ಆಫ್ರಿಕಾದಲ್ಲಿ ಭಾರತದ ಮೊದಲ ಡಿಫೆನ್ಸ್ ತಯಾರಿಕಾ ಘಟಕ; ಮೊರಾಕ್ಕೋಕ್ಕೆ ರಕ್ಷಣಾ ಸಚಿವರ ಐತಿಹಾಸಿಕ ಭೇಟಿ
Tata Advanced Systems establish its defence manufacturing facility at Casablanca, Morocco: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 22 ಮತ್ತು 23ರಂದು ಮೊರಾಕ್ಕೋ ಪ್ರವಾಸದಲ್ಲಿದ್ದಾರೆ. ಈ ವೇಳೆ ಕಾಸಬ್ಲಾಂಕಾದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ನಿರ್ಮಿಸಿರುವ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಅನ್ನು ಉದ್ಘಾಟಿಸಲಿದ್ದಾರೆ. ಇದು ಹೊರದೇಶವೊಂದರಲ್ಲಿ ಭಾರತ ನಿರ್ಮಿಸಿರುವ ಮೊದಲ ಡಿಫೆನ್ಸ್ ತಯಾರಿಕಾ ಘಟಕ.

ನವದೆಹಲಿ, ಸೆಪ್ಟೆಂಬರ್ 22: ರಕ್ಷಣಾ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಬಲವಾಗಿ ಬೆಳೆಯುತ್ತಿರುವ ಭಾರತ ಈಗ ಹೊಸ ಸೀಮೋಲಂಘನೆಯ ಸಾಹಸ ಮಾಡಿದೆ. ವಿದೇಶದಲ್ಲಿ ಭಾರತದ ಮೊದಲ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕವೊಂದು (Defence Manufacturing facility) ಸ್ಥಾಪನೆಯಾಗಿದೆ. ಆಫ್ರಿಕಾ ಖಂಡಕ್ಕೆ ಸೇರಿದ ಮೊರಾಕ್ಕೋ ದೇಶದ ಬಂದರು ನಗರಿ ಕಾಸಬ್ಲಾಂಕಾದಲ್ಲಿ (Casablanca) ಭಾರತವು ರಕ್ಷಣಾ ತಯಾರಿಕಾ ಘಟಕ ಸ್ಥಾಪಿಸಿದೆ. ಹಲವಾರು ದೇಶಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿರುವ ಭಾರತ ಇದೇ ಮೊದಲ ಬಾರಿಗೆ ವಿದೇಶದಲ್ಲೇ ತನ್ನ ಶಸ್ತ್ರಾಸ್ತ್ರ ತಯಾರಿಸುವ ಕೆಲಸ ಮಾಡುತ್ತಿದೆ. ಆ ಮಟ್ಟಿಗೆ ಇದು ಐತಿಹಾಸಿಕ ಹೆಜ್ಜೆಯಾಗಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೊರಾಕ್ಕೋಗೆ ಎರಡು ದಿನದ ಭೇಟಿ ನೀಡುತ್ತಿರುವುದು ಕೂಡ ಮಹತ್ವದ ಬೆಳವಣಿಗೆ. ಭಾರತದ ರಕ್ಷಣಾ ಸಚಿವರೊಬ್ಬರು ಈ ದೇಶಕ್ಕೆ ಈವರೆಗೆ ಅಧಿಕೃತವಾಗಿ ಕಾಲಿಟ್ಟಿರಲಿಲ್ಲ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (Tata Advanced Systems) ಸಂಸ್ಥೆ ಮೊರಾಕ್ಕೋದ ಕಾಸಬ್ಲಾಂಕಾದ ಬೆರೆಚಿದ್ ಎನ್ನುವ ಪ್ರಾಂತ್ಯದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪಿಸಿದೆ. ರಾಜನಾಥ್ ಸಿಂಗ್ ಇದರ ಉದ್ಘಾಟನೆ ಮಾಡಲಿದ್ದಾರೆ. ಇದು ವಿದೇಶವೊಂದರಲ್ಲಿ ಭಾರತದ ಮೊದಲ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಸೌಕರ್ಯ ಎನಿಸಿದೆ.
ಮೊರಾಕ್ಕೋದಲ್ಲಿರುವ ಭಾರತದ ಡಿಫೆನ್ಸ್ ತಯಾರಿಕಾ ಘಟಕದ ವಿಶೇಷತೆಗಳೇನು?
- ಭಾರತದ ಡಿಆರ್ಡಿಒ ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ 8×8 ವ್ಹೀಲ್ಡ್ ಆರ್ಮೋರ್ಡ್ ಪ್ಲಾಟ್ಫಾರ್ಮ್ (Wheeled Armoured Platform) ಅನ್ನು ಈ ಘಟಕದಲ್ಲಿ ಅಸೆಂಬಲ್ ಮಾಡಲಾಗುತ್ತದೆ.
ಇದನ್ನೂ ಓದಿ: ಅಮೆರಿಕಕ್ಕೆ ಹೋಗಲು ಎಚ್1ಬಿ ಸೇರಿ ಹಲವು ವಿಧದ ವೀಸಾಗಳು; ಇಲ್ಲಿದೆ ಸಂಪೂರ್ಣ ಮಾಹಿತಿ
- ವ್ಹಾಪ್ ವಾಹನವು (WhaP vehicle) ಎಲ್ಲಾ ರೀತಿಯ ಹವಾಮಾನ ಮತ್ತು ಪ್ರದೇಶಗಳಲ್ಲೂ ಕ್ಷಿಪಣಿ, ಬಾಂಬು ಇತ್ಯಾದಿ ಹಲವು ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗಲು ಉಪಯುಕ್ತವಾಗಿದೆ.
- ಮೊರಾಕ್ಕೋದ ರಾಯಲ್ ಶಸಸ್ತ್ರ ಪಡೆಗಳ ಜೊತೆ ಜಂಟಿಯಾಗಿ ಈ ಘಟಕವನ್ನು ಟಿಎಎಸ್ಎಲ್ ನಿರ್ವಹಿಸುತ್ತದೆ.
- ಆಫ್ರಿಕಾದ ಇತರ ದೇಶಗಳಿಗೆ ಸರಬರಾಜು ಮಾಡಲು ಈ ಘಟಕವನ್ನು ಬಳಸಿಕೊಳ್ಳಲಾಗಬಹುದು.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ನೀಡಿದ ಮಾಹಿತಿ
Kingdom of Morocco’s Royal Armed Forces and Tata Advanced Systems sign deal for local production of Wheeled Armoured Platform.
Developed in collaboration with the DRDO and Tata Motors, this marks a significant milestone as we expand our footprint overseas as a Defence OEM.… pic.twitter.com/6YcXWTFR7S
— Tata Advanced Systems Limited (@tataadvanced) September 30, 2024
ಕಾಸಾಬ್ಲಾಂಕಾದಲ್ಲಿ ಸ್ಥಾಪನೆಯಾಗಿರುವ ಈ ಮಿಲಿಟರಿ ಫ್ಯಾಕ್ಟರಿಯಲ್ಲಿ ಒಂದು ವರ್ಷಕ್ಕೆ 100 ಮಿಲಿಟರಿ ವಾಹನಗಳನ್ನು ತಯಾರಿಸಬಹುದು. ಕಳೆದ ವರ್ಷವೇ ಇದರ ಸ್ಥಾಪನೆಗೆ ಒಪ್ಪಂದವಾಗಿತ್ತು. ಈ ಘಟಕದಲ್ಲಿ ಸುಮಾರು 350 ಮಂದಿ ಕೆಲಸ ಮಾಡುತ್ತಾರೆ. ಈ ವಾಹನ ತಯಾರಿಕೆಯಲ್ಲಿ ಹೆಚ್ಚಿನ ಚಟುವಟಿಕೆ ಭಾರತದಲ್ಲೇ ಆಗುತ್ತದೆ. ಮೊರಾಕ್ಕೋದ ಈ ಘಟಕದಲ್ಲಿ ಪ್ರಮುಖವಾಗಿ ಅಸೆಂಬ್ಲಿಂಗ್ ಆಗುತ್ತದೆ. ಬಿಡಿಭಾಗಗಳನ್ನು ಭಾರತದಲ್ಲೇ ಇರುವ ಟಾಟಾ ಫೆಸಿಲಿಟಿಯಲ್ಲಿ ನಿರ್ಮಾಣವಾಗಬಹುದು.
ಇದನ್ನೂ ಓದಿ: ಈ ವಿದೇಶೀ ಕಂಪನಿಗಳಿಗೆ ಭಾರತ ಕೊಡೋ ದುಡ್ಡು ಅದರ ಡಿಫೆನ್ಸ್ ಬಜೆಟ್ಗೆ ಸಮ?
ಗಟ್ಟಿಗೊಳ್ಳುತ್ತಿರುವ ಭಾರತ ಮೊರಾಕ್ಕೋ ಸಂಬಂಧ
ಭಾರತ ಮತ್ತು ಮೊರಾಕ್ಕೋ ದೇಶಗಳ ನಡುವೆ ಇತ್ತೀಚೆಗೆ ಸಂಬಂಧ ಗಾಢಗೊಳ್ಳುತ್ತಿದೆ. ಅದರಲ್ಲೂ ಮಿಲಿಟರಿ ಸಂಬಂಧ ಹೆಚ್ಚುತ್ತಿದೆ. 2023ರಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ನಿರ್ಮಿಸಿದ ಆರು ಚಕ್ರಗಳ 92 ಮಿಲಿಟರಿ ಟ್ರಕ್ಗಳನ್ನು ಮೊರಾಕ್ಕೋಗೆ ಸರಬರಾಜು ಮಾಡಲಾಗಿತ್ತು. ಎಲ್ಪಿಟಿಎ 2445 ಡಿಎಫೆನ್ಸ್ ಡಂಪ್ ಟ್ರಕ್ಗಳನ್ನು ಖರೀದಿಸಲು ಮೊರಾಕ್ಕೋ ಕಳೆದ ವರ್ಷ ಒಪ್ಪಂದಕ್ಕೆ ಸಹಿಹಾಕಿದೆ.
ಅಮೆರಿಕ, ಚೀನಾ, ಇಸ್ರೇಲ್ ಮೊದಲಾದ ದೇಶಗಳೂ ಕೂಡ ಮೊರಾಕ್ಕೋಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ. ಈ ಪೈಪೋಟಿ ನಡುವೆ ಭಾರತ ಹಂತ ಹಂತವಾಗಿ ಯಶಸ್ಸು ಗಳಿಸುತ್ತಿದೆ. ಮೊರಾಕ್ಕೋದ ಬಂದರುಗಳಿಗೆ ಭಾರತದ ನೌಕಾಪಡೆಯ ಹಡಗುಗಳು ಹೋಗಿ ಬಂದು ಮಾಡುತ್ತಿವೆ. ಶಸ್ತ್ರಾಸ್ತ್ರ ಮಾರಾಟ ಮಾತ್ರವಲ್ಲ, ಮಿಲಿಟರಿ ತರಬೇತಿ, ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಇತ್ಯಾದಿ ಕಾರ್ಯಗಳಲ್ಲೂ ನೆರವಾಗಲು ಎರಡೂ ದೇಶಗಳ ಮಧ್ಯೆ ಎಂಒಯುವೊಂದು ಏರ್ಪಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Mon, 22 September 25




