ಭಾರತದ ಮೊಬೈಲ್ ರಫ್ತು ಕಡಿಮೆ ಆಗಿಲ್ಲ; ಆಗಸ್ಟ್​ನಲ್ಲಿ ಗಣನೀಯ ಏರಿಕೆ: ಐಸಿಇಎ ದತ್ತಾಂಶ ಬಿಡುಗಡೆ

Smartphone exports from India in 2025 August: ಭಾರತದಿಂದ ಸ್ಮಾರ್ಟ್​ಫೋನ್ ರಫ್ತು ಗಣನೀಯವಾಗಿ ಇಳಿಕೆ ಆಗುತ್ತಿದೆ ಎಂಬಂತಹ ಸುದ್ದಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಆದರೆ, ವಾಸ್ತವವಾಗಿ ಆಗಸ್ಟ್ ತಿಂಗಳಲ್ಲಿ ಸ್ಮಾರ್ಟ್​ಫೋನ್ ರಫ್ತು ಶೇ. 39ರಷ್ಟು ಹೆಚ್ಚಾಗಿದೆ. 2024ರ ಆಗಸ್ಟ್​ನನಲ್ಲಿ 1.09 ಬಿಲಿಯನ್ ಡಾಲರ್​ನಷ್ಟು ಫೋನ್ ರಫ್ತಾಗಿದ್ದರೆ, 2025ರ ಆಗಸ್ಟ್​ನಲ್ಲಿ ಈ ಸಂಖ್ಯೆ 1.53 ಬಿಲಿಯನ್ ಡಾಲರ್​ಗೆ ಏರಿದೆ.

ಭಾರತದ ಮೊಬೈಲ್ ರಫ್ತು ಕಡಿಮೆ ಆಗಿಲ್ಲ; ಆಗಸ್ಟ್​ನಲ್ಲಿ ಗಣನೀಯ ಏರಿಕೆ: ಐಸಿಇಎ ದತ್ತಾಂಶ ಬಿಡುಗಡೆ
ಸ್ಮಾರ್ಟ್​ಫೋನ್

Updated on: Sep 25, 2025 | 12:56 PM

ನವದೆಹಲಿ, ಸೆಪ್ಟೆಂಬರ್ 25: ಆಗಸ್ಟ್ ತಿಂಗಳಲ್ಲಿ ಭಾರತದಿಂದ 1.53 ಬಿಲಿಯನ್ ಡಾಲರ್ ಮೊತ್ತದಷ್ಟು ಸ್ಮಾರ್ಟ್​ಫೋನ್ ರಫ್ತು ಆಗಿದೆ ಎಂದು ಇಂಡಿಯಾ ಸೆಲೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ಹೇಳಿದೆ. ಕಳೆದ ವರ್ಷದ ಆಗಸ್ಟ್​ನಲ್ಲಿ (2024) ಆದ ರಫ್ತು 1.09 ಬಿಲಿಯನ್ ಡಾಲರ್​ನಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 39ರಷ್ಟು ಹೆಚ್ಚಾಗಿದೆ.

ಭಾರತದ ಸ್ಮಾರ್ಟ್​ಫೋನ್ ರಫ್ತು ಗಣನೀಯವಾಗಿ ಇಳಿಕೆ ಆಗಿದೆ ಎಂಬಂತಹ ಸುದ್ದಿಗಳು ಇತ್ತೀಚೆಗೆ ಕೇಳಿಬಂದಿದ್ದವು. ಈಗ ಐಸಿಇಎ ಬಿಡುಗಡೆ ಮಾಡಿರುವ ದತ್ತಾಂಶವು ಈ ವರದಿಯ ಅಂಶಗಳನ್ನು ಅಲ್ಲಗಳೆದಿದೆ. ಆಗಸ್ಟ್ ತಿಂಗಳ ರಫ್ತು ದತ್ತಾಂಶವನ್ನು ಹಿಂದಿನ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಬೇಕು. ಹಿಂದಿನ ತಿಂಗಳುಗಳ ದತ್ತಾಂಶಕ್ಕೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ರಫ್ತು ಕಡಿಮೆ ಆಗಿದೆ ಎನ್ನುವ ವರದಿಗಳಲ್ಲೂ ಈ ತಪ್ಪು ಆಗಿದ್ದಿರಬಹುದು.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಸ್ಮಾರ್ಟ್​ಫೋನ್ ಕಂಪನಿಗಳ ಹೊಸ ಉತ್ಪನ್ನಗಳ ಬಿಡುಗಡೆ ಇರುತ್ತವೆ. ಹಬ್ಬದ ಸೇಲ್ ಸೀಸನ್ ಕಾರಣ ಈ ಎರಡು ಮೂರು ತಿಂಗಳು ಸ್ಥಳೀಯವಾಗಿ ಸ್ಮಾರ್​ಟ್​ಫೋನ್​ಗಳಿಗೆ ಬೇಡಿಕೆ ಇರುತ್ತದೆ. ಹೀಗಾಗಿ, ಯಾವುದೇ ವರ್ಷದಲ್ಲೂ ಈ ಕೆಲ ತಿಂಗಳು ಸ್ಮಾರ್ಟ್​ಫೋನ್ ರಫ್ತು ಕಡಿಮೆಯೇ ಇರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಉದ್ಯೋಗಸೃಷ್ಟಿಯಲ್ಲಿ ಹಿನ್ನಡೆ ಇಲ್ಲ; ಜುಲೈನಲ್ಲಿ 21 ಲಕ್ಷ ಹೊಸ ಇಪಿಎಫ್ ಸದಸ್ಯರ ಸೇರ್ಪಡೆ

ಅಮೆರಿಕಕ್ಕೆ ಸ್ಮಾರ್ಟ್​ಫೋನ್ ರಫ್ತು ಎರಡು ಪಟ್ಟು ಹೆಚ್ಚಳ

ಇನ್ನು, ಅಮೆರಿಕಕ್ಕೆ ಭಾರತದಿಂದ ಆದ ಸ್ಮಾರ್ಟ್​ಫೋನ್ ರಫ್ತಿನಲ್ಲೂ ಯಾವುದೇ ಇಳಿಕೆ ಆಗಿಲ್ಲ. ತದ್ವಿರುದ್ಧವಾಗಿ, ಅಮೆರಿಕಕ್ಕೆ ರಫ್ತು ಎರಡು ಪಟ್ಟು ಹೆಚ್ಚಾಗಿದೆ. 2024ರ ಆಗಸ್ಟ್​ನಲ್ಲಿ 388 ಮಿಲಿಯನ್ ಡಾಲರ್​ನಷ್ಟು ಸ್ಮಾರ್ಟ್​ಫೋನ್ ರಫ್ತಾಗಿತ್ತು. 2025ರ ಆಗಸ್ಟ್​ನಲ್ಲಿ ಇದು 965 ಮಿಲಿಯನ್ ಡಾಲರ್​ಗೆ ಏರಿದೆ. ಅಂದರೆ, ಅಮೆರಿಕಕ್ಕೆ ಮಾಡಲಾದ ರಫ್ತು ಶೇ. 148ರಷ್ಟು ಹೆಚ್ಚಳ ಆಗಿದೆ.

ಈ ಹಣಕಾಸು ವರ್ಷದಲ್ಲಿ (2025ರ ಏಪ್ರಿಲ್ ನಂತರ) ಮೊದಲ ಐದು ತಿಂಗಳು ಭಾರತದ ಒಟ್ಟಾರೆ ಸ್ಮಾರ್ಟ್​ಫೋನ್ ರಫ್ತು ಒಂದು ಲಕ್ಷ ರುಪಾಯಿ (11.7 ಬಿಲಿಯನ್ ಡಾಲರ್) ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 7.6 ಬಿಲಿಯನ್ ಡಾಲರ್​​ನಷ್ಟು ಸ್ಮಾರ್ಟ್​ಫೋನ್ ರಫ್ತಾಗಿತ್ತು. ಅಂದರೆ, ಈ ಬಾರಿ ಶೇ. 55ರಷ್ಟು ರಫ್ತು ಹೆಚ್ಚಿದೆ.

ಇದನ್ನೂ ಓದಿ: ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಜೊತೆಯಾದ ಬಿಇಎಲ್ ಮತ್ತು ಎಲ್ ಅಂಡ್ ಟಿ

ಸ್ಮಾರ್ಟ್​ಫೋನ್ ರಫ್ತು ಬಿದ್ದಿದ್ದು ಸರ್ಕಾರದ ಪಿಎಲ್​ಐ ಸ್ಕೀಮ್ ವಿಫಲವಾಗಿದೆ ಎಂದೂ ಇತ್ತೀಚಿನ ವರದಿಗಳಲ್ಲಿ ಹೇಳಲಾಗಿತ್ತು. ಆದರೆ, ಐಸಿಇಎ ದತ್ತಾಂಶದ ಪ್ರಕಾರ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಕಳೆದ ಐದು ವರ್ಷಗಳಿಂದ ಭಾರತಕ್ಕೆ ಅತಿಹೆಚ್ಚು ರಫ್ತು ತಂದುಕೊಟ್ಟಿರುವುದು ಸ್ಮಾರ್ಟ್​ಫೋನ್​ಗಳೇ.

ಒಂದು ಕಾಲದಲ್ಲಿ ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್​ಫೋನ್​ಗಳು ಸರಬರಾಜಾಗುತ್ತಿದ್ದುದು ಚೀನಾದಿಂದಲೇ. ಇದೀಗ ಭಾರತವು ಚೀನಾವನ್ನು ಈ ವಿಚಾರದಲ್ಲಿ ಹಿಂದಿಕ್ಕಿದೆ. ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್​ಫೋನ್ ರಫ್ತು ಮಾಡುತ್ತಿರುವುದು ಭಾರತವೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ