ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಜೊತೆಯಾದ ಬಿಇಎಲ್ ಮತ್ತು ಎಲ್ ಅಂಡ್ ಟಿ
AMCA 5th generation fighter jet project: ಭಾರತದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಎಂಸಿಎ) ಪ್ರಾಜೆಕ್ಟ್ನಲ್ಲಿ ಭಾಗಿಯಾಗಲು ಬಿಇಎಲ್ ಮತ್ತು ಎಲ್ ಅಂಡ್ ಟಿ ಜೊತೆ ಸೇರಲಿವೆ. ಎರಡೂ ದಿಗ್ಗಜ ಸಂಸ್ಥೆಗಳು ಜೊತೆಯಾಗಿ ಕನ್ಸಾರ್ಟಿಯಂ ರಚಿಸಿ ಯೋಜನೆಗೆ ಇಒಐ ಸಲ್ಲಿಸಲಿವೆ. ಇನ್ನೊಂದೆಡೆ ಎಚ್ಎಎಲ್ ಕೂಡ ಒಂದೆರಡು ಖಾಸಗಿ ಕಂಪನಿಗಳ ಜೊತೆಗೂಡಿ ಇಒಐ ಸಲ್ಲಿಸಲು ಅಣಿಯಾಗುತ್ತಿದೆ.

ನವದೆಹಲಿ, ಸೆಪ್ಟೆಂಬರ್ 24: ಐದನೇ ತಲೆಮಾರಿನ ಯುದ್ಧವಿಮಾನಗಳನ್ನು (Fifth Gen Fighter Jets) ನಿರ್ಮಾಣ ಮಾಡುವ ಭಾರತೀಯ ವಾಯುಪಡೆಯ (Indian Air Force) ಪ್ರಯತ್ನಕ್ಕೆ ಕಾರ್ಪೊರೇಟ್ ವಲಯದಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಎಂಸಿಎ ಯೋಜನೆಯಲ್ಲಿ (AMCA project) ಪಾಲ್ಗೊಳ್ಳಲು ಸರ್ಕಾರದ ಎಕ್ಸ್ಪ್ರೆಸ್ ಆಫ್ ಇಂಟರೆಸ್ಟ್ (EoI- Express of Interest) ಆಹ್ವಾನಿಸಿದೆ. ಎಚ್ಎಎಲ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ಎಲ್ ಅಂಡ್ ಟಿ ಮತ್ತು ಬಿಇಎಲ್ ಸಂಸ್ಥೆಗಳು ಜಂಟಿಯಾಗಿ ಈ ಯೋಜನೆಗೆ ಪ್ರಯತ್ನಿಸಲು ಹೊರಟಿವೆ.
ಈಗಾಗಲೇ ಪ್ರಮುಖ ಡಿಫೆನ್ಸ್ ಪ್ರಾಜೆಕ್ಟ್ಗಳನ್ನು ಕೈಗೊಂಡು ಗಮನ ಸೆಳೆದಿರುವ ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಲ್ ಅಂಡ್ ಟಿ ಜೊತೆಗಾಗಿ ಕನ್ಸಾರ್ಟಿಯಂ ಮಾಡಿಕೊಂಡಿವೆ. ಈ ಎರಡೂ ಕಂಪನಿಗಳು ಎಲ್ಸಿಎ ಯುದ್ಧವಿಮಾನಗಳ ತಯಾರಿಕೆಯಲ್ಲಿ ಅನುಭವ ಹೊಂದಿವೆ. ಭಾರತದ ಮಹತ್ವಾಕಾಂಕ್ಷಿ ಎಎಂಸಿಎ ಪ್ರಾಜೆಕ್ಟ್ನಲ್ಲಿ ಈ ಗುಂಪು ಮಹತ್ತರ ಪಾತ್ರ ವಹಿಸಬಹುದು.
ಇದನ್ನೂ ಓದಿ: ಆಫ್ರಿಕಾದಲ್ಲಿ ಭಾರತದ ಮೊದಲ ಡಿಫೆನ್ಸ್ ತಯಾರಿಕಾ ಘಟಕ; ಮೊರಾಕ್ಕೋಕ್ಕೆ ರಕ್ಷಣಾ ಸಚಿವರ ಐತಿಹಾಸಿಕ ಭೇಟಿ
ಎಚ್ಎಎಲ್ ಜೊತೆ ಸೇರಲು 28 ಕಂಪನಿಗಳ ಆಸಕ್ತಿ
ಎಎಂಸಿಎ ಯೋಜನೆಯಲ್ಲಿ ಪಾಲ್ಗೊಳ್ಳಲು ಎಚ್ಎಎಲ್ ಸಿದ್ಧವಿದೆ. ಆದರೆ, ಯೋಜನೆಗೆ ರೂಪಿಸಲಾಗಿರುವ ಕೆಲ ನಿಯಮಗಳಿಂದಾಗಿ ಎಚ್ಎಎಲ್ ಏಕಾಂಗಿಯಾಗಿ ಈ ಪ್ರಾಜೆಕ್ಟ್ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸಹ-ಕಂಪನಿ ಅಥವಾ ಕಂಪನಿಗಳ ಅಗತ್ಯ ಇದೆ. ಬರೋಬ್ಬರಿ 28 ಖಾಸಗಿ ಕಂಪನಿಗಳು ಎಚ್ಎಎಲ್ ಜೊತೆ ನಿಲ್ಲಲು ಸಿದ್ಧವಾಗಿವೆ.
ಇವುಗಳ ಪೈಕಿ ಒಂದು ಅಥವಾ ಎರಡು ಕಂಪನಿಗಳ ಜೊತೆ ಸೇರಿಕೊಂಡು ಕನ್ಸಾರ್ಟಿಯಂ ರಚಿಸಲು ಎಚ್ಎಎಲ್ ನಿರ್ಧರಿಸಿದೆ. ಈ 28 ಕಂಪನಿಗಳ ಪೈಕಿ ಆ 1-2 ಕಂಪನಿಗಳನ್ನು ಶಾರ್ಟ್ಲಿಸ್ಟ್ ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಎಚ್ಎಎಲ್ ಒಂದು ಸಮಿತಿ ರಚಿಸಿದೆ.
ಇದನ್ನೂ ಓದಿ: ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ
ಕನ್ಸಾರ್ಟಿಯಂ ರಚಿಸಿ ಎಎಂಸಿಎ ಪ್ರೋಗ್ರಾಮ್ಗೆ ಇಒಐ ಸಲ್ಲಿಸಲು ಸೆಪ್ಟೆಂಬರ್ 30 ಡೆಡ್ಲೈನ್ ನಿಗದಿ ಮಾಡಲಾಗಿದೆ. ಅಷ್ಟರೊಳಗೆ ಎಚ್ಎಎಲ್ ತನ್ನ ಜೊತೆಗಾರ ಕಂಪನಿಗಳೊಂದಿಗೆ ಕನ್ಸಾರ್ಟಿಯಂ ರಚಿಸಿ, ಇಒಐ ಸಲ್ಲಿಸಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




