ಸಿಂಗಾಪುರದ ನೂತನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ ಭಾರತದ ಆರ್ಥಿಕ ಬಲಾಬಲದ ಬಗ್ಗೆ ಹೇಳಿದ ಕುತೂಹಲಕಾರಿ ಸಂಗತಿಗಳು

|

Updated on: Sep 03, 2023 | 5:51 PM

Tharman Shanmugaratnam on Indian Economy: ಸಿಂಗಾಪುರದ ನೂತನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ 2016ರಲ್ಲಿ ಭಾರತದಲ್ಲಿ ನೀತಿ ಆಯೋಗ್​ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಭಾರತದ ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿರುವ ಕೆಲ ತೊಡರುಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಇವತ್ತು ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರ ಅಂದಿನ ಮಾತುಗಳನ್ನು ಮತ್ತು ಸಲಹೆಗಳನ್ನು ನೆನಪಿಸಿಕೊಳ್ಳುವುದು ಪ್ರಸ್ತುತ. ಅವರ ಆವತ್ತಿನ ಮಾತುಗಳು ಇಂದಿಗೆ ಎಷ್ಟು ಪ್ರಸ್ತುತವಾಗಿ ಉಳಿದಿವೆ ಎಂಬುದನ್ನು ಅವಲೋಕಿಸಬಹುದು.

ಸಿಂಗಾಪುರದ ನೂತನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ ಭಾರತದ ಆರ್ಥಿಕ ಬಲಾಬಲದ ಬಗ್ಗೆ ಹೇಳಿದ ಕುತೂಹಲಕಾರಿ ಸಂಗತಿಗಳು
ಧರ್ಮನ್ ಷಣ್ಮುಗರತ್ನಂ
Follow us on

ಭಾರತ ಮೂಲದ ಧರ್ಮನ್ ಷಣ್ಮುಗರತ್ನಂ (Tharman Shanmugaratnam) ಅವರು ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಚೀನಾ ಮೂಲದ ಇಬ್ಬರು ಪ್ರತಿಸ್ಪರ್ಧಿಗಳನ್ನು ಸುಲಭವಾಗಿ ಸೋಲಿಸಿ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 66 ವರ್ಷದ ದರ್ಮನ್ ಅವರು ಮೂಲತಃ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಆದರೆ, ಎರಡು ದಶಕಗಳಿಂದ ರಾಜಕೀಯದಲ್ಲಿರುವ ಅವರು ಸಿಂಗಾಪುರದಲ್ಲಿ ಹಿಂದೆ ಉಪಪ್ರಧಾನಿಯಾಗಿಯೂ ಕೆಲಸ ಮಾಡಿದ್ದಾರೆ. ಮತ್ತೊಬ್ಬ ಭಾರತೀಯ ಮೂಲದ ಹಲೀಮಾ ಯಾಕೂಬ್ ಅವರು ಸಿಂಗಾಪುರದ ಅಧ್ಯಕ್ಷರಾಗಿದ್ದು ಸೆಪ್ಟೆಂಬರ್ 13ಕ್ಕೆ ಅವರ ಅಧಿಕಾರಾವಧಿ ಮುಗಿಯುತ್ತದೆ. ಸೆಪ್ಟೆಂಬರ್ 14ಕ್ಕೆ ಷಣ್ಮುಗರತ್ನಂ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಭಾರತ ಮೂಲದ ಮತ್ತು ತಮಿಳು ಭಾಷಿಕರಾದ ಕನಕರತ್ನಂ ಷಣ್ಮುಗರತ್ನಂ ಅವರು ಧರ್ಮನ್​ರ ತಂದೆಯಾಗಿದ್ದಾರೆ. ತಾಯಿ ಚೀನಾ ಮೂಲದವರಾಗಿದ್ದಾರೆ. ಆರ್ಥಿಕ ವ್ಯವಹಾರಗಳಲ್ಲಿ ಪರಿಣಿತರಾಗಿರುವ ಧರ್ಮನ್ ಷಣ್ಮುಗರತ್ನಂ ಅವರು 2016ರ ಆಗಸ್ಟ್ 26ರಂದು ಭಾರತದ ನೀತಿ ಆಯೋಗ್​ನ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದರು. ಭಾರತ ಮತ್ತು ಚೀನಾ ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯನ್ ದೇಶಗಳ ಆರ್ಥಿಕತೆ ಸಮ್ಮಿಳಿತಗೊಳ್ಳಬೇಕು ಎಂಬುದೂ ಸೇರಿದಂತೆ ಭಾರತದ ಆರ್ಥಿಕ ಭವಿಷ್ಯದ ಅನುಕೂಲತೆಗಳು ಮತ್ತು ತೊಡರುಗಳ ಬಗ್ಗೆ ಮಾತನಾಡಿದ್ದರು.

ಆಂತರಿಕ ಬೇಡಿಕೆಗಳಿಂದಾಗಿ ಮುಂದಿನ ಎರಡು ದಶಕಗಳ ಕಾಲ ಭಾರತದ ಆರ್ಥಿಕ ಬೆಳವಣಿಗೆ ಶೇ. 8ಕ್ಕಿಂತಲೂ ಹೆಚ್ಚು ಇರುತ್ತದೆ. ಇದರಿಂದ ಉದ್ಯೋಗಸೃಷ್ಟಿ ಹೆಚ್ಚಾಗುತ್ತದೆ ಎಂದು ಹೇಳಿದ್ದ ಅವರು, ಇದರ ಹೊರತಾಗಿಯೂ ಭಾರತದ ಬೆಳವಣಿಗೆಗೆ ತೊಡಕಾಗುವ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದರು.

ಇದನ್ನೂ ಓದಿ: ಮಹೀಂದ್ರ ಕಂಪನಿ ವಾಹನಗಳ ಮಾರಾಟ ಅತಿಹೆಚ್ಚಳ; ಆಗಸ್ಟ್​ನಲ್ಲಿ ಭಾರತದಲ್ಲಿ ವಾಹನ ಮಾರಾಟ ಪ್ರಮಾಣ ಎಷ್ಟು? ಇಲ್ಲಿದೆ ವಿವರ

2016ರಲ್ಲಿ ಧರ್ಮನ್ ಷನ್ಮುಗರತ್ನಂ ಭಾರತಕ್ಕೆ ನೀಡಿದ ಸಲಹೆಗಳು

ಭಾರತದಲ್ಲಿ ಆರ್ಥಿಕ ವ್ಯವಹಾರಗಳ ಮೇಲೆ ಸರ್ಕಾರ ಅಗತ್ಯಕ್ಕಿಂತ ಹೆಚ್ಚೇ ಮಧ್ಯಪ್ರವೇಶ ಮಾಡುತ್ತಿದೆ. ಇದರಿಂದ ಖಾಸಗಿ ಹೂಡಿಕೆ ಮತ್ತು ಉದ್ಯೋಗಸೃಷ್ಟಿಗೆ ತೊಡಕಾಗುತ್ತದೆ. ಈಗಿರುವ ಉದ್ಯಮಿಗಳನ್ನು ರಕ್ಷಿಸಿ ಹೊಸಬರ ಪ್ರವೇಶವನ್ನು ಕಠಿಣಗೊಳಿಸುತ್ತದೆ.

ಸಾಮಾಜಿಕ ಮತ್ತು ಮಾನವ ಶಕ್ತಿಯನ್ನು ನಿರ್ಮಿಸುವತ್ತ ಸರ್ಕಾರ ಹೆಚ್ಚು ಗಮನ ಕೊಡಬೇಕು.

ಭಾರತಕ್ಕೆ ಶೇ. 8ರಷ್ಟು ಆರ್ಥಿಕವೃದ್ಧಿ ಅನಿವಾರ್ಯ ಎಂಬುದನ್ನು ಮನಗಾಣಬೇಕು.

ಎಪ್ಪತ್ತರ ದಶಕದಲ್ಲಿ ಭಾರತ ಮತ್ತು ಚೀನಾ ಮಧ್ಯೆ ತಲಾದಾಯ ಸಮಾನವಾಗಿತ್ತು. ಇವತ್ತು ಭಾರತದಕ್ಕಿಂತ ಚೀನಾದ್ದು ಬಹಳ ಹೆಚ್ಚಿದೆ.

ಚೀನಾ ಪ್ರಗತಿ ಕಡಿಮೆಯಾಗಿ ಭಾರತ ಶೇ. 8ರಿಂದ 10ರಷ್ಟು ದರದಲ್ಲಿ ಬೆಳೆಯುತ್ತಾ ಹೋದರೂ ಎರಡು ದಶಕದಲ್ಲಿ ಚೀನಾದ ತಲಾದಾಯದ ಶೇ. 70ರಷ್ಟನ್ನು ಮಾತ್ರ ಮುಟ್ಟಲು ಸಾಧ್ಯ.

ಜಾಗತಿಕ ಆರ್ಥಿಕತೆಗೆ ಅಭಿವೃದ್ಧಿಯ ಗಾಲಿಯಾಗಿರುವುದು ಏಷ್ಯಾವೇ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ಚೀನಾ ಮತ್ತು ಆಗ್ನೇಯ ಏಷ್ಯನ್ ಪ್ರದೇಶದ ಜೊತೆ ಭಾರತದ ವ್ಯಾಪಾರ ಪ್ರಮಾಣ ಬಹಳ ಕಡಿಮೆ ಇದೆ. ಇಲ್ಲಿನ ದೇಶಗಳ ಮಧ್ಯೆ ವ್ಯವಹಾರ ಹೆಚ್ಚಬೇಕು. ರಫ್ತು ಮತ್ತು ಆಮದುಗಳು ಹೆಚ್ಚಬೇಕು.

ಇದನ್ನೂ ಓದಿ: ಡೀಲರ್​ಗಳಿಗೆ ಪ್ರೋತ್ಸಾಹಕವಾಗಿ ನೀಡುವ ಚಿನ್ನ ಮತ್ತಿತರ ಸರಕುಗಳ ಮೇಲೆ ಐಟಿಸಿ ಕ್ಲೈಮ್ ಸಾಧ್ಯ: ಎಎಆರ್ ಕರ್ನಾಟಕ ಪೀಠದ ತೀರ್ಪು

ಭಾರತದ ಅತಿದೊಡ್ಡ ಕೊರತೆ ಇರುವುದು ಅದರ ಶಿಕ್ಷಣದಲ್ಲಿ. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಉತ್ತಮ ಮಾನವ ಸಂಪನ್ಮೂಲ ನಿರ್ಮಿಸಬೇಕು.

ಭಾರತದ ಭೂಸ್ವಾಧೀನ ಮತ್ತು ಉದ್ಯೋಗಿ ಕಾನೂನುಗಳು ಕಠಿಣವಾಗಿದ್ದು, ಉದ್ಯಮಗಳು ಹೆಚ್ಚೆಚ್ಚು ಜನರನ್ನು ನೇಮಕ ಮಾಡಿಕೊಂಡು ಬೆಳೆಯಲು ಕಷ್ಟವಾಗುತ್ತದೆ.

ಜಾಗತಿಕವಾಗಿ ಭಾರತದ ರಫ್ತು ಶೇ. 2ಕ್ಕಿಂತಲೂ ಕಡಿಮೆ ಇದೆ. ಚೀನಾದಿಂದ ಹೊರಹೋಗುತ್ತಿರುವ ತಯಾರಿಕಾ ಉದ್ಯಮಗಳನ್ನು ವಿಯೆಟ್ನಾಂ ಮೊದಲಾದ ದೇಶಗಳು ಆಕರ್ಷಿಸುತ್ತಿವೆ. ಹೆಚ್ಚು ದುಡಿಮೆ ಅವಶ್ಯಕತೆ ಇರುವ ತಯಾರಕಾ ಉದ್ಯಮಗಳನ್ನು ಭಾರತ ಆಕರ್ಷಿಸಬೇಕು.

ಮೇಲೆ ಹೇಳಿದ ಈ ಅಂಶಗಳು 2016ರಲ್ಲಿ ಧರ್ಮನ್ ಷಣ್ಮುಗರತ್ನಂ ಅವರು ಭಾಷಣದಲ್ಲಿ ಹೇಳಿದ್ದು. ಆಗಿನಿಂದೀಚೆ ಭಾರತ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ರಫ್ತು ಹೆಚ್ಚಾಗಿದೆ. ಶಿಕ್ಷಣ ವ್ಯವಸ್ಥೆ ಮಾರ್ಪಡಿಸುವ ಪ್ರಯತ್ನವಾಗುತ್ತಿದೆ. ತಯಾರಕಾ ಉದ್ಯಮಗಳನ್ನು ಆಕರ್ಷಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ