ನವದೆಹಲಿ, ಆಗಸ್ಟ್ 30: ಭಾರತದಲ್ಲಿ ಅಕ್ಕಿ ಕೊರತೆ ಎದುರಾಗುವುದನ್ನು ತಪ್ಪಿಸಲು ಈ ಆಹಾರಧಾನ್ಯದ ರಫ್ತನ್ನು (Rice Export Ban) ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಸಿಂಗಾಪುರ ದೇಶಕ್ಕೆ ವಿನಾಯಿತಿ (Exemption) ನೀಡಲು ನಿರ್ಧರಿಸಿದೆ. ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ಕಾರಣಕ್ಕೆ ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಭಾರತ ಅವಕಾಶ ಮಾಡಿಕೊಡಲಿದೆ. ಸಿಂಗಾಪುರದ ಆಹಾರ ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗಿ ಭಾರತ ಈ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ಆಗಸ್ಟ್ 30ರಂದು ಹೇಳಿದೆ.
‘ಭಾರತ ಮತ್ತು ಸಿಂಗಾಪುರ ಬಹಳ ನಿಕಟ ಸಹಭಾಗಿತ್ವ ಹೊಂದಿದೆ. ಹಿತಾಸಕ್ತಿ, ಆರ್ಥಿಕತೆ ಮತ್ತು ಜನಸಂಪರ್ಕ ಇವೆಲ್ಲವೂ ಎರಡೂ ದೇಶಗಳ ಮಧ್ಯೆ ಮಿಳಿತವಾಗಿದೆ. ಈ ವಿಶೇಷ ಸಂಬಂಧ ಇರುವ ಹಿನ್ನೆಲೆಯಲ್ಲಿ ಸಿಂಗಾಪುರದ ಆಹಾರ ಭದ್ರತಾ ಅಗತ್ಯತೆಗಳನ್ನು ಪೂರೈಸಲು ಭಾರತ ಅಕ್ಕಿ ರಫ್ತಿಗೆ ಅನುಮತಿ ಕೊಡಲು ನಿರ್ಧರಿಸಿದೆ,’ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗಚಿ ಹೇಳಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್ನಲ್ಲಿದೆ ಹೊಸ ಫೀಚರ್
ಭಾರತದಲ್ಲಿ ಆಹಾರ ಭದ್ರತೆಯನ್ನು ಕಾಪಾಡಲು ಮತ್ತು ಅಕ್ಕಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಕೇಂದ್ರ ಸರ್ಕಾರ ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿ ಜುಲೈ 20ರಂದು ಆದೇಶ ಹೊರಡಿಸಿತು. ಕೆಲ ತಳಿಯ ಅಕ್ಕಿಯ ರಫ್ತಿಗೆ ಸರ್ಕಾರ ನಿರ್ಬಂದ ಹೇರಿದ್ದರೂ ರಫ್ತು ನಿಲ್ಲದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಸ್ಮತಿಯೇತರ ಎಲ್ಲಾ ಪ್ರಾಕಾರದ ಬಿಳಿ ಅಕ್ಕಿಯ ರಫ್ತನ್ನು ಸರ್ಕಾರ ನಿಷೇಧಿಸಲು ನಿರ್ಧರಿಸಿತು.
ಬಾಸ್ಮತಿ ಅಕ್ಕಿ ಮತ್ತು ಬಾಯಿಲ್ಡ್ ರೈಸ್ಗಳಿಗೆ ನೀಡುವ ಎಚ್ಎಸ್ ಕೋಡ್ ಹೆಸರಿನಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿಯನ್ನು ರಫ್ತು ಮಾಡಲಾಗುತ್ತಿರುವುದನ್ನು ಸರ್ಕಾರ ಗಮನಿಸಿತ್ತು. ಹೀಗಾಗಿ, ಬಾಸ್ಮತಿ ಅಕ್ಕಿಯ ರಫ್ತಿಗೆ ಆಗಸ್ಟ್ 27ರಂದು ನಿರ್ಬಂಧ ಹೇರಲು ಸರ್ಕಾರ ನಿರ್ಧರಿಸಿತು ಎನ್ನಲಾಗಿದೆ.
ಇದನ್ನೂ ಓದಿ: ಎರಡು ವರ್ಷದಿಂದ ವಹಿವಾಟು ಕಾಣದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳೆಷ್ಟು? ಜನ್ ಧನ್ ಖಾತೆಗಳೆಷ್ಟು? ಇಲ್ಲಿದೆ ಡೀಟೇಲ್ಸ್
ಪ್ರಮುಖ ಅಕ್ಕಿ ಉತ್ಪಾದಕ ಮತ್ತು ರಫ್ತು ದೇಶಗಳಲ್ಲಿ ಭಾರತವೂ ಇದೆ. ಭಾರತ ಸರ್ಕಾರದ ಅಕ್ಕಿ ನಿರ್ಬಂಧ ಮತ್ತು ನಿಷೇಧ ಕ್ರಮದಿಂದ ಹಲವು ದೇಶಗಳಲ್ಲಿ ಆಹಾರ ಬೆಲೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಾಂಗ್ಲಾದೇಶ, ನೇಪಾಳ ಮೊದಲಾದ ದೇಶಗಳು ಭಾರತದ ಅಕ್ಕಿಯ ಮೇಲೆ ಅವಲಂಬಿತವಾಗಿವೆ. ಇದೀಗ ಸಿಂಗಾಪುರಕ್ಕೆ ಭಾರತ ಅಕ್ಕಿ ರಫ್ತು ಮಾಡಲು ವಿನಾಯಿತಿ ನೀಡಿದೆ. ಬೇರೆ ದೇಶಗಳೂ ಇದೇ ರೀತಿಯ ವಿನಾಯಿತಿ ಕೋರುವ ಸಾಧ್ಯತೆಯೂ ಇಲ್ಲದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ