ಜೋಹೋ ಸಿಇಒ ಸ್ಥಾನ ತ್ಯಜಿಸಿದ ಶ್ರೀಧರ್ ವೆಂಬು; ಹಳ್ಳಿಗಳ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರೆ ಈ ಉದ್ಯಮಿ

|

Updated on: Jan 28, 2025 | 11:19 AM

Sridhar Vembu leaves CEO position: ಜೋಹೋ ಕಾರ್ಪೊರೇಶನ್ ಎನ್ನುವ ಐಟಿ ಸಾಫ್ಟ್​ವೇರ್ ಕಂಪನಿಯ ಛೇರ್ಮನ್ ಮತ್ತು ಸಿಇಒ ಆದ ಶ್ರೀಧರ್ ವೆಂಬು ತಮ್ಮ ಸಿಇಒ ಸ್ಥಾನದಿಂದ ಹೊರಬಂದಿದ್ದಾರೆ. ಹೊಸ ಸವಾಲು ಮತ್ತು ಅವಕಾಶಗಳು ಎದುರಾಗಿರುವ ಹಿನ್ನೆಲೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನ ಕೊಡಲು ಈ ನಿರ್ಧಾರ ಮಾಡಿದ್ದಾರೆ. ಚೀಫ್ ಸೈಂಟಿಸ್ಟ್ ಆಗಿ ಅವರು ಎಐ ಅಭಿವೃದ್ಧಿ ಸೇರಿದಂತೆ ವಿವಿಧ ಆರ್ ಅಂಡ್ ಡಿ ಕಾರ್ಯಗಳಿಗೆ ಪೂರ್ಣಾವಧಿ ತೊಡಗಿಸಿಕೊಳ್ಳಲಿದ್ದಾರೆ.

ಜೋಹೋ ಸಿಇಒ ಸ್ಥಾನ ತ್ಯಜಿಸಿದ ಶ್ರೀಧರ್ ವೆಂಬು; ಹಳ್ಳಿಗಳ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರೆ ಈ ಉದ್ಯಮಿ
ಶ್ರೀಧರ್ ವೆಂಬು
Follow us on

ಚೆನ್ನೈ, ಜನವರಿ 28: ಬಹಳ ವಿಶೇಷ ಉದ್ಯಮ ದೃಷ್ಟಿಕೋನಕ್ಕೆ ಹೆಸರಾಗಿರುವ ಜೋಹೋ ಸಿಇಒ ಶ್ರೀಧರ್ ವೆಂಬು ತಮ್ಮ ಸ್ಥಾನ ತ್ಯಜಿಸಿದ್ದಾರೆ. ಆದರೆ, ಕಂಪನಿಯ ಸೇವೆಯಲ್ಲೇ ಇರುವ ಅವರು ಮುಖ್ಯ ವಿಜ್ಞಾನಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಕಂಪನಿಗೆ ಆರ್ ಅಂಡ್ ಡಿ ಕಾರ್ಯಗಳು, ಗ್ರಾಮೀಣಾಭಿವೃದ್ಧಿಯ ತಮ್ಮ ವೈಯಕ್ತಿಕ ಕನಸು ಇತ್ಯಾದಿಗಳತ್ತ ಅವರು ಗಮನ ಹರಿಸಲಿದ್ದಾರೆ. ತಾನು ಜೋಹೋ ಕಾರ್ಪ್​ನ ಸಿಇಒ ಸ್ಥಾನ ತ್ಯಜಿಸಿರುವ ವಿಚಾರವನ್ನು ಅವರು ತಮ್ಮ ಎಕ್ಸ್ ಅಕೌಂಟ್ ಮೂಲಕ ಸಾರ್ವಜನಿಕರಿಗೆ ಹಂಚಿಕೊಂಡಿದ್ದಾರೆ.

‘ಎಐನಲ್ಲಿ ಇತ್ತೀಚೆಗೆ ಆಗಿರುವ ಪ್ರಮುಖ ಬೆಳವಣಿಗೆಗಳು ಸೇರಿದಂತೆ ಹಲವಾರು ಸವಾಲುಗಳು ಮತ್ತು ಅವಕಾಶಗಳು ನಮ್ಮ ಮುಂದೆ ಇರುವ ಹಿನ್ನೆಲೆಯಲ್ಲಿ, ನಾನು ಆರ್ ಅಂಡ್ ಡಿ ಕಾರ್ಯಗಳತ್ತ ಪೂರ್ಣಾವಧಿ ಗಮನ ಹರಿಸುವುದು ಒಳಿತು ಎಂದು ನಿರ್ಧರಿಸಲಾಗಿದೆ. ಜೊತೆಗೆ ನನಗೆ ವೈಯಕ್ತಿಕವಾಗಿ ಇಷ್ಟವಾಗಿರುವ ಗ್ರಾಮೀಣಾಭಿವೃದ್ದಿ ಕಾರ್ಯಕ್ಕೂ ಗಮನ ಹರಿಸಬೇಕೆಂದಿದ್ದೇನೆ. ಈ ಕಾರಣಕ್ಕೆ ಜೋಹೋ ಕಾರ್ಪ್​ನ ಸಿಇಒ ಸ್ಥಾನ ತ್ಯಜಿಸುತ್ತಿದ್ದೇನೆ. ಚೀಫ್ ಸೈಂಟಿಸ್ಟ್ ಜವಾಬ್ದಾರಿ ಹೊರಲಿದ್ದೇನೆ’ ಎಂದು ಶ್ರೀಧರ್ ವೆಂಬು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಜೋಹೋ ಕಾರ್ಪ್ ಒಂದು ಐಟಿ ಸರ್ವಿಸ್ ಕಂಪನಿಯಾಗಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ವಿವಿಧ ಸಾಫ್ಟ್​ವೇರ್​ಗಳನ್ನು ತಯಾರಿಸಿಕೊಡುತ್ತದೆ. ಶ್ರೀಧರ್ ವೆಂಬು ಮತ್ತು ಟೋನಿ ಥಾಮಸ್ ಅವರು ಇದರ ಸಂಸ್ಥಾಪಕರು. ಸಂಸ್ಥೆಯ ಅಮೆರಿಕ ವಿಭಾಗವನ್ನು ಟೋನಿ ಥಾಮಸ್ ನಿರ್ವಹಿಸುತ್ತಿದ್ದಾರೆ. ಶ್ರೀಧರ್ ವೆಂಬು ಅವರು ತ್ಯಜಿಸಿರುವ ಸಿಇಒ ಸ್ಥಾನವನ್ನು ಶೈಲೇಶ್ ಕುಮಾರ್ ದವೇ ತುಂಬಲಿದ್ದಾರೆ. ಕಂಪನಿಯ ಮ್ಯಾನೇಜ್​ಎಂಜಿನ್ ಮತ್ತು ಜೋಹೋ ಡಾಟ್ ಕಾಮ್ ವಿಭಾಗಗಳನ್ನು ರಾಜೇಶ್ ಗಣೇಶನ್ ಮತ್ತು ಮಣಿ ವೆಂಬು ಕ್ರಮವಾಗಿ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಸಮಯ; ಹೆಚ್ಚು ನಿಖರತೆಯ ಭಾರತೀಯ ಕಾಲಮಾನ ರೂಪಿಸುವ ಯೋಜನೆ; ಏನಿದರ ಮಹತ್ವ?

ತಮಿಳುನಾಡು ಮೂಲದ ಶ್ರೀಧರ್ ವೆಂಬು 28 ವರ್ಷಗಳ ಹಿಂದೆ ಜೋಹೋ ಕಾರ್ಪ್ ಅನ್ನು ಕಟ್ಟಿದರು. ಇತ್ತೀಚೆಗಷ್ಟೇ ಅವರು ಕಂಪನಿಯ ಮುಖ್ಯ ಕಚೇರಿಯನ್ನು ಭಾರತಕ್ಕೆ ವರ್ಗಾಯಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ತಮ್ಮ ಕಂಪನಿಯ ಕಚೇರಿ ತೆರೆದು ಅಚ್ಚರಿ ಹುಟ್ಟಿಸಿದ್ದಾರೆ. ಗ್ರಾಮಗಳನ್ನು ಅಭಿವೃದ್ದಿಗೊಳಿಸುವುದು ಅವರ ವೈಯಕ್ತಿಕ ಕನಸು. ಹಾಗಂತ ಅವರು ಸಾಕಷ್ಟು ಬಾರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಜೀವನವೂ ಬಹಳ ಸರಳವಾಗಿದೆ. ಈಗಲೂ ಅವರು ಪಂಚೆ ತೊಟ್ಟು ಕೆಲಸ ಮಾಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ