ನವದೆಹಲಿ, ನವೆಂಬರ್ 12: ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ. ಮರುಬಳಕೆ ಇಂಧನ ಉತ್ಪಾದನೆ ಹೆಚ್ಚುತ್ತಿರುವ ಜೊತೆಗೆ ಆ ಕ್ಷೇತ್ರದ ಉಪಕರಣಗಳ ತಯಾರಿಕೆಯಲ್ಲೂ ಭಾರತ ಸೈ ಎನಿಸಿದೆ. ಕಳೆದ ಎರಡು ವರ್ಷದಲ್ಲಿ ಭಾರತದಿಂದ ಸೋಲಾರ್ ಪಿವಿ ಮಾಡ್ಯೂಲ್ಗಳ ರಫ್ತು ಗಣನೀಯವಾಗಿ ಹೆಚ್ಚಿದೆ. 2021-22ದಿಂದ ಹಿಡಿದು 2023-24ರ ಹಣಕಾಸು ವರ್ಷದವರೆಗೆ ಫೋಟೋ ವೋಲ್ಟಾಯಿಕ್ ಸೆಲ್ಗಳ ರಫ್ತು 23 ಪಟ್ಟು ಹೆಚ್ಚಿದೆ. ಈ ಮುಂಚೆ ಭಾರತಕ್ಕೆ ಅಗತ್ಯವಾದ ಸೋಲಾರ್ ಮಾಡ್ಯೂಲ್ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ನಿವ್ವಳ ರಫ್ತುದಾರ ಎನಿಸಿದೆ.
ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಷಿಯಲ್ ಅನಾಲಿಸಿಸ್ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಎರಡು ಬಿಲಿಯನ್ ಡಾಲರ್ ಮೌಲ್ಯದ ಪಿವಿ ಮಾಡ್ಯೂಲ್ಗಳನ್ನು ರಫ್ತು ಮಾಡಿವೆ. ಇದರಲ್ಲಿ ಅಮೆರಿಕದ ಮಾರುಕಟ್ಟೆಗೆ ಬಹುತೇಕ ರಫ್ತು ಆಗಿದೆ. ಭಾರತೀಯ ಪಿವಿ ಮಾಡ್ಯೂಲ್ಗಳ ರಫ್ತಿನಲ್ಲಿ ಅಮೆರಿಕದ ಪಾಲು ಶೇ. 97ರಷ್ಟಿದೆ. ವಾರೀ ಎನರ್ಜೀಸ್, ಅದಾನಿ ಸೋಲಾರ್ ಮತ್ತು ವಿಕ್ರಮ್ ಸೋಲಾರ್ ಕಂಪನಿಗಳು ಅತಿಹೆಚ್ಚು ರಫ್ತು ಮಾಡಿವೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಹಣದುಬ್ಬರ ಶೇ. 6.21ಕ್ಕೆ ಏರಿಕೆ; 14 ತಿಂಗಳಲ್ಲೇ ಗರಿಷ್ಠ ಬೆಲೆ ಏರಿಕೆ ದರ
ಪಾಶ್ಚಿಮಾತ್ಯ ದೇಶಗಳು, ಅದರಲ್ಲೂ ಅಮೆರಿಕ ದೇಶ ಚೀನಾಗೆ ಪರ್ಯಾಯವಾಗಿರುವ ಮಾರುಕಟ್ಟೆಗಳಿಗೆ ಆದ್ಯತೆ ಕೊಡಲು ಆರಂಭಿಸಿವೆ. ಇದರ ಲಾಭವನ್ನು ಭಾರತೀಯ ಸೋಲಾರ್ ಕಂಪನಿಗಳು ಪಡೆದುಕೊಳ್ಳುತ್ತಿವೆ. ಲಾಜಿಸ್ಟಿಕ್ಸ್ (ಸಂಗ್ರಹ ಮತ್ತು ಸಾಗಣೆ ವ್ಯವಸ್ಥೆ) ವೆಚ್ಚ ಹೆಚ್ಚಾದರೂ ಪಿವಿ ಮಾಡ್ಯೂಲ್ಗಳ ರಫ್ತಿನಿಂದ ಹೆಚ್ಚು ಪ್ರಾಫಿಟ್ ಮಾರ್ಜಿನ್ ಸಿಗುತ್ತದೆ.
ಇದೇ ವೇಳೆ, ಭಾರತದಲ್ಲಿ ಆಂತರಿಕವಾಗಿ ಸೋಲಾರ್ ಪ್ಯಾನಲ್ಗಳಿಗೆ ಸಾಕಷ್ಟು ಬೇಡಿಕೆ ಇದೆ. 2030ರ ಮರುಬಳಕೆ ಇಂಧನ ಗುರಿಯನ್ನು ಈಡೇರಿಸಲು ಸಾಧ್ಯವಾದಷ್ಟೂ ಹೆಚ್ಚು ಸೋಲಾರ್ ಪಿವಿ ಮಾಡ್ಯೂಲ್ಗಳು ಭಾರತಕ್ಕೆ ಅಗತ್ಯ ಇದೆ. ಇದು ಸೋಲಾರ್ ಪ್ಯಾನಲ್ ಉತ್ಪಾದಿಸುವ ಕಂಪನಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನೂ ಓದಿ: ಸೆಮಿಕಂಡಕ್ಟರ್ ಸೆಕ್ಟರ್ನಲ್ಲಿ ಒಂದೆರಡು ವರ್ಷದಲ್ಲಿ ಸೃಷ್ಟಿಯಾಗಲಿವೆ 10 ಲಕ್ಷ ಉದ್ಯೋಗ
ಹವಾಮಾನ ಬದಲಾವಣೆ ಸಮಸ್ಯೆ ನಿವಾರಣೆಗೆ ವಿಶ್ವಸಂಸ್ಥೆ ನಿಗದಿ ಮಾಡಿರುವ ಗುರಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಭಾರತ ಹಲವು ಕ್ರಮ ತೆಗೆದುಕೊಳ್ಳುತ್ತಿದೆ. ಅದರ ಭಾಗವಾಗಿ 2030ರೊಳಗೆ ಭಾರತದಲ್ಲಿ 500 ಗಿಗಾ ವ್ಯಾಟ್ನಷ್ಟು ಮರುಬಳಕೆ ಇಂಧನ ಮತ್ತು ಹಸಿರು ಇಂಧನ ಉತ್ಪಾದನೆಯ ಸಾಮರ್ಥ್ಯ ಸ್ಥಾಪಿತವಾಗಬೇಕು ಎನ್ನುವ ಒಂದು ಗುರಿ ಇಡಲಾಗಿದೆ. ಮನೆಗಳು ಮತ್ತು ಕೈಗಾರಿಕೆಗಳಲ್ಲಿ ಸೋಲಾರ್ ಅಳವಡಿಕೆ ಮಾಡಲು ಪಿಎಂ ಸೂರ್ಯಘರ್ ಮತ್ತು ಪಿಎಂ ಕುಸುಮ್ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳಿಗೆ ದೇಶೀಯವಾಗಿ ತಯಾರಿಸಲಾದ ಸೋಲಾರ್ ಪ್ಯಾನಲ್ಗಳನ್ನೇ ಬಳಸಬೇಕು. ಹೀಗಾಗಿ, ಭಾರತೀಯ ಸೋಲಾರ್ ಕಂಪನಿಗಳು ತಮ್ಮ ಹೆಚ್ಚಿನ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆಯೇ ಮೀಸಲಿಡುವುದು ಅನಿವಾರ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ