ಫೆಬ್ರುವರಿಯಲ್ಲಿ ಅತಿದೊಡ್ಡ ಮಾರುಕಟ್ಟೆ ಕುಸಿತ: ರಿಚ್ ಡ್ಯಾಡ್ ಪೂರ್ ಡ್ಯಾಡ್ ಲೇಖಕನ ಎಚ್ಚರಿಕೆ
Rich Dad Poor Dad author Robert Kiyosaki: ಫೆಬ್ರುವರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಕುಸಿತ ನಿರೀಕ್ಷಿಸಿ ಎಂದು ಖ್ಯಾತ ಲೇಖಕ ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ. ‘ರಿಚ್ ಡ್ಯಾಡ್ ಪೂರ್ ಡ್ಯಾಡ್’, ‘ರಿಚ್ ಡ್ಯಾಡ್ಸ್ ಪ್ರಾಫಿಸಿ’ ಮೊದಲಾದ ಪುಸ್ತಕಗಳ ಕರ್ತೃವಾದ ಅವರು ಹಿಂದೆಯೂ ಮಾರ್ಕೆಟ್ ಕ್ರ್ಯಾಶ್ ಸಂಭವಿಸುವ ಬಗ್ಗೆ ಭವಿಷ್ಯ ನುಡಿದಿದ್ದಿದೆ. ಜನರು ಷೇರುಗಳನ್ನು ಬಿಟ್ಟು ಕ್ರಿಪ್ಟೋಕರೆನ್ಸಿ, ಚಿನ್ನ, ಬೆಳ್ಳಿಗಳನ್ನು ಖರೀದಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ನವದೆಹಲಿ, ಜನವರಿ 27: ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಕುಸಿತ ಫೆಬ್ರುವರಿಯಲ್ಲಿ ಆಗಲಿದೆ ಎಂದು ಖ್ಯಾತ ಲೇಖಕ ರಾಬರ್ಟ್ ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ. ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಲೇಖಕರಾದ ರಾಬರ್ಟ್ ಕಿಯೋಸಾಕಿ, ತಮ್ಮ ಪುಸ್ತಕದಲ್ಲೂ ಇಂಥದ್ದೊಂದು ದೊಡ್ಡ ಮಾರುಕಟ್ಟೆ ಕುಸಿತವಾಗಬಹುದು ಎಂದು ಭವಿಷ್ಯ ನುಡಿದ್ದರು. ಪುಸ್ತಕದಲ್ಲಿ ಹೇಳಿದ್ದ ಆ ಭವಿಷ್ಯ ಫೆಬ್ರುವರಿಯಲ್ಲಿ ಸಂಭವಿಸುತ್ತದೆ ಎಂದು ರಾಬರ್ಟ್ ಕಿಯೋಸಾಕಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಾಬರ್ಟ್ ಕಿಯೋಸಾಕಿ ಅವರು 2013ರಲ್ಲಿ ಬರೆದ ಮತ್ತೊಂದು ಪುಸ್ತಕ ‘ರಿಚ್ ಡ್ಯಾಡ್ಸ್ ಪ್ರಾಫಿಸಿ’ಯಲ್ಲಿ ಸಂಭಾವ್ಯ ಬೃಹತ್ ಮಾರುಕಟ್ಟೆ ಕುಸಿತದ ಬಗ್ಗೆ ಭವಿಷ್ಯ ಹೇಳಲಾಗಿತ್ತು. ಅದು 2025ರ ಫೆಬ್ರುವರಿಯಲ್ಲಿ ನಿಜವಾಗಬಹುದು ಎನ್ನುವುದು ಅವರ ಅನಿಸಿಕೆ.
ಆದರೆ, ಮಾರುಕಟ್ಟೆ ಕುಸಿತದಿಂದ ಹೂಡಿಕೆದಾರರು ಹೆದರಬೇಕಿಲ್ಲ. ಉತ್ತಮ ಖರೀದಿಗಳಿಗೆ ಇದು ಸರಿಯಾದ ಅವಕಾಶ ಕೊಡುತ್ತದೆ. ಮನೆ, ವಾಹನ ಇತ್ಯಾದಿ ಹಲವಾರು ಆಸ್ತಿಗಳನ್ನು ನೀವು ಈ ಮಾರುಕಟ್ಟೆ ಕುಸಿತದ ವೇಳೆ ಖರೀದಿಸುವ ಅವಕಾಶ ಸಿಗುತ್ತದೆ ಎನ್ನುತ್ತಾರೆ ಅವರು.
In RICH DADs PROPHECY-2013 I warned the buggiest stock market crash in history was coming. That crash will be in February 2025.
Good news because in a crash everything goes on sale. Cars and houses on sale now.
Better news billions will leave the stock and bond markets and…
— Robert Kiyosaki (@theRealKiyosaki) January 27, 2025
ಸಾಂಪ್ರದಾಯಿಕ ಮಾರುಕಟ್ಟೆಗಳಿಂದ ಹಣವು ಪರ್ಯಾಯ ಹೂಡಿಕೆಗಳಿಗೆ ಹರಿದುಹೋಗಬಹುದು ಎಂದಿರುವ ಅವರು ಬಿಟ್ಕಾಯಿನ್ ಅನ್ನು ಉತ್ತಮ ಆಯ್ಕೆ ಎಂದು ಹೆಸರಿಸಿರುವುದು ಕುತೂಹಲ. ಕ್ರಿಪ್ಟೋಕರೆನ್ಸಿ, ಚಿನ್ನ, ಬೆಳ್ಳಿಗಳಲ್ಲಿ ಹೂಡಿಕೆ ಮಾಡಬಹುದು ಎನ್ನುವುದು ಅವರ ಸಲಹೆ.
ರಾಬರ್ಟ್ ಕಿಯೋಸಾಕಿ ಅವರು ಮೊದಲಿಂದಲೂ ಕ್ರಿಪ್ರೋಕರೆನ್ಸಿಗಳ, ಅದರಲ್ಲೂ ಬಿಟ್ಕಾಯಿನ್ನ ಪ್ರಬಲ ಬೆಂಬಲಿಗರಾಗಿದ್ದಾರೆ. ಈ ಹಿಂದೆಯೂ ಕಿಯೋಸಾಕಿ ಅವರು ಮಾರುಕಟ್ಟೆ ಕುಸಿತದ ಬಗ್ಗೆ ಭವಿಷ್ಯಗಳನ್ನು ಹೇಳಿದ್ದುಂಟು. ಆದರೆ, ನಿಜವಾಗಿದ್ದು ಬಹಳ ಅಪರೂಪ. ಈ ಬಾರಿ ದೊಡ್ಡ ಕುಸಿತದ ಬಗ್ಗೆ ಹೇಳಿದ್ದಾರೆ. ಭಾರತದಲ್ಲಿ ಷೇರು ಮಾರುಕಟ್ಟೆ ಈಗಾಗಲೇ ಆರು ತಿಂಗಳಿಂದ ಅಲುಗಾಟದಲ್ಲಿದೆ. ಕಿಯೋಸಾಕಿ ಹೇಳಿದಂತೆ ಫೆಬ್ರುವರಿಯಲ್ಲಿ ದೊಡ್ಡ ಕುಸಿತವಾದರೆ ಹೂಡಿಕೆದಾರರ ಜಂಘಾಬಲ ಉಡುಗಿ ಹೋದರೂ ಹೋಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Mon, 27 January 25