಿಪ್ರೋದಿಂದ ಷೇರಿಗೆ 5 ರೂಪಾಯಿ ಮಧ್ಯಂತರ ಲಾಭಾಂಶ ಘೋಷಣೆ

Published On - 10:53 am, Thu, 5 May 22