AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಏರೋಸ್ಪೇಸ್ ಉದ್ಯಮ ಬೆಳೆಸಿ… ವಿದೇಶಗಳಲ್ಲಿರುವ ಎನ್​ಆರ್​ಐಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿರುವ ಸರ್ಕಾರ

Indian aerospace companies looking for NRI's having expertise in high tech: ಭಾರತದಲ್ಲಿ ಏರೋಸ್ಪೇಸ್ ಉದ್ಯಮವನ್ನು ಬೆಳೆಸಲು ಸರ್ಕಾರ ಪೂರ್ಣ ಗಮನ ಹರಿಸುತ್ತಿದೆ. ಅಡ್ವಾನ್ಸ್ಡ್ ಮೆಟೀರಿಯಲ್ಸ್, ಪ್ರೊಪಲ್ಷನ್ ಸಿಸ್ಟಂ, ಟರ್ಬೈನ್ ಬ್ಲೇಡ್ ಇತ್ಯಾದಿಯ ತಯಾರಿಕೆಯಲ್ಲಿ ಪರಿಣಿತರಾಗಿರುವವರ ಅಗತ್ಯ ಭಾರತಕ್ಕಿದೆ. ಸಿವಿಲಿಯನ್ ಮತ್ತು ಮಿಲಿಟರಿ ವಿಮಾನಗಳ ಎಂಜಿನ್ ಇತ್ಯಾದಿ ಪ್ರಮುಖ ಭಾಗಗಳು ಭಾರತದಲ್ಲೇ ತಯಾರಾಗಬೇಕೆಂಬುದು ಸರ್ಕಾರದ ಇರಾದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಪರಿಣಿತರಾಗಿರುವ ಎನ್​ಆರ್​ಐಗಳನ್ನು ಭಾರತೀಯ ಕಂಪನಿಗಳು ಮುಕ್ತವಾಗಿ ಆಹ್ವಾನಿಸುತ್ತಿವೆ.

ಭಾರತದಲ್ಲಿ ಏರೋಸ್ಪೇಸ್ ಉದ್ಯಮ ಬೆಳೆಸಿ... ವಿದೇಶಗಳಲ್ಲಿರುವ ಎನ್​ಆರ್​ಐಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿರುವ ಸರ್ಕಾರ
ವಿಮಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2025 | 6:29 PM

Share

ನವದೆಹಲಿ, ಸೆಪ್ಟೆಂಬರ್ 24: ಯುದ್ಧದಲ್ಲಿ ವೈಮಾನಿಕ ಶಕ್ತಿ (Aerospace sector) ಹೆಚ್ಚು ಇರುವವರು ಮೇಲುಗೈ ಸಾಧಿಸುತ್ತಾರೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿರುವ ಸಂಗತಿ. ಏರೋಸ್ಪೇಸ್ ಕ್ಷೇತ್ರದಲ್ಲಿ ಇತರ ದೇಶಗಳ ಮೇಲೆ ಭಾರತ ಅವಲಂಬಿತವಾಗಿರುವುದೇ ಹೆಚ್ಚು. ಇದನ್ನು ತಪ್ಪಿಸಲು ದೇಶೀಯವಾಗಿ ಏರೋಸ್ಪೇಸ್ ಕ್ಷೇತ್ರವನ್ನು ಬೆಳೆಸಲು ಸರ್ಕಾರ ಗಮನ ಕೊಟ್ಟಿದೆ. ಆದರೆ, ಎಂಜಿನ್ ಮಟ್ಟದಿಂದ ಸ್ವಂತವಾಗಿ ವಿಮಾನಗಳನ್ನು ತಯಾರಿಸುವುದು ಸದ್ಯಕ್ಕೆ ಕಡುಕಷ್ಟವಾಗಿರುವ ಸಂಗತಿ. ಹೀಗಾಗಿ, ವಿದೇಶಗಳಲ್ಲಿ ನೆಲಸಿರುವ ಮತ್ತು ಏರೋಸ್ಪೇಸ್ ಉದ್ಯಮದಲ್ಲಿ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಬರುವಂತೆ ಸರ್ಕಾರ ಆಹ್ವಾನಿಸುತ್ತಿದೆ.

ವಿಮಾನಗಳ ಎಂಜಿನ್ ತಯಾರಿಸುವ ತಂತ್ರಜ್ಞಾನ ತಿಳಿದಿರುವುದು ನಾಲ್ಕೈದು ದೇಶಗಳಿಗೆ ಮಾತ್ರ. ಅಮೆರಿಕ, ರಷ್ಯಾ, ಫ್ರಾನ್ಸ್ ದೇಶದ ಕಂಪನಿಗಳು ವಿಮಾನ ಎಂಜಿನ್ ತಯಾರಿಸುವ ಪೂರ್ಣ ಸಾಮರ್ಥ್ಯ ಹೊಂದಿವೆ. ಚೀನಾ ಕೂಡ ಇತ್ತೀಚೆಗೆ ಈ ತಂತ್ರಜ್ಞಾನ ಕಲಿತಿದೆ. ಜನರಲ್ ಎಲೆಕ್ಟ್ರಿಕ್, ಪ್ರಾಟ್ ಅಂಡ್ ವಿಟ್ನೀ, ರಾಲ್ಸ್ ರಾಯ್ಸ್ ಮೊದಲಾದ ಕಂಪನಿಗಳು ವಿಶ್ವದ ಅನೇಕ ವಿಮಾನಗಳಿಗೆ ಎಂಜಿನ್ ತಯಾರಿಸಿಕೊಡುತ್ತವೆ. ಇಂಥ ಕಂಪನಿಗಳಲ್ಲಿ ಭಾರತೀಯ ಮೂಲದವರು ಬಹಳ ಮಂದಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಜೊತೆಯಾದ ಬಿಇಎಲ್ ಮತ್ತು ಎಲ್ ಅಂಡ್ ಟಿ

ಅಡ್ವಾನ್ಸ್ಡ್ ಮೆಟೀರಿಯಲ್ಸ್, ಪ್ರೊಪಲ್ಷನ್ ಸಿಸ್ಟಮ್ಸ್ ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನವನ್ನು ತಿಳಿದಿರುವ ಪರಿಣಿತರು ಭಾರತಕ್ಕೆ ಈಗ ಅತ್ಯಗತ್ಯವಾಗಿದೆ. ಟಾಟಾ, ಮಹೀಂದ್ರ, ಗೋದ್ರೇಜ್, ಎಲ್ ಅಂಡ್ ಟಿ ಮೊದಲಾದ ದೊಡ್ಡ ಕಾರ್ಪೊರೇಟ್ ಕಂಪನಿಗಳು ಏರೋಸ್ಪೇಸ್ ಉದ್ಯಮದಲ್ಲಿ ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಉನ್ನತ ತಂತ್ರಜ್ಞಾನದಲ್ಲಿ ಅನುಭವಿಯಾದ ತಜ್ಞರ ಅವಶ್ಯಕತೆ ಬಹಳ ಹೆಚ್ಚಿದೆ. ಟರ್ಬೈನ್ ಬ್ಲೇಡ್ ತಯಾರಿಕೆ, ಶಾಖ ನಿರೋಧಕಗಳು, ಏವಿಯಾನಿಕ್ಸ್ ಸಿಸ್ಟಂಗಳಂತಹ ಕ್ಷೇತ್ರದಲ್ಲಿ ಅನುಭವಿಗಳಾದವರನ್ನು ಸೆಳೆಯಲು ಭಾರತೀಯ ಕಂಪನಿಗಳು ಪೈಪೋಟಿ ನಡೆಸುತ್ತಿವೆ.

ವಿಶ್ವದ ಹೆಚ್ಚಿನ ವಿಮಾನಗಳು ಏರ್​ಬಸ್ ಮತ್ತು ಬೋಯಿಂಗ್ ಸಂಸ್ಥೆಗಳದ್ದಾಗಿವೆ. ಭಾರತದಲ್ಲಿ ಬೋಯಿಂಗ್ ವಿಮಾನದ ಅಸೆಂಬ್ಲಿಂಗ್ ನಡೆಯುತ್ತದಾದರೂ ಬಹಳ ಮುಖ್ಯವಾದ ಭಾಗಗಳು ಮತ್ತು ಲೋಹಗಳು ಅಮೆರಿಕದಲ್ಲಿ ಸಿದ್ಧಗೊಂಡು ಇಲ್ಲಿದೆ ಆಮದಾಗುತ್ತವೆ. ಭಾರತದಲ್ಲೇ ಸಂಪೂರ್ಣ ವಿಮಾನ ಸಿದ್ಧವಾಗಬೇಕಾದರೆ ಇಲ್ಲೇ ಎಲ್ಲವೂ ತಯಾರಾಗಬೇಕು. ಈ ಹಿನ್ನೆಲೆಯಲ್ಲಿ ಎಂಜಿನ್ ಇತ್ಯಾದಿ ಭಾಗಗಳ ತಯಾರಿಕೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ: ಆಫ್ರಿಕಾದಲ್ಲಿ ಭಾರತದ ಮೊದಲ ಡಿಫೆನ್ಸ್ ತಯಾರಿಕಾ ಘಟಕ; ಮೊರಾಕ್ಕೋಕ್ಕೆ ರಕ್ಷಣಾ ಸಚಿವರ ಐತಿಹಾಸಿಕ ಭೇಟಿ

ಎಂಜಿನ್ ಆಮದು ಮಾಡಿಕೊಂಡರೆ ಏನು ಸಮಸ್ಯೆ?

ಎಚ್​ಎಎಲ್​ನ ಎಲ್​ಸಿಎ ಜೆಟ್ ಯೋಜನೆಯ ಉದಾಹರಣೆ ಕಣ್ಮುಂದೆ ಇದೆ. ಎಚ್​ಎಎಲ್ ಸಂಸ್ಥೆ ತೇಜಸ್ ಯುದ್ಧವಿಮಾನ ತಯಾರಿಕೆಗೆ ನಿಂತು ಬಹಳ ಸಮಯ ಆಗಿದೆ. ಆದರೆ, ನಿಗದಿತ ಡೆಡ್​ಲೈನ್​ಗೆ ನಿಗದಿತ ಪ್ರಮಾಣದಲ್ಲಿ ವಿಮಾನಗಳನ್ನು ತಯಾರಿಸಲು ಎಚ್​​ಎಎಲ್​ಗೆ ಆಗಿಲ್ಲ. ಇದಕ್ಕೆ ಪ್ರಮುಖ ಕಾರಣ ಎಂಜಿನ್​ನದ್ದು. ಅಮೆರಿಕದಿಂದ ಎಂಜಿನ್ ಸರಬರಾಜು ಆಗದೇ ಹೋಗಿದ್ದು ಎಲ್​ಸಿಎ ತೇಜಸ್ ಯುದ್ಧವಿಮಾನದ ಯೋಜನೆ ವಿಳಂಬಗೊಂಡಿತ್ತು. ಈ ಕಾರಣಕ್ಕೆ ಸ್ವಂತವಾಗಿ ಎಂಜಿನ್ ಅಭಿವೃದ್ಧಿಪಡಿಸುವುದು ಭಾರತಕ್ಕೆ ಬಹಳ ಮುಖ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ