Tata Apple stores: ದೇಶದಲ್ಲಿ ನೂರು ವಿಶೇಷ ಆ್ಯಪಲ್ ಸ್ಟೋರ್​ ಆರಂಭಿಸಲಿದೆ ಟಾಟಾ ಗ್ರೂಪ್; ವರದಿ

| Updated By: Ganapathi Sharma

Updated on: Dec 12, 2022 | 3:55 PM

ಮಾಲ್​ಗಳು ಮತ್ತು ಸ್ಟ್ರೀಟ್​ಗಳ ಬಳಿ ಸ್ಟೋರ್ ಆರಂಭಿಸಲು ಜಾಗಕ್ಕಾಗಿ ಟಾಟಾ ಈಗಾಗಲೇ ಮಾತುಕತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

Tata Apple stores: ದೇಶದಲ್ಲಿ ನೂರು ವಿಶೇಷ ಆ್ಯಪಲ್ ಸ್ಟೋರ್​ ಆರಂಭಿಸಲಿದೆ ಟಾಟಾ ಗ್ರೂಪ್; ವರದಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಟಾಟಾ ಸಮೂಹವು (Tata Group) ಶೀಘ್ರದಲ್ಲೇ ದೇಶದಾದ್ಯಂತ 100 ಸಣ್ಣ ವಿಶೇಷ ಆ್ಯಪಲ್ ಸ್ಟೋರ್​ಗಳನ್ನು (Apple Stores) ಆರಂಭಿಸಲಿದೆ ಎಂದು ವರದಿಯಾಗಿದೆ. ಟಾಟಾ ಒಡೆತನದ ಇನ್​ಫಿನಿಟಿ ರಿಟೇಲ್​ ಜತೆ ಆ್ಯಪಲ್ ಮಾತುಕತೆ ನಡೆಸುತ್ತಿದೆ. ಇನ್​ಫಿನಿಟಿ ರಿಟೇಲ್ ಸದ್ಯ ದೇಶದಲ್ಲಿ ಕ್ರೋಮಾ ಸ್ಟೋರ್​​ಗಳನ್ನು ನಡೆಸುತ್ತಿದೆ. ಶಾಪಿಂಗ್ ಮಾಲ್​ಗಳಲ್ಲಿ, ಖ್ಯಾತ ಸ್ಥಳಗಳು ಮತ್ತು ಸಮೀಪದ ಪ್ರದೇಶಗಳಲ್ಲಿ 500-600 ಚದರ ಅಡಿ ವಿಸ್ತೀರ್ಣದ ಆ್ಯಪಲ್ ಸ್ಟೋರ್​​ಗಳನ್ನು ತೆರೆಯಲಾಗುವುದು. ಈ ಸ್ಟೋರ್​ಗಳು ಆ್ಯಪಲ್ ಪ್ರೀಮಿಯಂ ರಿಸೆಲ್ಲರ್ ಸ್ಟೋರ್​ಗಳಿಗಿಂತ ಸಣ್ಣದಾಗಿರಲಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ತಿಳಿಸಿದೆ. ಪ್ರೀಮಿಯಂ ರಿಸೆಲ್ಲರ್ ಸ್ಟೋರ್​ಗಳು ಸಾವಿರ ಚದರ ಅಡಿ ವಿಸ್ತೀರ್ಣದ್ದಾಗಿವೆ. ಸಣ್ಣ ಸ್ಟೋರ್​ಗಳಲ್ಲಿ ಐಫೋನ್, ಐಪ್ಯಾಡ್ ಮತ್ತು ವಾಚ್​ಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಮಾಲ್​ಗಳು ಮತ್ತು ಸ್ಟ್ರೀಟ್​ಗಳ ಬಳಿ ಸ್ಟೋರ್ ಆರಂಭಿಸಲು ಜಾಗಕ್ಕಾಗಿ ಟಾಟಾ ಈಗಾಗಲೇ ಮಾತುಕತೆ ಆರಂಭಿಸಿದೆ ರಿಟೇಲ್​ ಕನ್ಸಲ್ಟೇಂಟ್ ಒಬ್ಬರು ತಿಳಿಸಿದ್ದಾರೆ. ಆ್ಯಪಲ್​ನ ಮೊದಲ ಕಂಪನಿ ಮಾಲೀಕತ್ವದ ಸ್ಟೋರ್ ಮಾರ್ಚ್​ನಲ್ಲಿ ಮುಂಬೈಯಲ್ಲಿ ಆರಂಭವಾಗುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು

ಕಂಪನಿ ಮಾಲೀಕತ್ವದ ಸ್ಟೋರ್​ಗಳಿಂದ ಸಹಭಾಗಿತ್ವ ಹೊಂದಿರುವವರಿಗೆ ಮತ್ತು ಚಿಲ್ಲರೆ ಮಾರಾಟಗಾರರಿಗೆ ಅನುಕೂಲವಾಗಲಿದೆ. ಮಾರಾಟ ಹೆಚ್ಚಾಗಲಿದೆ ಎಂದು ಆ್ಯಪಲ್ ಈಗಾಗಲೇ ಸ್ಥಳೀಯ ಫ್ರಾಂಚೈಸ್​​ ಸಹಭಾಗಿತ್ವ ಹೊಂದಿರುವವರಿಗೆ ತಿಳಿಸಿದೆ ಎನ್ನಲಾಗಿದೆ.

ದೇಶದಲ್ಲಿ ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ 17 ಲಕ್ಷ ಐಫೋನ್ ಮಾರಾಟವಾಗಿದೆ ಎಂದು ಸೈಬರ್​ಮೀಡಿಯಾ ರಿಸರ್ಚ್ (ಸಿಎಂಆರ್) ತಿಳಿಸಿದೆ. ಭಾರತದಲ್ಲಿ ಮಾರಾಟ ಹೆಚ್ಚಿಸಲು ಮತ್ತು ಉತ್ಪಾದನಾ ಸಾಮರ್ಥ್ಯ ವೃದ್ಧಿಸುವತ್ತ ಆ್ಯಪಲ್ ಚಿತ್ತ ನೆಟ್ಟಿದೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸುವಂತೆ ವಿಸ್ಟ್ರಾನ್, ಪಾಕ್ಸ್​​ಕಾನ್ ಹಾಗೂ ಪೆಗಾಟ್ರಾನ್​​ಗಳಿಗೆ ಆ್ಯಪಲ್ ಸೂಚಿಸಿದೆ ಎಂದು ‘ಲೈವ್ ಮಿಂಟ್’ ವರದಿ ತಿಳಿಸಿದೆ. ವಿಸ್ಟ್ರಾನ್, ಪಾಕ್ಸ್​​ಕಾನ್ ಹಾಗೂ ಪೆಗಾಟ್ರಾನ್​​ಗಳು ಭಾರತದಲ್ಲಿ ಐಫೋನ್ ತಯಾರಿಸುತ್ತಿವೆ. ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸುವುದರಿಂದ ಭಾರತದಲ್ಲಿ ತಯಾರಿಸಿದ ಐಫೋನ್ ರಫ್ತಿಗೆ ನೆರವಾಗಲಿದೆ ಎಂದು ವರದಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Mon, 12 December 22