ಭಾರತದಲ್ಲಿ ಸಾಂಪ್ರದಾಯಿಕವಾಗಿ ಇಲ್ಲಿನ ದೊಡ್ಡ ಉದ್ದಿಮೆಗಳು (businesses) ಕೌಟುಂಬಿಕವಾಗಿ ಬಳುವಳಿಯಾಗಿ ಪಡೆದು ಮುಂದುವರಿಯುತ್ತಿರುವಂತಹವು. ಹೆಚ್ಚಿನ ಉದ್ಯಮಿಗಳು ಅದೇ ಹಿನ್ನೆಲೆಯ ಕುಟುಂಬಕ್ಕೆ ಸೇರಿರುವಂತಹವರು. ಆದರೆ, ಜಾಗತಿಕ ಕಂಪನಿಗಳಿಗೆ ಸಿಇಒ ಆಗಿರುವ ಭಾರತೀಯರಲ್ಲಿ ಬಹಳ ಜನರು ದೊಡ್ಡ ಹಿನ್ನೆಲೆ ಹೊಂದಿದವರಲ್ಲ. ತಮ್ಮ ಸ್ವಸಾಮರ್ಥ್ಯದಿಂದ (self made businessmen) ತಳಮಟ್ಟದಿಂದ ಬೆಳೆದು ಬಂದವರೇ ಹೆಚ್ಚು. ಅಂಥವರಲ್ಲಿ ಗೂಗಲ್ ಮತ್ತು ಆಲ್ಫಬೆಟ್ನ ಸಿಇಒ ಆಗಿರುವ ಸುಂದರ್ ಪಿಚೈ ಕೂಡ ಒಬ್ಬರು. ಚೆನ್ನೈನ ಮಧ್ಯಮವರ್ಗದ ಕುಟುಂಬದ ಹುಡುಗನಾಗಿ ಬೆಳೆದ ಸುಂದರ್ ಪಿಚೈ (Sundar Pichai) ಇವತ್ತು ಇಡೀ ವಿಶ್ವವನ್ನೇ ಆವರಿಸಿರುವ ತಂತ್ರಜ್ಞಾನ ಕಂಪನಿಯ ಮುಖ್ಯಸ್ಥರಾಗಿ ವಿಶ್ವದ ಪ್ರಭಾವಿಗಳಲ್ಲಿ ಒಬ್ಬರೆನಿಸಿದ್ದಾರೆ. ಅವರಿಗೆ ಈ ಎತ್ತರಕ್ಕೆ ಏರಲು ಹೇಗೆ ಸಾಧ್ಯವಾಯಿತು? ಹಾವಾಡಿಗರ ನಾಡು ಎಂದು ವಿದೇಶಿಗರು ಹಂಗಿಸುತ್ತಿದ್ದ ದೇಶದಿಂದ ಹೋಗಿ ಅದೇ ವಿದೇಶಿಗರ ಮುಂದೆ ನಿಂತು ಅವರು ಚುಕ್ಕಾಣಿ ಹಿಡಿಯುವುದು ಎಂದರೆ ಸಾಮಾನ್ಯವಲ್ಲ.
ಬುದ್ಧಿಯ ಮಾತು ಬೇಡ, ಮನಸಿನ ಮಾತು ಕೇಳಿ ಎಂಬುದು ಯುವ ಜನರಿಗೆ ಸುಂದರ್ ಪಿಚೈ ಅವರ ಸೊಗಸಾದ ಹಿತನುಡಿ.
‘ನಿಮ್ಮ ಮನಸು ಯಾವುದರಲ್ಲಿ ಖುಷಿ ಪಡುತ್ತದೆ ಎಂಬುದನ್ನು ನೀವು ಕಂಡುಕೊಳ್ಳಬೇಕು. ಬುದ್ಧಿಯ ಮಾತು ಕೇಳುವುದಕ್ಕಿಂತ ಮನಸಿನ ಈ ಖುಷಿ ಏನು ಎಂದು ತಿಳಿಯಲು ಯತ್ನಿಸಿ. ಇದೊಂದು ಪ್ರಯಾಣ ಇದ್ದಂತೆ. ಈ ಖುಷಿ ಯಾವುದು ಎಂಬುದನ್ನು ನೀವು ಕಂಡುಕೊಂಡರೆ ಆಗಲೇ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು,’ ಎಂದು ಸುಂದರ್ ಪಿಚೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಡಿಎ ಹೆಚ್ಚಳ ಘೋಷಣೆ; ಸಂಬಳ ಎಷ್ಟು ಹೆಚ್ಚಾಗಬಹುದು, ಇಲ್ಲಿದೆ ಲೆಕ್ಕಾಚಾರ
ಮಕ್ಕಳು ಯಾವ ಕೋರ್ಸ್ ಓದಬೇಕೆಂದು ಸಾಮಾನ್ಯವಾಗಿ ಪೋಷಕರೇ ನಿರ್ಧರಿಸುವುದುಂಟು. ಸಿವಿಲ್ ಎಂಜಿನಿಯರ್ ಆಗಬೇಕೆಂದು ಬಹಳ ಇಚ್ಛೆ ಹೊಂದಿದ್ದ ವಿದ್ಯಾರ್ಥಿಯೊಬ್ಬ ಮನೆಯವರ ಒತ್ತಡಕ್ಕೆ ಒಳಗಾಗಿ ವೈದ್ಯಕೀಯ ಕೋರ್ಸ್ಗೆ ಸೇರಿದರೆ ಹೇಗಾಗಬಹುದು? ಕೋರ್ಸ್ ಓದಬಹುದು. ಆದರೆ, ವೃತ್ತಿಯಲ್ಲಿ ಇಷ್ಟಪಟ್ಟು ಮುಂದುವರಿಯಲು ಆಗುತ್ತದೆಯೇ? ಜೀವನದಲ್ಲಿ ಕೆಲಸದ ಸಂತೃಪ್ತಿ, ವೃತ್ತಿ ಏಳ್ಗೆ ಸಿಗದೇ ಹೋಗಬಹುದು. ಕೆಲಸದ ಒತ್ತಡದಿಂದ ಬಳಲಬಹುದು ಎಂಬುದು ತಜ್ಞರ ಅನಿಸಿಕೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರ ಹಿತನುಡಿ ಕೂಡ ಇದೇ ನಿಟ್ಟಿನಲ್ಲಿ ಇರುವಂಥದ್ದು.
ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸುಂದರ್ ಪಿಚೈ ಅವರು ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆಗೆ ನಿರ್ಬಂಧದ ಗೆರೆ ಹಾಕುತ್ತಾರೆ ಎಂದು ಹೇಳಿಕೊಂಡಿದ್ದರು.
ತಂತ್ರಜ್ಞಾನದ ಅರಿವು ಇವತ್ತು ಎಲ್ಲರಿಗೂ ಇರಬೇಕು. ಆದರೆ, ಅದೇ ನಮ್ಮನ್ನು ಆವರಿಸಬಾರದು. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಸ್ವಯಂ ನಿಯಂತ್ರಣ ಇರಬೇಕು ಎಂದು ಹೇಳುವ ಗೂಗಲ್ ಸಿಇಒ, ತಮ್ಮ ಮಕ್ಕಳಿಗೆ ಸೀಮಿತ ಅವಧಿಗೆ ಮಾತ್ರ ಮೊಬೈಲ್, ಟಿವಿ ಬಳಕೆಗೆ ಅವಕಾಶ ಕೊಡುತ್ತಾರಂತೆ.
ಇದನ್ನೂ ಓದಿ: ಎಸ್ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ
ವೈಯಕ್ತಿಕವಾಗಿ ಮೊಬೈಲ್ ಬಳಕೆಯಿಂದ ದೂರ ಇರಲು ಇಚ್ಛಿಸುವ ಸುಂದರ್ ಪಿಚೈ ಬಳಿ 20 ಮೊಬೈಲ್ಗಳಿರುತ್ತವೆ. ಏಕಕಾಲದಲ್ಲಿ ಅವರು ಈ ಮೊಬೈಲ್ಗಳನ್ನು ಬಳಸುತ್ತಾರೆ ಎಂದರೆ ಅಚ್ಚರಿ ಎನಿಸಬಹುದು. ಆದರೆ, ಸಿಇಒ ಹುದ್ದೆಯ ಕಾರಣಕ್ಕೆ ಅವರು ಇಷ್ಟು ಮೊಬೈಲ್ಗಳನ್ನು ಬಳಸುವುದು ಅನಿವಾರ್ಯ ಎನ್ನಲಾಗಿದೆ. ಎಲ್ಲಾ ಮೊಬೈಲ್ನಲ್ಲೂ ಅವರು ಗೂಗಲ್ನ ಆ್ಯಪ್ಗಳು ಸರಿಯಾಗಿ ಕೆಲಸ ಮಾಡುತ್ತವೆಯಾ ಎಂಬುದನ್ನು ಸಿಇಒ ಆಗಿ ಗಮನಿಸುವ ಜವಾಬ್ದಾರಿ ಅವರಿಗಿರುತ್ತದೆ. ಅದಕ್ಕಾಗಿ ಅವರು ಏಕಕಾಲದಲ್ಲಿ ಅಷ್ಟು ಮೊಬೈಲ್ಗಳನ್ನು ಬಳಸುತ್ತಾರೆ.
ವೀಕೆಂಡ್ನಲ್ಲೂ ಅವರು ಮೊಬೈಲ್ ಬಳಕೆಯಿಂದ ಪೂರ್ಣವಾಗಿ ದೂರ ಇರಲು ಆಗುವುದಿಲ್ಲವಂತೆ. ಅದಕ್ಕೆ ಕಾರಣ ಅವರ ಹುದ್ದೆಯ ಜವಾಬ್ದಾರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ