Tata: ಟಾಟಾ ಕಂಪನಿಗಳಿಂದ ಬೆಂಗಳೂರಲ್ಲಿ ಗನ್ ಫ್ಯಾಕ್ಟರಿ, ಎಂಆರ್​ಒ ಘಟಕ; 2,300 ಕೋಟಿ ರೂ ಹೂಡಿಕೆ ಸಾಧ್ಯತೆ

|

Updated on: Feb 19, 2024 | 2:25 PM

Tata Group companies investment in Karnataka: ಕರ್ನಾಟಕದಲ್ಲಿ ಟಾಟಾ ಗ್ರೂಪ್​ನ ಕಂಪನಿಗಳು ವಿವಿಧ ಯೋಜನೆಗಳಿಗೆ 2,300 ಕೋಟಿ ರೂ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿವೆ. ಏರ್ ಇಂಡಿಯಾ ಬೆಂಗಳೂರಿನಲ್ಲಿ ತನ್ನ ವಿಮಾನಗಳಿಗೆ ಎಂಆರ್​ಒ ಘಟಕ ಸ್ಥಾಪಿಸಲಿದೆ. ದಕ್ಷಿಣ ಭಾರತಕ್ಕೆ ಬೆಂಗಳೂರು ಅದರ ಎಂಆರ್​ಒ ಹಬ್ ಆಗಿರಲಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಗನ್ ಫ್ಯಾಕ್ಟರಿ, ಆರ್ ಅಂಡ್ ಸೇರಿದಂತೆ ಮೂರು ಯೋಜನೆಗಳನ್ನು ಆರಂಭಿಸಲಿದೆ.

Tata: ಟಾಟಾ ಕಂಪನಿಗಳಿಂದ ಬೆಂಗಳೂರಲ್ಲಿ ಗನ್ ಫ್ಯಾಕ್ಟರಿ, ಎಂಆರ್​ಒ ಘಟಕ; 2,300 ಕೋಟಿ ರೂ ಹೂಡಿಕೆ ಸಾಧ್ಯತೆ
ಟಾಟಾ ಅಡ್ವಾನ್​ಸ್ಡ್ ಸಿಸ್ಟಮ್ಸ್​
Follow us on

ನವದೆಹಲಿ, ಫೆಬ್ರುವರಿ 19: ಕರ್ನಾಟಕದಲ್ಲಿ ಐಫೋನ್ ಫ್ಯಾಕ್ಟರಿ ಸೇರಿದಂತೆ ಹಲವು ಯೋಜನೆಗಳನ್ನು ನಡೆಸುತ್ತಿರುವ ಟಾಟಾ ಗ್ರೂಪ್ (Tata Group) ಇದೀಗ ರಾಜ್ಯದಲ್ಲಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ ಟಾಟಾ ಗ್ರೂಪ್ ಕಂಪನಿಗಳಾದ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್​ಡ್ ಸಿಸ್ಟಮ್ಸ್ (Tata Advanced Systems) ಒಟ್ಟು 2,300 ಕೋಟಿ ರೂ ಹೂಡಿಕೆ ಮಾಡಲಿವೆ. ಈ ಕಂಪನಿಗಳು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ (MoU) ಪತ್ರಕ್ಕೆ ಸಹಿಹಾಕಿವೆ. ಒಂದು ಅಂದಾಜು ಪ್ರಕಾರ ಈ ಯೋಜನೆಗಳಿಂದ 1,650 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಜೊತೆಗೆ ಪರೋಕ್ಷವಾಗಿ ಸಾವಿರಾರು ಮಂದಿಎ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಬೆಂಗಳೂರಲ್ಲಿ ಏರ್ ಇಂಡಿಯಾ ಎಂಆರ್​ಒ ಘಟಕ

ಏರ್ ಇಂಡಿಯಾ ಸಂಸ್ಥೆ ಬೆಂಗಳೂರಿನಲ್ಲಿ 1,300 ಕೋಟಿ ರೂ ಹೂಡಿಕೆಯಲ್ಲಿ ಎಂಆರ್​ಒ ಕೇಂದ್ರವನ್ನು ಸ್ಥಾಪಿಸಿದೆ. ವಿಮಾನ ಮತ್ತು ಅದರ ಬಿಡಿಭಾಗಗಳ ಮೈಂಟೆನೆನ್ಸ್, ದುರಸ್ತಿ ಕಾರ್ಯಗಳು (MRO- Maintenance, Repair and Overhaul) ಈ ಎಂಆರ್​ಒ ಘಟಕದಲ್ಲಿ ಆಗಲಿದೆ. ದಕ್ಷಿಣ ಭಾರತದಲ್ಲಿ ಏರ್ ಇಂಡಿಯಾ ಬೆಂಗಳೂರನ್ನು ತನ್ನ ಎಂಆರ್​ಒ ಕೇಂದ್ರವನ್ನಾಗಿ ಮಾಡಿಕೊಳ್ಳಲು ಉದ್ದೇಶಿಸಿದೆ. ಈ ಘಟಕಕ್ಕೆ 1,300 ಕೋಟಿ ರೂ ಬಂಡವಾಳ ಹಾಕಲಿದ್ದು, ಇದರಲ್ಲಿ 1,200 ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ಇರಲಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯದ ಆರೋಪ: 16ನೇ ಹಣಕಾಸು ಆಯೋಗದ ಮುಖ್ಯಸ್ಥರು ಹೇಳೋದಿದು

ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಎಂಆರ್​ಒ ಫೆಸಿಲಿಟಿಯಿಂದಾಗಿ ಏರ್ ಇಂಡಿಯಾ ವಿಮಾನಗಳಿಗೆ ವರ್ಷಕ್ಕೆ 80 ಲಕ್ಷದಷ್ಟು ಹೆಚ್ಚು ಪ್ರಯಾಣಿಕರು ಹೊಸದಾಗಿ ಸೇರ್ಪಡೆಯಾಗಬಹುದು ಎಂಬ ಎಣಿಕೆ ಇದೆ.

ಟಾಟಾ ಅಡ್ವಾನ್​ಸ್ಡ್ ಸಿಸ್ಟಮ್ಸ್​ನಿಂದ ಗನ್ ತಯಾರಿಕೆ

ಏರೋಸ್ಪೇಸ್, ಮಿಲಿಟರಿ ಎಂಜಿನಿಯರಿಂಗ್, ಡಿಫೆನ್ಸ್ ಟೆಕ್ನಾಲಜಿ ಕಂಪನಿ ಎನಿಸಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಕರ್ನಾಟಕದಲ್ಲಿ 1,030 ಕೋಟಿ ರೂ ಹೂಡಿಕೆಯಲ್ಲಿ ಮೂರು ಯೋಜನೆಗಳನ್ನು ಕೈಗೊಳ್ಳುತ್ತಿದೆ. 420 ಕೋಟಿ ರೂ ಹೂಡಿಕೆಯಲ್ಲಿ ಏರ್​ಕ್ರಾಫ್ಟ್ ಕನ್ವರ್ಷನ್ ಘಟಕ, 310 ಕೋಟಿ ರೂ ಹೂಡಿಕೆಯಲ್ಲಿ ಗನ್ ತಯಾರಿಕೆ ಘಟಕ ಮತ್ತು 300 ಕೋಟಿ ರೂ ಹೂಡಿಕೆಯಲ್ಲಿ ಏರೋಸ್ಪೇಸ್ ಆರ್ ಅಂಡ್ ಡಿ ಸೆಂಟರ್ ಅನ್ನು ಸ್ಥಾಪಿಸಲಿದೆ.

ಇದನ್ನೂ ಓದಿ: ಭಾರತದ ಕಾರು ಮಾರಾಟ ಕ್ಷೇತ್ರಕ್ಕೆ ಇಳಿದ ಮಿಟ್ಸುಬಿಶಿ; ಭಾರತದ ಟಿವಿಎಸ್ ಮೊಬಿಲಿಟಿಯಲ್ಲಿ ಪಾಲು ಖರೀದಿಸಿದ ಜಪಾನೀ ಕಂಪನಿ

ಏರ್​ಕ್ರಾಫ್ಟ್ ಕನ್ವರ್ಷನ್ ಘಟಕದಲ್ಲಿ ಪ್ಯಾಸಂಜರ್ ವಿಮಾನಗಳನ್ನು ಅಗತ್ಯ ಬಿದ್ದಲ್ಲಿ ಸರಕು ಸಾಗಣೆ ವಿಮಾನಗಳಾಗಿ ಪರಿವರ್ತಿಸುವ ಸೌಲಭ್ಯ ಇರಲಿದೆ.

ಗನ್ ತಯಾರಿಕಾ ಘಟಕದಿಂದ ಕರ್ನಾಟಕದಲ್ಲಿ ವಿವಿಧ ಉದ್ದಿಮೆಗಳಿಗೆ ಅನುಕೂಲವಾಗಲಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್​ನ ಗನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿಗೆ 13,000 ಬಿಡಿಭಾಗಗಳು ಬೇಕಾಗುತ್ತದೆ. ಇದರಲ್ಲಿ ಶೇ. 50ರಷ್ಟು ಬಿಡಿಭಾಗಗಳಲ್ಲಿ ಕರ್ನಾಟಕದ ವಿವಿಧೆಡೆಯಿಂದಲೇ ಪಡೆಯಲು ಟಾಟಾ ಕಂಪನಿ ನಿರ್ಧರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ