Mitsubishi: ಭಾರತದ ಕಾರು ಮಾರಾಟ ಕ್ಷೇತ್ರಕ್ಕೆ ಇಳಿದ ಮಿಟ್ಸುಬಿಶಿ; ಭಾರತದ ಟಿವಿಎಸ್ ಮೊಬಿಲಿಟಿಯಲ್ಲಿ ಪಾಲು ಖರೀದಿಸಿದ ಜಪಾನೀ ಕಂಪನಿ

Indian Car Sales Market: ಜಪಾನ್​ನ ಮಿಟ್ಸುಬಿಶಿ ಕಾರ್ಪ್ ಭಾರತದ ಟಿವಿಎಸ್ ಮೊಬಿಲಿಟಿ ಕಂಪನಿ ಜೊತೆ ಸಹಭಾಗಿತ್ವದಲ್ಲಿ ಡೀಲರ್​ಶಿಪ್ ವ್ಯವಹಾರಕ್ಕೆ ಧುಮುಕಿದೆ. ಟಿವಿಎಸ್ ಮೊಬಿಲಿಟಿಯ ಹೊಸ ಕಾರು ಮಾರಾಟ ವಿಭಾಗದಲ್ಲಿ ಮಿಟ್ಸುಬಿಶಿ 500 ಕೋಟಿ ರೂ ಮೊತ್ತಕ್ಕೆ ಶೇ. 30ರಷ್ಟು ಪಾಲುದಾರಿಕೆ ಪಡೆಯಲಿದೆ. ಜಪಾನ್​ನ ಕಾರುಗಳ ಮಾರಾಟಕ್ಕೆ ಹೆಚ್ಚು ಒತ್ತು ಕೊಡುವುದು ಮಿಟ್ಸುಬಿಶಿ ಕಂಪನಿಯ ಇರಾದೆಯಾಗಿದೆ.

Mitsubishi: ಭಾರತದ ಕಾರು ಮಾರಾಟ ಕ್ಷೇತ್ರಕ್ಕೆ ಇಳಿದ ಮಿಟ್ಸುಬಿಶಿ; ಭಾರತದ ಟಿವಿಎಸ್ ಮೊಬಿಲಿಟಿಯಲ್ಲಿ ಪಾಲು ಖರೀದಿಸಿದ ಜಪಾನೀ ಕಂಪನಿ
ಮಿಟ್ಸುಬಿಶಿ
Follow us
|

Updated on: Feb 19, 2024 | 10:43 AM

ನವದೆಹಲಿ, ಫೆಬ್ರುವರಿ 19: ಜಪಾನ್ ದೇಶದ ಪ್ರಮುಖ ಕಾರ್ ಡೀಲರ್ ಸಂಸ್ಥೆಯಾದ ಮಿಟ್ಸುಬಿಶಿ ಕಾರ್ಪೊರೇಶನ್ (Mitsubishi Corp) ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಟಿವಿಎಸ್ ಗ್ರೂಪ್​ಗೆ ಸೇರಿದ ಟಿವಿಎಸ್ ಮೊಬಿಲಿಟಿ (TVS Mobility) ಸಂಸ್ಥೆಯಲ್ಲಿ ಶೇ. 30ರಷ್ಟು ಪಾಲು ಖರೀದಿಸುತ್ತಿದೆ. ಈ ಒಪ್ಪಂದದ ಪ್ರಕಾರ ಟಿವಿಎಸ್ ಮೊಬಿಲಿಟಿಯ ಕಾರು ಮಾರಾಟ ವಿಭಾಗ ಪ್ರತ್ಯೇಕಗೊಳ್ಳಲಿದೆ. ಈ ಹೊಸ ಕಂಪನಿಯಲ್ಲಿ ಮಿಟ್ಸುಬಿಶಿ ಶೇ. 30ರಷ್ಟು ಪಾಲು ಹೊಂದಿರಲಿದೆ. ಈ ಜಪಾನೀ ಕಂಪನಿ 5 ಬಿಲಿಯನ್​ನಿಂದ 10 ಬಿಲಿಯನ್ ಯೆನ್​ನಷ್ಟು (ಸುಮಾರು 250 ಕೋಟಿ ರೂನಿಂದ 550 ಕೋಟಿ ರೂವರೆಗೆ) ಬಂಡವಾಳ ಹೂಡಿಕೆ ಮಾಡಲಿದೆ.

ಎಲ್ಲವೂ ಅಂತಿಮಗೊಂಡ ಬಳಿಕ ಜಪಾನ್​ನಲ್ಲಿರುವ ಮಿಟ್ಸುಬಿಶಿಯ ಉದ್ಯೋಗಿಗಳು ಭಾರತಕ್ಕೆ ಆಗಮಿಸಲಿದ್ದಾರೆ. ಟಿವಿಎಸ್ ಮೊಬಿಲಿಟಿಯ ಈಗಿರುವ 150 ಶೋರೂಮ್ ಅನ್ನು ಹೊಸ ಕಂಪನಿಯ ಕಾರ್ಯಾಚರಣೆಗೆ ಬಳಸಲಾಗುತ್ತದೆ. ಪ್ರತಿಯೊಂದು ಬ್ರ್ಯಾಂಡ್ ಕಾರಿಗೂ ಪ್ರತ್ಯೇಕ ಶೋರೂಮ್ ರಚಿಸುವುದು ಮಿಟ್ಸುಬಿಶಿಯ ಇರಾದೆಯಾಗಿದೆ.

ಇದನ್ನೂ ಓದಿ: ವಿಶೇಷ ವ್ಯಾಗನ್ ಬೋಗಿಗಳ ತಯಾರಿಕೆಗೆ ತೀತಾಗಡ್ ರೈಲ್ ಜೊತೆ ರಕ್ಷಣಾ ಸಚಿವಾಲಯದ ಒಪ್ಪಂದ

ಅಷ್ಟೇ ಅಲ್ಲ, ಜಪಾನ್​ನ ಕಾರುಗಳನ್ನು ಮಾರಲು ಮಿಟ್ಸುಬಿಶಿ ಹೆಚ್ಚು ಗಮನ ನೀಡಲು ಉದ್ದೇಶಿಸಿದೆ. ಸ್ಥಳೀಯ ಕಾರುಗಳ ಜೊತೆಗೆ ಜಪಾನ್​ನ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚುರಪಡಿಸಲು ಹೊರಟಿದೆ ಮಿಟ್ಸುಬಿಶಿ.

ಹೊಸ ಕಾರು ಮಾರಾಟದಲ್ಲಿ ಚೀನಾ ಮತ್ತು ಅಮೆರಿಕ ಬಿಟ್ಟರೆ ಭಾರತವೇ ಹೆಚ್ಚು. ಆದರೆ ಸದ್ಯ ಭಾರತದಲ್ಲಿ ಜಪಾನೀ ವಾಹನ ತಯಾರಕ ಸಂಸ್ಥೆಗಳಿಗೆ ಅಷ್ಟೇನೂ ಗೆಲುವು ಸಿಕ್ಕಿಲ್ಲ. ಸುಜುಕಿ, ಟೊಯೊಟಾ, ಹೊಂಡಾ, ನಿಸ್ಸಾನ್ ಪ್ರಮುಖ ಜಪಾನೀ ಕಾರು ತಯಾರಕ ಕಂಪನಿಗಳಾಗಿವೆ. ದ್ವಿಚಕ್ರಮ ವಾಹನ ಕ್ಷೇತ್ರದಲ್ಲಿ ಕವಾಸಕಿ, ಸುಜುಕಿ, ಯಮಾಹ ಕಂಪನಿಗಳಿವೆ. ಮಾರುತಿ ಸಹಯೋಗದಲ್ಲಿ ಸುಜುಕಿ ಭಾರತದಲ್ಲಿ ನಂಬರ್ ಒನ್ ಎನಿಸಿದೆ. ಟೊಯೊಟಾ, ಹೊಂಡಾ, ನಿಸ್ಸಾನ್ ಕಾರುಗಳು ಜನಪ್ರಿಯವಾದರೂ ನಿರೀಕ್ಷಿತ ಗುರಿ ಮುಟ್ಟಿಲ್ಲ. ಮಿಟ್ಸುಬಿಶಿ ಈ ಟ್ರೆಂಡ್ ಬದಲಿಸಲಿದೆಯಾ ನೋಡಬೇಕು.

ಇದನ್ನೂ ಓದಿ: ಮುಂಬೈನಲ್ಲಿ ಅಮಿತಾಭ್ ಬಚ್ಚನ್ ಕಚೇರಿ ಸ್ಥಳ ಬಾಡಿಗೆಗೆ ಪಡೆದ ವಾರ್ನರ್ ಸಂಸ್ಥೆ; ಇದರ ಬಾಡಿಗೆ ದರ ಇತ್ಯಾದಿ ವಿವರ

ಮಿಟ್ಸುಬಿಶಿ ಕಾರ್ಪೊರೇಶನ್ ಮತ್ತು ಟಿವಿಎಸ್ ಮೊಬಿಲಿಟಿ ವಿವಿಧ ಕಾರುಗಳ ಡೀಲರ್​ಶಿಪ್ ಕಂಪನಿಗಳಾಗಿವೆ. ಟಿವಿಎಸ್ ಮೊಬಿಲಿಟಿ ಭಾರತದಲ್ಲಿ ಅಶೋಕ್ ಲೇಲ್ಯಾಂಡ್, ಹೊಂಡಾ, ಮಹೀಂದ್ರ, ರೇನಾ ಕಂಪನಿಗಳ ವಾಹನಗಳನ್ನು ಮಾರಾಟ ಮಾಡುತ್ತದೆ. ಎಸ್ಕಾರ್ಟ್ಸ್, ಆಲ್ಫಾ ಎಕ್ವಿಪ್ಮೆಂಟ್ ಮೊದಲಾದ ಕಂಪನಿಗಳ ವಿವಿಧ ಉತ್ಪನ್ನಗಳನ್ನೂ ಮಾರುತ್ತದೆ. ಮಿಟ್ಸುಬಿಶಿ ಕಾರ್ಪೊರೇಶನ್ ಕೂಡ ಇದೇ ರೀತಿ ವಾಹನ ಮಾರಾಟ ಕಂಪನಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ