ನವದೆಹಲಿ, ಫೆಬ್ರುವರಿ 19: ಟಾಟಾ ಗ್ರೂಪ್ (Tata Group) ಭಾರತದಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ (Market Capital) ಹೊಂದಿರುವ ಬಿಸಿನೆಸ್ ಸಮೂಹವೆನಿಸಿದೆ. ಟಾಟಾ ಗ್ರೂಪ್ನ ಪ್ರಮುಖ ಕಂಪನಿ ಎನಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮಾರುಕಟ್ಟೆ ಬಂಡವಾಳದಲ್ಲಿ ಭಾರತದ ನಂಬರ್ 2 ಕಂಪನಿ ಎನಿಸಿದೆ. ಟಾಟಾ ಗ್ರೂಪ್ನ ಎಲ್ಲಾ ಕಂಪನಿಗಳ ಮಾರ್ಕೆಟ್ ಕ್ಯಾಪ್ ಅನ್ನು ಒಟ್ಟುಗೂಡಿಸಿದರೆ 365 ಬಿಲಿಯನ್ ಡಾಲರ್ನಷ್ಟಾಗುತ್ತದೆ. ಇದು ಪಾಕಿಸ್ತಾನದ ಇಡೀ ಒಂದು ವರ್ಷದ ಜಿಡಿಪಿಗೆ ಸಮ. ಐಎಂಎಫ್ನ ಅಂದಾಜು ಪ್ರಕಾರ ಪಾಕಿಸ್ತಾನದ ಜಿಡಿಪಿ 341 ಬಿಲಿಯನ್ ಡಾಲರ್ನಷ್ಟಿದೆ. ಟಿಸಿಎಸ್ ಕಂಪನಿಯೊಂದರ ಮಾರುಕಟ್ಟೆ ಬಂಡವಾಳ 170 ಬಿಲಿಯನ್ ಡಾಲರ್ ಅಥವಾ 15 ಲಕ್ಷಕೋಟಿ ರೂ ಇದೆ. ಪಾಕಿಸ್ತಾನದ ಆರ್ಥಿಕತೆಯ ಮೌಲ್ಯದ ಅರ್ಧಭಾಗದ ಹಣ ಟಿಸಿಎಸ್ನಲ್ಲಿ ಹೂಡಿಕೆ ಆಗಿದೆ.
ಪಾಕಿಸ್ತಾನಕ್ಕೆ ಕಳೆದ ವರ್ಷ ಸಂಭವಿಸಿದ ಭೀಕರ ನೆರೆ ಮತ್ತು ಪ್ರವಾಹಗಳಿಂದಾಗಿ ಭಾರೀ ಹಾನಿ ಆಗಿದೆ. 2020-21 ಮತ್ತು 2021-22ರಲ್ಲಿ ಕ್ರಮವಾಗಿ ಶೇ. 5.8 ಮತ್ತು ಶೇ. 6.1ರಷ್ಟು ಉತ್ತಮ ಬೆಳವಣಿಗೆ ಕಂಡಿದ್ದ ಪಾಕಿಸ್ತಾನದ ಜಿಡಿಪಿ 2022-23ರಲ್ಲಿ ಮೈನಸ್ ದರಕ್ಕೆ ಕುಸಿದಿರಬಹುದು ಎಂಬ ಭೀತಿ ಇದೆ.
ಇದನ್ನೂ ಓದಿ: ಟಾಟಾ ಕಂಪನಿಗಳಿಂದ ಬೆಂಗಳೂರಲ್ಲಿ ಗನ್ ಫ್ಯಾಕ್ಟರಿ, ಎಂಆರ್ಒ ಘಟಕ; 2,300 ಕೋಟಿ ರೂ ಹೂಡಿಕೆ ಸಾಧ್ಯತೆ
ಪಾಕಿಸ್ತಾನಕ್ಕೆ ಇರುವ ಬಾಹ್ಯ ಸಾಲ 125 ಬಿಲಿಯನ್ ಡಾಲರ್ನಷ್ಟು. ಜುಲೈನಲ್ಲಿ ಅದು ತೀರಿಸಬೇಕಿರುವ ಹಣವೇ 25 ಬಿಲಿಯನ್ ಡಾಲರ್ನಷ್ಟಿದೆ. ಹೀಗಾಗಿ, ಪಾಕಿಸ್ತಾನಕ್ಕೆ ಈಗ ಒಂದೊಂದು ಪೈಸೆಯೂ ಬಹಳ ಮುಖ್ಯ ಎಂಬಂತೆ ಆಗಿದೆ.
ಟಾಟಾ ಗ್ರೂಪ್ ಒಂದು ದೊಡ್ಡ ಬಿಸಿನೆಸ್ ಎಂಪೈರ್. ಅದರಲ್ಲಿ 70ಕ್ಕೂ ಹೆಚ್ಚು ಕಂಪನಿಗಳಿವೆ. ಸುಮಾರು 29 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಪೈಕಿ ಎಂಟಕ್ಕೂ ಹೆಚ್ಚು ಕಂಪನಿಗಳ ಮಾರುಕಟ್ಟೆ ಬಂಡವಾಳ ಕಳೆದ ಒಂದು ವರ್ಷದಲ್ಲಿ ಡಬಲ್ ಆಗಿದೆ.
ಇದನ್ನೂ ಓದಿ: ಹುಟ್ಟುಹಾಕಿದ ಕಂಪನಿಯಿಂದಲೇ ಉಚ್ಛಾಟನೆಗೊಳ್ಳುವ ಭೀತಿಯಲ್ಲಿ ಬೈಜು ಫ್ಯಾಮಿಲಿ; ಷೇರುದಾರರಿಂದ ನಡೆಯಲಿದೆ ವೋಟಿಂಗ್
ಆದರೆ, ಟಾಟಾ ಸನ್ಸ್, ಟಾಟಾ ಕ್ಯಾಪಿಟಲ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಏರ್ ಇಂಡಿಯಾ, ವಿಸ್ತಾರ ಏರ್ಲೈನ್ಸ್ ಇತ್ಯಾದಿ ಹಲವು ಕಂಪನಿಗಳು ಷೇರುಮಾರುಕಟ್ಟೆಗೆ ಬಂದಿಲ್ಲ. ಇವುಗಳ ಮೌಲ್ಯವೆಲ್ಲವನ್ನೂ ಪರಿಗಣಿಸಿದರೆ ಟಾಟಾ ಗ್ರೂಪ್ನ ಮಾರುಕಟ್ಟೆ ಮೌಲ್ಯ 600 ಬಿಲಿಯನ್ ಡಾಲರ್ ದಾಟಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು. ಅಂದರೆ ವಿಶ್ವದ ಟಾಪ್ 10 ಕಂಪನಿಗಳ ಪಟ್ಟಿಗೆ ಟಾಟಾ ಗ್ರೂಪ್ ಅನ್ನೂ ಸೇರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ