ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಇತ್ತೀಚೆಗೆ ಗೃಹ ಸಾಲದ ಬಡ್ಡಿ ದರವನ್ನು ಶೇ 6.70ಗೆ ಇಳಿಕೆ ಮಾಡಿದೆ ಮತ್ತು ಈ ವಿಚಾರದಲ್ಲಿ ಸಾಲದ ಅವಧಿ ಏನು ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಇನ್ನು ಗೃಹ ಸಾಲಗಳ ಬಾಕಿ ವರ್ಗಾವಣೆ (ಬ್ಯಾಲೆನ್ಸ್ ಟ್ರಾನ್ಸ್ಫರ್) ಕೂಡ ಈ ವಿಶೇಷ ಕೊಡುಗೆಗೆ ಅರ್ಹವಾಗಿದೆ. ಇದರ ಹೊರತಾಗಿ ಎಲ್ಲರಿಗೂ ಆಯಾ ಮಾಸಿಕ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಿಸದೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಈ ಕೊಡುಗೆಯು 45 ಬೇಸಿಸ್ ಪಾಯಿಂಟ್‌ಗಳ ಉಳಿತಾಯಕ್ಕೆ ಕಾರಣವಾಗುತ್ತದೆ. ಹೀಗೆ ಮಾಡಿರುವುದರಿಂದ ಬ್ಯಾಂಕ್ನ ಲೆಕ್ಕಾಚಾರವೇ ತಿಳಿಸುವಂತೆ, 75 ಲಕ್ಷ ರೂಪಾಯಿಯನ್ನು 30 ವರ್ಷಗಳ ಅವಧಿಗೆ ಸಾಲ ಪಡೆದಲ್ಲಿ ರೂ. 8 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿ ಉಳಿತಾಯ ಆಗುತ್ತದೆ. ಖಾಸಗಿ ಬ್ಯಾಂಕ್ ಆದ ಕೊಟಕ್ ಮಹೀಂದ್ರಾ ಬ್ಯಾಂಕ್ (KMB) ವಾರ್ಷಿಕ ಶೇ 6.50 ದರದಲ್ಲಿ ಹೋಮ್ ಲೋನ್ ನೀಡುತ್ತಿದ್ದು, ಸದ್ಯಕ್ಕೆ ಇದು ಅಗ್ಗದ ಗೃಹ ಸಾಲ ಬಡ್ಡಿ ದರ ಆಗಿದೆ. ಗೃಹ ಸಾಲದ ಬಡ್ಡಿದರವನ್ನು 15 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಸಿ, ಶೇ 6.50ಕ್ಕೆ ಘೋಷಿಸುವ ಮೂಲಕ ಹಬ್ಬದ ಋತುವನ್ನು ಕೊಟಕ್ ಆರಂಭಿಸಿತು. ಶೇ 6.5ರ ಈ ವಿಶೇಷ ದರವು ಸೀಮಿತ ಅವಧಿಯದ್ದಾಗಿದ್ದು, ನವೆಂಬರ್ 8, 2021ಕ್ಕೆ ಕೊನೆಗೊಳ್ಳಲಿದೆ.
ಅಲ್ಲದೆ, ಎಚ್‌ಡಿಎಫ್‌ಸಿ ಕೂಡ ಗೃಹ ಸಾಲ ಮಾರುಕಟ್ಟೆಯನ್ನು ಸ್ಪರ್ಧಾತ್ಮಕವಾಗಿಸಲು ಬಡ್ಡಿದರವನ್ನು ಶೇ 6.7ಕ್ಕೆ ಇಳಿಸಿದೆ. ಪಂಜಾಬ್ ಮತ್ತು ಸಿಂದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ನಂತಹ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು ಕ್ರಮವಾಗಿ ಶೇ 6.65, ಶೇ 6.75% ಮತ್ತು ಶೇ 6.80 ದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ. ಎಲ್ಐಸಿ ಹೌಸಿಂಗ್ ಫೈನಾನ್ಸ್ ಶೇ 6.66ರ ಬಡ್ಡಿದರ ಹೊಂದಿದೆ. ಖಾಸಗಿ ಬ್ಯಾಂಕ್ಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ ಬಜಾಜ್ ಫಿನ್‌ಸರ್ವ್ ಶೇ 6.75ರ ಬಡ್ಡಿದರಕ್ಕೆ ನೀಡುತ್ತವೆ. ಬಹುಶಃ ಇನ್ನೂ ಕೆಲವು ಸದ್ಯದಲ್ಲೇ ದರ ಕಡಿತದ ಪಟ್ಟಿಗೆ ಸೇರ್ಪಡೆ ಆಗಲಿವೆ.
ಪ್ರಯೋಜನಗಳು
ಆದರೆ, ಎಸ್‌ಬಿಐ ಕೊಡುಗೆಯ ಬಗ್ಗೆ ನೋಡುವುದಾದರೆ, ಝೀರೋ ಪ್ರೊಸೆಸಿಂಗ್ ಶುಲ್ಕ ಇದೆ. ಅಲ್ಲದೇ, ಮಹಿಳಾ ಸಾಲಗಾರರಿಗೆ 25 ಬೇಸಿಸ್ ಪಾಯಿಂಟ್‌ಗಳವರೆಗೆ ಬಡ್ಡಿ ರಿಯಾಯಿತಿ ಇರುತ್ತದೆ. ಯಾವುದೇ ಪೂರ್ವಪಾವತಿ ದಂಡವೂ ಇಲ್ಲ. ಈ ಸಾಲಗಳ ಅವಧಿ ಮೂರು ವರ್ಷದಿಂದ 30 ವರ್ಷಗಳವರೆಗೆ ಇರುತ್ತದೆ.
ಅವಶ್ಯಕ ದಾಖಲೆಗಳು
ಉದ್ಯೋಗದಾತ ಸಂಸ್ಥೆಯ ಗುರುತಿನ ಚೀಟಿ, ಪೂರ್ಣಗೊಂಡ ಸಾಲ ಅರ್ಜಿ ನಮೂನೆ ಮತ್ತು ಮೂರು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳಂತಹ ಕೆಲವು ಮೂಲ ದಾಖಲೆಗಳು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿದೆ. ಗುರುತಿನ ಪುರಾವೆಗಾಗಿ ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಈ ಪೈಕಿ ಯಾವುದಾದರೂ ನೀಡಬಹುದು.
ನಿರ್ಮಾಣಕ್ಕೆ ಅನುಮತಿ, ಹಂಚಿಕೆ ಪತ್ರ, ಮಾರಾಟಕ್ಕೆ ಸ್ಟ್ಯಾಂಪ್ ಮಾಡಿದ ಒಪ್ಪಂದ, ಆಕ್ಯುಪೆನ್ಸಿ ಪ್ರಮಾಣಪತ್ರ, ಆಸ್ತಿ ತೆರಿಗೆ ರಸೀದಿ, ಅನುಮೋದಿತ ಯೋಜನೆಯ ನಕಲು ಮತ್ತು ಬಿಲ್ಡರ್‌ನ ನೋಂದಾಯಿತ ಅಭಿವೃದ್ಧಿ ಒಪ್ಪಂದ ಮತ್ತು ಕನ್ವೇಯನ್ಸ್ ಪತ್ರದಂತಹ ಆಸ್ತಿಗೆ ಸಂಬಂಧಿಸಿದ ಕಾಗದಗಳು ಅಗತ್ಯವಿದೆ. ಅಲ್ಲದೆ, ಬಿಲ್ಡರ್/ಮಾರಾಟಗಾರರಿಗೆ ಮಾಡಿದ ಎಲ್ಲಾ ಪಾವತಿಗಳನ್ನು ತೋರಿಸುವ ಪಾವತಿ ರಸೀದಿಗಳು ಅಥವಾ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಅನ್ನು ಸಲ್ಲಿಸಬೇಕು. ಅರ್ಜಿದಾರರು ಹೊಂದಿರುವ ಎಲ್ಲ ಬ್ಯಾಂಕ್ ಖಾತೆಗಳಿಗೆ ಕಳೆದ ಆರು ತಿಂಗಳ ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ಗಳು ಮತ್ತು ಬೇರೆ ಯಾವುದೇ ಬ್ಯಾಂಕ್ನಿಂದ ಅಸ್ತಿತ್ವದಲ್ಲಿರುವ ಸಾಲದ ಖಾತೆ ಸ್ಟೇಟ್ಮೆಂಟ್ಗಳು ಹಾಗೂ ಅಗತ್ಯ ಇದ್ದರೆ ಇತರ ದಾಖಲೆಗಳು ಬೇಕಾಗುತ್ತವೆ.
ಕಳೆದ ಮೂರು ತಿಂಗಳ ಪೇ ಸ್ಲಿಪ್ ಮತ್ತು ಎರಡು ವರ್ಷಗಳ ಫಾರ್ಮ್ 16ರ ಪ್ರತಿ ಅಥವಾ ಕಳೆದ ಎರಡು ಹಣಕಾಸು ವರ್ಷಗಳ ಐಟಿ ರಿಟರ್ನ್ಸ್ ಪ್ರತಿಯನ್ನು ಸಲ್ಲಿಸಬೇಕು. ಸ್ವಯಂ ಉದ್ಯೋಗಿ ಅಥವಾ ವ್ಯಾಪಾರ ಮಾಡುತ್ತಿರುವ ವ್ಯಕ್ತಿಗೆ ಕಳೆದ ಮೂರು ವರ್ಷಗಳ ಐಟಿ ರಿಟರ್ನ್ಸ್, ಮೂರು ವರ್ಷಗಳ ಲಾಭ ಮತ್ತು ನಷ್ಟ ಸ್ಟೇಟ್ಮೆಂಟ್, ಟಿಡಿಎಸ್ ಪ್ರಮಾಣಪತ್ರ ಮತ್ತು ಅರ್ಹತಾ ಪ್ರಮಾಣಪತ್ರ (ವೈದ್ಯರು, ಸಿಎ, ವಕೀಲ) ಅಗತ್ಯ ಇರುತ್ತದೆ.
ಅರ್ಜಿ ಪ್ರಕ್ರಿಯೆ
ಇಂಟರ್ನೆಟ್ ಬ್ಯಾಂಕಿಂಗ್, ಯೋನೊ ಆ್ಯಪ್ ಮತ್ತು ಗೃಹ ಶಾಖೆಗೆ ಭೇಟಿ ನೀಡುವ ಮೂಲಕ ಒಬ್ಬ ವ್ಯಕ್ತಿಯು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು, ಅಗತ್ಯ ವಿವರಗಳನ್ನು ಭರ್ತಿ ಮಾಡಲು, ಅರ್ಹತೆಯನ್ನು ಪರಿಶೀಲಿಸಿ ಮತ್ತು ಸಾಲದ ಉಲ್ಲೇಖವನ್ನು ಪಡೆಯಲು ಗ್ರಾಹಕರು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
ಅಲ್ಲದೇ, ಯಾವುದೇ ಸಮಯದಲ್ಲಿ ಯೋನೊ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. YONO ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ. ಮುಖಪುಟದಲ್ಲಿ, ಆ್ಯಪ್‌ನ ಮೇಲಿನ ಎಡ ಮೂಲೆಯಲ್ಲಿರುವ ‘ಮೆನು’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ಸಾಲಗಳ ಮೇಲೆ ಕ್ಲಿಕ್ ಮಾಡಿ ಮತ್ತು ‘ಹೋಮ್ ಲೋನ್’ ಆಯ್ಕೆ ಮಾಡಿ. ನಿಮ್ಮ ಆದಾಯ ಮೂಲ, ನಿವ್ವಳ ಮಾಸಿಕ ಆದಾಯ ಮತ್ತು ಯಾವುದೇ ಇತರ ಸಾಲದ ವಿವರಗಳನ್ನು ನಮೂದಿಸಿ.
ನಿಮ್ಮ ಅರ್ಹ ಸಾಲದ ಮೊತ್ತವನ್ನು ಪರಿಶೀಲಿಸಿ ಮತ್ತು ಮುಂದುವರಿಯಿರಿ ಹಾಗೂ ಅಗತ್ಯವಿರುವ ಇತರ ವಿವರಗಳನ್ನು ಭರ್ತಿ ಮಾಡಿ ಮತ್ತು ‘ಸಲ್ಲಿಸು’ (Submit) ಮೇಲೆ ಕ್ಲಿಕ್ ಮಾಡಿ. ನೀವು ರೆಫರೆನ್ಸ್ ಸಂಖ್ಯೆಯನ್ನು ಪಡೆಯುತ್ತೀರಿ ಮತ್ತು ಎಸ್‌ಬಿಐ ಕಾರ್ಯನಿರ್ವಾಹಕರು ಶೀಘ್ರದಲ್ಲೇ ನಿಮಗೆ ಕರೆ ಮಾಡುತ್ತಾರೆ ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗೃಹ ಸಾಲ ಪೋರ್ಟ್ಫೋಲಿಯೋ
ಬ್ಯಾಂಕಿಂಗ್‌ನ ಗೃಹ ಸಾಲ ವಿಭಾಗದಲ್ಲಿ ಮೊದಲ ಸ್ಥಾನವನ್ನು ಗಳಿಸಲು ಈ ವಿಶೇಷ ಹಬ್ಬದ ಕೊಡುಗೆಯಲ್ಲಿ ಎಸ್‌ಬಿಐ ಪ್ರಯತ್ನಿಸುತ್ತಿದೆ. ಪ್ರಸ್ತುತ ಒಟ್ಟು ಗೃಹ ಸಾಲ ಮಾರುಕಟ್ಟೆಯ ಶೇ 34.77ರ ಪಾಲನ್ನು ಹೊಂದಿದೆ ಎಸ್‌ಬಿಐ. ಎಚ್‌ಡಿಎಫ್‌ಸಿ ಪ್ರಸ್ತುತ ಮಾರುಕಟ್ಟೆ ಮುಂಚೂಣಿಯಲ್ಲಿದ್ದು, ಸುಮಾರು ಶೇ 38ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಕ್ರೆಡಿಟ್ ಮಾಹಿತಿ ಬ್ಯೂರೋ ಸಿಆರ್‌ಐಎಫ್ ಹೈ ಮಾರ್ಕ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2019ರ ಡಿಸೆಂಬರ್ ವೇಳೆಗೆ ಒಟ್ಟು ಗೃಹ ಸಾಲ ವಿಭಾಗ ಬಾಕಿ 22.26 ಲಕ್ಷ ಕೋಟಿ ರೂಪಾಯಿ ಇತ್ತು. ಕೈಗೆಟುಕುವ ವಸತಿ ವಿಭಾಗದಲ್ಲಿ ರೂ. 35 ಲಕ್ಷದವರೆಗಿನ ಸಾಲದ ಟಿಕೆಟ್ ಗಾತ್ರವು ಮಾರುಕಟ್ಟೆಯ ಶೇ 90ರಷ್ಟು ಪ್ರಮಾಣವನ್ನು ಹೊಂದಿದೆ. ಡಿಸೆಂಬರ್ 2020ರ ವೇಳೆಗೆ ಸುಮಾರು ಶೇ 60ರಷ್ಟು ಮೌಲ್ಯವನ್ನು ಹೊಂದಿದೆ.
ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?
(State Bank Of India Home Loan Festive Offer Here Is The Must Know Details)