ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು; ಭಾರತದ ಎನ್​ಎಸ್​ಇ ಹೊಸ ವಿಶ್ವದಾಖಲೆ

|

Updated on: Jun 05, 2024 | 5:22 PM

National Stock Exchange world record in transactions: ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಜೂನ್ 5ರಂದು ಭರ್ಜರಿ ಷೇರು ವಹಿವಾಟು ನಡೆದಿದೆ. ಒಂದೇ ದಿನದಲ್ಲಿ ಬರೋಬ್ಬರಿ 1,971 ಕೋಟಿ ಆರ್ಡರ್​​ಗಳು ಬುಕ್ ಆಗಿವೆ. ಈ ಪೈಕಿ 28.55 ಕೋಟಿ ಟ್ರೇಡ್​ಗಳಾಗಿವೆ ಎಂದು ಎನ್​ಎಸ್​ಇ ಸಿಇಒ ಆಶೀಶ್ ಚೌಹಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದು ವಿಶ್ವದಾಖಲೆ ಎಂದೂ ಅವರು ತಿಳಿಸಿದ್ದಾರೆ. ಜೂನ್ 4ರಂದು ಗಣನೀಯ ಪ್ರಮಾಣದಲ್ಲಿ ನಷ್ಟ ಮಾಡಿಕೊಂಡಿದ್ದ ಹೂಡಿಕೆದಾರರಿಗೆ ಜೂನ್ 5ರಂದು ಒಂದಷ್ಟು ಸಮಾಧಾನ ಸಿಕ್ಕಿದೆ.

ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು; ಭಾರತದ ಎನ್​ಎಸ್​ಇ ಹೊಸ ವಿಶ್ವದಾಖಲೆ
ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್
Follow us on

ನವದೆಹಲಿ, ಜೂನ್ 5: ಭಾರತದ ಷೇರು ಮಾರುಕಟ್ಟೆ (stock market) ಕಳೆದ ಕೆಲ ದಿನಗಳಿಂದ ಭರ್ಜರಿ ವಹಿವಾಟು ಕಾಣುತ್ತಿದೆ. ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha elections 2024) ಪ್ರಕಟವಾದ ದಿನದಂದು ಸಾಕಷ್ಟು ಜನರು ಷೇರುಗಳನ್ನು ಆಫ್​ಲೋಡ್ ಮಾಡಿ ಹೋಗಿದ್ದರು. ಇವತ್ತು ಬೇರೆ ಬೇರೆ ವಲಯದ ಷೇರುಗಳಿಗೆ ಹೂಡಿಕೆ ಹರಿದುಬರುತ್ತಿದೆ. ಇಂದು ಬುಧವಾರ ಭಾರೀ ಸಂಖ್ಯೆಯಲ್ಲಿ ಷೇರು ವಹಿವಾಟು ನಡೆದಿರುವುದು ತಿಳಿದುಬಂದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (NSE) ಹೊಸ ವಿಶ್ವದಾಖಲೆಯೇ ಆಗಿದೆ ಎಂದು ಎನ್​ಎಸ್​ಇ ಸಿಇಒ ಹೇಳಿದ್ದಾರೆ. ಜೂನ್ 5, ಬುಧವಾರದಂದು ಮಾರುಕಟ್ಟೆ ಅವಧಿಯಲ್ಲಿ 28.55 ಕೋಟಿ ಟ್ರಾನ್ಸಾಕ್ಷನ್​ಗಳಾಗಿವೆ ಎಂದು ಸಿಇಒ ಆಶೀಶ್ ಚೌಹಾಣ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಜೂನ್ 5ರಂದು ಬೆಳಗ್ಗೆ 9:15ರಿಂದ 3:30ರವರೆಗೆ ಆರು ಗಂಟೆ 15 ನಿಮಿಷ ಕಾಲದಲ್ಲಿ ಎನ್​ಎಸ್​ಇ ವಿಶ್ವದಾಖಲೆಯ ಸಂಖ್ಯೆಯಲ್ಲಿ ವಹಿವಾಟುಗಳನ್ನು ನಿರ್ವಹಿಸಿದೆ. ಒಂದು ದಿನದಲ್ಲಿ 1,971 ಕೋಟಿ ಆರ್ಡರ್​ಗಳು, ಮತ್ತು 28.55 ಕೋಟಿ ಟ್ರೇಡ್​ಗಳನ್ನು ನಿರ್ವಹಣೆ ಮಾಡಲಾಗಿದೆ,’ ಎಂದು ಎನ್​ಎಸ್​ಇ ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

ಆರ್ಡರ್​ಗೂ ಟ್ರೇಡ್​ಗೂ ಏನು ವ್ಯತ್ಯಾಸ?

ಇಲ್ಲಿ ಆರ್ಡರ್ ಬುಕ್ ಮಾಡುವುದು ಎಂದರೆ ಷೇರು ಮಾರುವವರು ನಿರ್ದಿಷ್ಟ ಷೇರುಗಳನ್ನು ಮಾರಾಟಕ್ಕಿಡುತ್ತಾರೆ. ಇದು ಆರ್ಡರ್ ಸಲ್ಲಿಕೆ ಮಾಡಿದಂತೆ. ಈ ಷೇರುಗಳನ್ನು ಯಾರಾದರೂ ಖರೀದಿಸಿದರೆ ಆಗ ಅದು ಟ್ರೇಡ್ ಆದಂತೆ. ಅಲ್ಲಿಗೆ ಒಂದು ವಹಿವಾಟು ಮುಗಿದಂತೆ. ಈ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಇಂದು ಜೂನ್ 5ರಂದು ಬರೋಬ್ಬರಿ 28.55 ಕೋಟಿಯಷ್ಟು ವಹಿವಾಟುಗಳಾಗಿರುವುದು ಆಶೀಶ್ ಅವರ ಎಕ್ಸ್ ಪೋಸ್ಟ್​ನಿಂದ ತಿಳಿದು ಬರುತ್ತದೆ. ಆದರೆ, ಈ 28 ಕೋಟಿ ವಹಿವಾಟಿನಲ್ಲಿ ಎಷ್ಟು ಮೊತ್ತದ ಹಣದ ವಿನಿಮಯ ಆಯಿತು ಎಂಬ ಮಾಹಿತಿ ಗೊತ್ತಾಗಿಲ್ಲ.

ಆದರೆ, ನಿನ್ನೆ ಜೂನ್ 4ರಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಗೂ ಹೆಚ್ಚು ಹಣ ನಷ್ಟವಾಗಿತ್ತು. ಇವತ್ತು ಸುಮಾರು 10-15 ಲಕ್ಷ ಕೋಟಿ ರೂನಷ್ಟು ಲಾಭ ಮಾಡಿಕೊಂಡಿದ್ದಾರೆ ಹೂಡಿಕೆದಾರರು.

ಇದನ್ನೂ ಓದಿ: ಚಂದ್ರಬಾಬು ನಾಯ್ಡು ಈ ಹೇಳಿಕೆ ಕೊಟ್ಟ ಬಳಿಕ ಷೇರು ಮಾರುಕಟ್ಟೆ ಮತ್ತೆ ಹಸಿರು ಬಣ್ಣಕ್ಕೆ

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎರಡರಲ್ಲೂ ಹೇರಳವಾಗಿ ವಹಿವಾಟುಗಳಾಗುತ್ತಿವೆ. ನಿನ್ನೆಯಿಂದ ಸಾರ್ವಜನಿಕ ವಲಯದ ಉದ್ದಿಮೆಗಳ ಷೇರುಗಳನ್ನು ಸಿಕ್ಕಂತೆ ಮಾರಲಾಗುತ್ತಿದೆ. ಇವತ್ತೂ ಕೂಡ ಪಿಎಸ್​ಯು ಸ್ಟಾಕ್​ಗಳಿಗೆ ದಯನೀಯ ಸ್ಥಿತಿ ಮುಂದುವರಿದಿತ್ತು. ಆದರೆ, ಎಫ್​ಎಂಸಿಜಿ ಮತ್ತು ವಾಹನ ಸಂಸ್ಥೆಗಳ ಷೇರುಗಳತ್ತ ಹೂಡಿಕೆದಾರರ ಹಣ ಹರಿದುಹೋಗುತ್ತಿರುವುದು ಗಮನಾರ್ಹ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ