
ಬೆಂಗಳೂರು, ಜನವರಿ 21: ಡೀಪ್ ಫೇಕ್ ತಂತ್ರಜ್ಞಾನ ಬಂದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ಸೆಲಬ್ರಿಟಿಗಳ ವಿಡಿಯೋಗಳು ಹರಿದಾಡುತ್ತಿವೆ. ಇಷ್ಟು ಹಣ ಹೂಡಿಕೆ ಮಾಡಿ, ಇಷ್ಟು ಲಾಭ ಮಾಡಿ ಎಂಬಿತ್ಯಾದಿ ಪ್ರಲೋಭನೆಗಳನ್ನು ಈ ವಿಡಿಯೋಗಳಲ್ಲಿ ಕಾಣಬಹುದು. ಇಂಥ ಬಹುತೇಕ ವಿಡಿಯೋಗಳು ಡೀಪ್ಫೇಕ್ (Deepfake) ಬಳಸಿ ತಯಾರಾದ ನಕಲಿ ವಿಡಿಯೋಗಳೇ ಆಗಿವೆ. ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ (Sudha Murthy) ಇತ್ಯಾದಿ ಗಣ್ಯ ವ್ಯಕ್ತಿಗಳೇ ಮಾತನಾಡಿರುವಂತೆ ಈ ವಿಡಿಯೋಗಳಿವೆ. ಸ್ವತಃ ನರೇಂದ್ರ ಮೋದಿ ಅವರನ್ನೇ ಬಿಟ್ಟಿಲ್ಲ.
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ತಮ್ಮ ಮುಖ ಬಳಸಿ ಸೃಷ್ಟಿ ಮಾಡಲಾಗಿರುವ ನಕಲಿ ವಿಡಿಯೋಗಳ ಬಗ್ಗೆ ಜಾಗ್ರತೆಯಿಂದ ಇರುವಂತೆ ಸಾರ್ವಜನಿಕರನ್ನು ಎಚ್ಚರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. 200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಹೆಚ್ಚು ರಿಟರ್ನ್ ಗಳಿಸಬಹುದು ಎಂದು ಅವರು ಹೇಳಿರುವ ಫೇಕ್ ವಿಡಿಯೋವೊಂದರ ಸಂಬಂಧ ಸುಧಾ ಮೂರ್ತಿ ಸ್ಪಷ್ಟನೆ ಕೊಟ್ಟು ವಿಡಿಯೋ ಹಾಕಿದ್ದಾರೆ.
ಇದನ್ನೂ ಓದಿ: ಸಿಮೆಂಟ್ ತ್ಯಾಜ್ಯದಿಂದ ಹೊಸ ಬ್ಯುಸಿನೆಸ್ ಐಡಿಯಾ ಮಾಡಿ ಗೆದ್ದ ಪ್ರಾಚಿ ಪೊದ್ದಾರ್; ಮದುವೆ ಒತ್ತಡದ ನಡುವೆಯೂ ಕುಂದದ ಛಲ
‘ನನ್ನ ಚಿತ್ರ ಮತ್ತು ಧ್ವನಿ ಬಳಸಿ ಹಣಕಾಸು ಯೋಜನೆ ಮತ್ತು ಹೂಡಿಕೆಗಳ ಬಗ್ಗೆ ಪ್ರಚಾರ ಮಾಡುತ್ತಿರುವ ವಿಡಿಯೋಗಳನ್ನು ರಚಿಸಿ ಆನ್ಲೈನ್ನಲ್ಲಿ ಹರಿಯಿಸಲಾಗುತ್ತಿದೆ. ಇವು ನನಗೆ ಗೊತ್ತಿಲ್ಲದಂತೆ ಮಾಡಿರುವ ಡೀಪ್ಫೇಕ್ ವಿಡಿಯೋಗಳಾಗಿವೆ. ಇವುಗಳ ಬಗ್ಗೆ ಎಚ್ಚರದಿಂದಿರಿ’ ಎಂದು ಸುಧಾ ಮೂರ್ತಿ ಅವರು ತಿಳಿಸಿದ್ದಾರೆ.
200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಹೆಚ್ಚು ಹಣ ಗಳಿಸಿ ಎಂದು ತಾನು ಹೇಳಿದ್ದೆನ್ನಲಾದ ವಿಡಿಯೋಗಳು ಹರಿದಾಡುತ್ತಿವೆ. ಇದರಲ್ಲ ತಿಳಿಸಲಾಗಿರುವುದೆಲ್ಲವೂ ಸುಳ್ಳು. ತನಗೆ ಗೊತ್ತಿರುವ ಕೆಲ ಜನರು ಇಂಥ ಸ್ಕ್ಯಾಮ್ಗಳಿಗೆ ಬಲಿಯಾಗಿ ಹಣ ಕಳೆದುಕೊಂಡಿದ್ದಾರೆ ಎಂದೂ ಸುಧಾ ಮೂರ್ತಿ ವಿವರಿಸಿದ್ದಾರೆ.
ಸುಧಾ ಮೂರ್ತಿ ಅವರ ಎಕ್ಸ್ ಪೋಸ್ಟ್
I want to alert you to fake videos circulating online that falsely use my image and voice to promote financial schemes and investments. These are deepfakes created without my knowledge or consent.
Please do not make any financial decisions based on these fraudulent videos. I urge… pic.twitter.com/JyJTIR78wQ— Smt. Sudha Murty (@SmtSudhaMurty) January 21, 2026
‘ನಾನ್ಯಾವತ್ತೂ ಕೂಡ ಹೂಡಿಕೆಗಳ ಬಗ್ಗೆ ಮಾತನಾಡುವುದಿಲ್ಲ. ಹಣದ ವಿಚಾರವನ್ನೂ ಮಾತನಾಡುವುದಿಲ್ಲ. ನಾನೇನಿದ್ದರೂ ಕೆಲಸ, ಭಾರತದ ಸಂಸ್ಕೃತಿ, ಮಹಿಳೆಯರು, ಶಿಕ್ಷಣದ ಬಗ್ಗೆ ಮಾತನಾಡುತ್ತೇನೆ’ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್ನಲ್ಲಿ ಪ್ರಹ್ಲಾದ ಜೋಷಿ
‘ಇಂಥ ನಕಲಿ ವಿಡಿಯೋಗಳಲ್ಲಿ ಹೇಳಲಾಗಿರುವುದನ್ನು ನಂಬಿ ಯಾವುದೇ ಹಣಕಾಸು ನಿರ್ಧಾರ ತೆಗೆದುಕೊಳ್ಳಬೇಡಿ. ಹೊಸ ಸ್ಕೀಮ್ ಎಂದಿದ್ದರೆ ಬ್ಯಾಂಕಿಗೆ ಹೋಗಿ ವಿಚಾರಿಸಿ, ಮಾಹಿತಿ ಸರಿಯೋ ತಪ್ಪೋ ಎಂಬುದನ್ನು ತಿಳಿದುಕೊಳ್ಳಿ. ಅನುಮಾನ ಬಂದರೆ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ಕೊಡಿ’ ಎಂದು ಸುಧಾ ಮೂರ್ತಿ ಸಲಹೆ ಕೊಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ