ಈ ವಿದೇಶೀ ಕಂಪನಿಗಳಿಗೆ ಭಾರತ ಕೊಡೋ ದುಡ್ಡು ಅದರ ಡಿಫೆನ್ಸ್ ಬಜೆಟ್ಗೆ ಸಮ?
India pays foreign shipping companies 75 billion dollars a year: ಒಂದು ಕಾಲದಲ್ಲಿ ಹಡಗು ಮತ್ತು ಸಾಗರ ಕ್ಷೇತ್ರದಲ್ಲಿ ನಿಷ್ಣಾತರಾಗಿದ್ದ ಭಾರತ ಈಗ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಶನಿವಾರ (ಸೆ. 19) ‘ಸಮುದ್ರ್ ಸೆ ಸಮೃದ್ಧಿ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕುತೂಹಲಕಾರಿ ಸಂಗತಿ ತಿಳಿಸಿದ್ದಾರೆ. ವಿದೇಶೀ ಶಿಪ್ಪಿಂಗ್ ಕಂಪನಿಗಳಿಗೆ ಭಾರತ ವರ್ಷಕ್ಕೆ 6 ಲಕ್ಷ ಕೋಟಿ ರೂ ನೀಡುತ್ತದಂತೆ.

ನವದೆಹಲಿ, ಸೆಪ್ಟೆಂಬರ್ 21: ಶಿಪ್ಪಿಂಗ್ ತಯಾರಿಕೆಯಲ್ಲಿ ಪರಾವಲಂಬನೆಯೇ ಅಧಿಕ ಇರುವ ಭಾರತ ವಿದೇಶಗಳ ಶಿಪ್ಪಿಂಗ್ ಕಂಪನಿಗಳಿಗೆ ಪ್ರತೀ ವರ್ಷ ಪಾವತಿಸುವ ಶುಲ್ಕ 75 ಬಿಲಿಯನ್ ಎನ್ನಲಾಗಿದೆ. 75 ಬಿಲಿಯನ್ ಎಂದರೆ ಸುಮಾರು ಆರು ಲಕ್ಷ ಕೋಟಿ ರೂ. ಈ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಬಹಿರಂಗಪಡಿಸಿದ್ದಾರೆ. ಇವತ್ತು ದೇಶವನ್ನುದ್ದೇಶಿಸಿ ಮಾತನಾಡುವ ಮುನ್ನ, ಅವರು ನಿನ್ನೆ ಭಾವನಗರ್ನಲ್ಲಿ ‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಿದೇಶೀ ಶಿಪ್ಪಿಂಗ್ ಕಂಪನಿಗಳ ಮೇಲೆ ಭಾರತ ಎಷ್ಟು ಅವಲಂಬಿತವಾಗಿದೆ ಎಂದು ಮಾಹಿತಿ ನೀಡಿದ ಅವರು, ಸಾಗರ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಅಗತ್ಯತೆ ಇದೆ ಎಂಬ ವಿಚಾರಕ್ಕೆ ಒತ್ತುಕೊಟ್ಟಿದ್ದಾರೆ.
ಇದನ್ನೂ ಓದಿ: ಜಿಎಸ್ಟಿ ಬಗ್ಗೆ ಹೇಳುವಾಗ ಪ್ರಧಾನಿ ಮೋದಿ ಬೆಂಗಳೂರನ್ನು ಪ್ರಸ್ತಾಪಿಸಿದ್ದು ಯಾಕೆ? ಇಲ್ಲಿದೆ ಅದರ ಹಿನ್ನೆಲೆ
‘ವಿದೇಶೀ ಶಿಪ್ಪಿಂಗ್ ಕಂಪನಿಗಳಿಗೆ ಪ್ರತೀ ವರ್ಷ ಭಾರತ 75 ಬಿಲಿಯನ್ ಡಾಲರ್ ಪಾವತಿಸುತ್ತದೆ. ಇದು ಭಾರತದ ರಕ್ಷಣಾ ಬಜೆಟ್ಗೆ ಸಮ. ವಿದೇಶೀ ಹಡಗುಗಳ ಮೇಲೆ ದಶಕಗಳಿಂದ ಹೊಂದಿರುವ ಅವಲಂಬನೆಯಿಂದಾಗಿ ಸಾಕಷ್ಟು ಸಂಪನ್ಮೂಲ ಕಳೆದುಕೊಂಡಿದ್ದೇವೆ. ಭಾರತದಿಂದಾಗಿ ವಿದೇಶಗಳಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಿದೆ’ ಎಂದು ನರೇಂದ್ರ ಮೋದಿ ತಿಳಿಸಿದರು.
ಐದು ದಶಕಗಳ ಹಿಂದಿನವರೆಗೂ ಭಾರತದ ಹಡಗು ಪ್ರಾಬಲ್ಯ
ಐವತ್ತು ವರ್ಷಗಳಷ್ಟು ಈಚಿನವರೆಗೂ ಭಾರತದ ಹಡಗುಗಳು ದೇಶದ ಶೇ. 40ರಷ್ಟು ವ್ಯಾಪಾರವನ್ನು ನಿರ್ವಹಿಸುತ್ತಿದ್ದವು. ತಪ್ಪಾದ ನೀತಿಗಳ ಪರಿಣಾಮವಾಗಿ ಇದು ಕೇವಲ ಶೇ. 5ಕ್ಕೆ ಇಳಿದಿದೆ. ಉಳಿದ ಶೇ. 95ರಷ್ಟು ಸರಕುಗಳ ಸಾಗಣೆಗೆ ವಿದೇಶೀ ಹಡಗುಗಳ ಮೇಲೆ ಅವಲಂಬಿತವಾಗುವಂತಾಗಿದೆ ಎಂದು ಪ್ರಧಾನಿಗಳು ಮಾಹಿತಿ ನೀಡಿದರು.
2047ಕ್ಕೆ ಭಾರತದ ಸಾಗರಶಕ್ತಿ ಮತ್ತೆ ಉತ್ತುಂಗಕ್ಕೆ: ಮೋದಿ
ಹಡಗುಗಳ ತಯಾರಿಕೆಗೆ ಉತ್ತೇಜಿಸುವಂತಹ ಹೊಸ ಸುಧಾರಣೆಗಳನ್ನು ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಹಡಗುಗಳ ತಯಾರಿಕೆ ಮಾತ್ರವಲ್ಲದೆ, ಪೋರ್ಟ್ಗಳ ಕಾರ್ಯನಿರ್ವಹಣೆಯನ್ನು ಸರಳಗೊಳಿಸಲೂ ಈ ಸುಧಾರಣೆಗಳು ಸಹಾಯಕವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್ಟಿ ಸುಧಾರಣೆ ಬಗ್ಗೆ ಮೋದಿ
ಈ ನಿಟ್ಟಿನಲ್ಲಿ ‘ಒಂದು ದೇಶ ಒಂದು ದಾಖಲೆ’ (One Nation One Document), ಮತ್ತು ‘ಒಂದು ದೇಶ ಒಂದು ಪೋರ್ಟ್’ ಪ್ರಕ್ರಿಯೆಗಳನ್ನು ಜಾರಿಗೆ ತಂದು ವ್ಯಾಪಾರ ಚಟುವಟಿಕೆಯನ್ನು ಸರಳಗೊಳಿಸುವ ಪ್ರಯತ್ನ ಆಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




