ಗ್ರಾಚುಟಿ ನಿಯಮ ಏನಿದೆ? ಎಷ್ಟು ವರ್ಷದ ಸರ್ವಿಸ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
Gratuity calculation in India: ಭಾರತದಲ್ಲಿ ಉದ್ಯೋಗಿಗಳಿಗೆ ಇಪಿಎಫ್, ಗ್ರಾಚುಟಿ ಇತ್ಯಾದಿ ಸೌಲಭ್ಯಗಳನ್ನು ಕಂಪನಿಗಳು ಒದಗಿಸುತ್ತವೆ. ಒಂದು ಕಂಪನಿಯಲ್ಲಿ ಸುದೀರ್ಘ ಕಾಲ ಕೆಲಸ ಮಾಡಿ ಹೊರಗೆ ಹೋಗುತ್ತಿರುವ ಉದ್ಯೋಗಿಗೆ ಗೌರವಧನವಾಗಿ ಗ್ರಾಚುಟಿಯನ್ನು ನೀಡಲಾಗುತ್ತದೆ. ಕನಿಷ್ಠ 5 ವರ್ಷ ಒಂದೇ ಕಂಪನಿಯಲ್ಲಿ ಸರ್ವಿಸ್ ಮಾಡಿದವರಿಗೆ ಇದು ಸಿಗುತ್ತದೆ.

ಇವತ್ತು ಹೆಚ್ಚಿನ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವೇಳೆ ಪಿಎಫ್ (EPF), ಗ್ರಾಚುಟಿ ಹಣ ಸಿಗುತ್ತದೆ. ಉದ್ಯೋಗಿ ನಿವೃತ್ತರಾದಾಗ ಅಥವಾ ಕೆಲಸ ಬಿಟ್ಟಾಗ ಕಂಪನಿಯು ಅವರಿಗೆ ಗ್ರಾಚುಟಿ (Gratuity) ನೀಡಿ ಬೀಳ್ಕೊಡುತ್ತದೆ. ಇಪಿಎಫ್ ಮತ್ತು ಗ್ರಾಚುಟಿಗಳು ಉದ್ಯೋಗಿಗಳ ಭವಿಷ್ಯವನ್ನು ಉಜ್ವಲಗೊಳಿಸಲು ನೆರವಾಗುತ್ತವೆ. ಒಂದು ಕಂಪನಿಯಲ್ಲಿ ಕನಿಷ್ಠ 5 ವರ್ಷ ಸತತವಾಗಿ ಸೇವೆ ಸಲ್ಲಿಸಿರುವ ಉದ್ಯೋಗಿಯು ಗ್ರಾಚುಟಿಗೆ ಅರ್ಹರಾಗಿರುತ್ತಾರೆ.
ಗ್ರಾಚುಟಿ ಎನ್ನುವ ಹೆಸರು ಬಂದಿದ್ದು?
ಗ್ರಾಚುಟಿ ಎಂಬುದು ಒಂದು ಕಂಪನಿಯು ತನ್ನಲ್ಲಿ ಒಬ್ಬ ಉದ್ಯೋಗಿ ಹೆಚ್ಚಿನ ಅವಧಿ ಕೆಲಸ ಮಾಡಿದ್ದಕ್ಕೆ ಕೃತಾರ್ಥವಾಗಿ ನೀಡುವ ಗೌರವಧನ. ಇಂಗ್ಲೀಷ್ನ ಗ್ರಾಟಿಟ್ಯೂಡ್ ಪದದಿಂದ ಬಂದಿದ್ದು ಗ್ರಾಚುಟಿ. ಉದ್ಯೋಗಿಗೆ ಕಂಪನಿಯು ಸಂಬಳದ ಜೊತೆಗೆ ನೀಡುವ ಗೌರವಧನ ಇದು.
ಎಲ್ಲಾ ಕಂಪನಿಗಳು ನೀಡುತ್ತವಾ ಗ್ರಾಚುಟಿ?
ಭಾರತದಲ್ಲಿ ಕನಿಷ್ಠ 10 ಉದ್ಯೋಗಿಗಳಿರುವ ಕಂಪನಿಗಳು 1972ರ ಪೇಮೆಂಟ್ ಆಫ್ ಗ್ರಾಚುಟಿ ಆ್ಯಕ್ಟ್ ಅಡಿಗೆ ಬರುತ್ತವೆ. ಕನಿಷ್ಠ 5 ವರ್ಷ ಸರ್ವಿಸ್ ದಾಟಿದ ಉದ್ಯೋಗಿಗಳಿಗೆ ಗ್ರಾಚುಟಿ ನೀಡಬೇಕೆನ್ನುವ ನಿಯಮ ಇದೆ.
ಇದನ್ನೂ ಓದಿ: ಐದು ವರ್ಷ ಪ್ರೀಮಿಯಮ್ ಕಟ್ಟಿ, ಜೀವನ ಪೂರ್ತಿ ಆದಾಯ ಗಳಿಸಿ; ಇದು ಎಲ್ಐಸಿಯ ಜೀವನ್ ಉತ್ಸವ್ ಪಾಲಿಸಿ
ಪಿಎಫ್ ಆದರೆ ನಿಮ್ಮ ಪೇರೋಲ್ನಲ್ಲಿ ನಮೂದಾಗಿರುತ್ತದೆ. ಆದರೆ, ಗ್ರಾಚುಟಿ ಎಂಬುದು ಹೊರನೋಟಕ್ಕೆ ಗೊತ್ತಾಗುವುದಿಲ್ಲ. ನಿಮ್ಮ ಕಂಪನಿಯಲ್ಲಿ ಗ್ರಾಚುಟಿ ಪಾಲಿಸಿ ಇದೆಯಾ ಎಂಬುದನ್ನು ಎಚ್ಆರ್ ವಿಭಾಗದಲ್ಲಿ ವಿಚಾರಿಸಿಯೇ ತಿಳಿಯಬೇಕಾಗಬಹುದು.
5 ವರ್ಷ ಸರ್ವಿಸ್ ಮಾಡಿದರೆ ಎಷ್ಟು ಗ್ರಾಚುಟಿ ಸಿಗುತ್ತದೆ?
ಗ್ರಾಚುಟಿ ಎಷ್ಟು ಲೆಕ್ಕ ಮಾಡಲು ಈ ಮುಂದಿನ ಸೂತ್ರ ಇದೆ:
ಕೊನೆಯದಾಗಿ ಪಡೆದ ಸಂಬಳ x ಕೆಲಸ ಮಾಡಿದ ವರ್ಷಗಳು x 15 / 26
ನೀವು 5 ವರ್ಷ ಕೆಲಸ ಮಾಡಿದ್ದು, ಕೊನೆಯ ಬಾರಿ ಪಡೆದ ಸಂಬಳದ ಮೂಲವೇತನ 40,000 ರೂ ಎಂದಿಟ್ಟುಕೊಳ್ಳಿ. ಆಗ ಗ್ರಾಚುಟಿ ಲೆಕ್ಕ ಹೀಗಿರುತ್ತದೆ:
40000 x 5 x 15 / 26
= 30,00,000 / 26
= 1,15,384
ಅಂದರೆ, ನಿಮಗೆ ಸುಮಾರು 1.15 ಲಕ್ಷ ರೂ ಗ್ರಾಚುಟಿ ಸಿಗುತ್ತದೆ.
ಹಾಗೆಯೇ, 20 ವರ್ಷ ಸೇವೆ ಮಾಡಿರುತ್ತೀರಿ. ಕೊನೆಯದಾಗಿ ಪಡೆದ ಸಂಬಳದ ಮೂಲವೇತನ 80,000 ರೂ ಆಗಿರುತ್ತದೆ ಎಂದಿಟ್ಟುಕೊಳ್ಳಿ. ಆಗ ಗ್ರಾಚುಟಿ ಲೆಕ್ಕಾಚಾರ ಹೀಗಿರುತ್ತದೆ:
80000 x 20 x 15 / 26
= 9,23,076 ರೂ ಆಗುತ್ತದೆ.
ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಬೇಕು; ಆದರೆ ಒಡವೆ ಖರೀದಿಸಿದರೆ ಲಾಭ ಸಿಗಲು ಹಲವು ವರ್ಷಗಳೇ ಬೇಕು
ಗಮನಿಸಬೇಕಾದ ಮತ್ತೆರಡು ಪ್ರಮುಖ ಸಂಗತಿ ಎಂದರೆ, ನೀವು 5 ವರ್ಷ 7 ತಿಂಗಳು ಕೆಲಸ ಮಾಡಿದ್ದರೆ ಅದನ್ನು 6 ವರ್ಷಕ್ಕೆ ರೌಂಡಾಫ್ ಮಾಡಲಾಗುತ್ತದೆ. ಮತ್ತೊಂದು ಸಂಗತಿ ಎಂದರೆ, ಪ್ರಸಕ್ತ ಗ್ರಾಚುಟಿ ಕಾಯ್ದೆ ಪ್ರಕಾರ ಗರಿಷ್ಠ ಗ್ರಾಚುಟಿ 20 ಲಕ್ಷ ರೂಗೆ ಮಿತಿಗೊಳಿಸಲಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




