Byju’s: ಹುಟ್ಟುಹಾಕಿದ ಕಂಪನಿಯಿಂದಲೇ ಉಚ್ಛಾಟನೆಗೊಳ್ಳುವ ಭೀತಿಯಲ್ಲಿ ಬೈಜು ಫ್ಯಾಮಿಲಿ; ಷೇರುದಾರರಿಂದ ನಡೆಯಲಿದೆ ವೋಟಿಂಗ್
Call for Byju's Shareholders Meeting: ಬೈಜುಸ್ನ ಮಾತೃ ಸಂಸ್ಥೆ ಥಿಂಕ್ ಅಂಡ್ ಲರ್ನ್ನ ಆಡಳಿತ ಮಂಡಳಿಯನ್ನು ಉಚ್ಚಾಟಿಸಲು ಹೂಡಿಕೆದಾರರು ಷೇರುದಾರರ ವೋಟಿಂಗ್ ಕರೆದಿದ್ದಾರೆ. ಬೈಜು ರವೀಂದ್ರನ್, ಅವರ ಪತ್ನಿ ದಿವ್ಯಾ ಗೋಕುಲನಾಥ್, ಸಹೋದರ ರಿಜು ರವೀಂದ್ರನ್ ಅವರು ಥಿಂಕ್ ಅಂಡ್ ಲರ್ನ್ನ ಮಂಡಳಿಯ ಮೂವರು ಸದಸ್ಯರಾಗಿದ್ದಾರೆ. ಮೊದಲಿಗೆ ಇಜಿಎಂ ಸಭೆ ನಡೆದು ಕೋರಂ ರಚನೆಯಾಗಲಿದ್ದು ಆ ಬಳಿಕ ನಿರ್ಣಯಗಳ ಮೇಲೆ ವೋಟಿಂಗ್ ನಡೆಯಲಿದೆ.
ಮುಂಬೈ, ಫೆಬ್ರುವರಿ 19: ಬೈಜುಸ್ ಸಂಸ್ಥೆಯನ್ನು ಸೃಷ್ಟಿಸಿ ಒಂದು ಕಾಲಕ್ಕೆ ಭಾರತದ ಹೆಗ್ಗಳಿಕೆಯ ಸ್ಟಾರ್ಟಪ್ ಎನ್ನುವ ಮಟ್ಟಕ್ಕೆ ಬೆಳೆಸಿದ ಬೈಜು ರವೀಂದ್ರನ್ ಮತ್ತವರ ಕುಟುಂಬ (Byju Raveendran’s Family) ಈಗ ಹೊರಬೀಳುವ ಭೀತಿಯಲ್ಲಿದ್ದಾರೆ. ತಾವೇ ಹುಟ್ಟುಹಾಕಿದ ಕಂಪನಿಯಲ್ಲಿ ಅವರೀಗ ಅನಾಥರಾಗಿದ್ದಾರೆ. ಬೈಜುಸ್ನಲ್ಲಿ ಸಂಸ್ಥಾಪಕರು ಮತ್ತು ಹೂಡಿಕೆದಾರರ ನಡುವೆ ನಡೆಯುತ್ತಲೇ ಇದ್ದ ಜಟಾಪಟಿ ಈಗ ಕ್ಲೈಮ್ಯಾಕ್ಸ್ ಹಂತ ತಲುಪಲಿದೆ. ಇದೇ ಶುಕ್ರವಾರದಂದು (ಫೆ. 23) ಬೈಜುಸ್ನ ಮಾತೃ ಸಂಸ್ಥೆ ಥಿಂಕ್ ಅಂಡ್ ಲರ್ನ್ನ (Think & Learn) ಎಲ್ಲಾ ಷೇರುದಾರರ ವಿಶೇಷ ಸಭೆ ನಡೆಯಲಿದೆ. ಬೈಜು ರವೀಂದ್ರನ್ ನೇತೃತ್ವದ ಮೂವರು ಸದಸ್ಯರ ಮಂಡಳಿಯನ್ನು ಉಚ್ಚಾಟಿಸಬೇಕೋ ಬೇಡವೋ ಎಂಬುದು ವೋಟಿಂಗ್ ಮೂಲಕ ನಿರ್ಧಾರವಾಗಲಿದೆ.
ಥಿಂಕ್ ಅಂಡ್ ಲರ್ನ್ ಕಂಪನಿಯಲ್ಲಿ ಬೈಜು ರವೀಂದ್ರನ್, ಅವರ ಪತ್ನಿ ದಿವ್ಯಾ ಗೋಕುಲನಾಥ್ ಮತ್ತು ಸಹೋದರ ರಿಜು ರವೀಂದ್ರನ್ ಅವರು ಮಂಡಳಿಯ ಸದಸ್ಯರಾಗಿದ್ದಾರೆ. ಈ ಮೂವರ ಬಳಿ ಇರುವ ಷೇರುಪಾಲು ಶೇ. 26ರಷ್ಟು ಇದೆ. ಹೂಡಿಕೆದಾರರ ಗುಂಪು ಸೇರಿಸಿದರೆ ಶೇ. 25ಕ್ಕಿಂತಲೂ ಹೆಚ್ಚು ಷೇರುಪಾಲು ಹೊಂದಿದ್ದಾರೆ. ಆದರೆ, ಇವರಿಗೆ ವೋಟಿಂಗ್ ಹಕ್ಕು ಇರುವುದಿಲ್ಲ. ಇನ್ನು ಇತರ ಷೇರುದಾರರ ಪಾಲು ಶೇ. 45ರಷ್ಟು ಇದೆ. ಆದರೆ, ವೈಯಕ್ತಿಕವಾಗಿ ಈ ಷೇರುದಾರರ ಬಳಿ ತೀರಾ ಹೆಚ್ಚಿನ ಷೇರು ಪಾಲು ಇಲ್ಲ. ವೋಟಿಂಗ್ನಲ್ಲಿ ಯಾವುದಾದರೂ ನಿರ್ಣಯದ ಮೇಲೆ ಶೇ. 50ಕ್ಕಿಂತ ಹೆಚ್ಚು ಮತ ಬಿದ್ದರೆ ಅದಕ್ಕೆ ಗೆಲುವಾಗುತ್ತದೆ.
ಇದನ್ನೂ ಓದಿ: ವಿಶೇಷ ವ್ಯಾಗನ್ ಬೋಗಿಗಳ ತಯಾರಿಕೆಗೆ ತೀತಾಗಡ್ ರೈಲ್ ಜೊತೆ ರಕ್ಷಣಾ ಸಚಿವಾಲಯದ ಒಪ್ಪಂದ
ಹೂಡಿಕೆದಾರರು ಇಜಿಎಂ ಸಭೆ (ವಿಶೇಷ ಸಭೆ – Extraordinary Meeting) ಕರೆದಿದ್ದಾರೆ. ಷೇರುದಾರರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕೋರಂ ರಚಿಸಬೇಕಾದರೆ ಮಂಡಳಿಯ ಇಬ್ಬರು ಸದಸ್ಯರು ಇರಬೇಕಾಗುತ್ತದೆ. ಇಜಿಎಂನಲ್ಲಿ ಪ್ರೊಮೋಟರ್ ಡೈರೆಕ್ಟರ್ ಉಪಸ್ಥಿತರಿರಬೇಕು. ಒಂದು ವೇಳೆ ಇವರು ಸಭೆಗೆ ಬರಲಿಲ್ಲವೆಂದರೆ ಒಂದು ವಾರ ಕಾಲ ಇಜಿಎಂ ಅನ್ನು ಮುಂದೂಡಲಾಗುತ್ತದೆ. ಆ ಮುಂದೂಡಿದ ಸಭೆಗೂ ಪ್ರೊಮೋಟರ್ ಡೈರೆಕ್ಟರ್ ಬರಲಿಲ್ಲವೆಂದರೆ ಸಭೆಯಲ್ಲಿ ಉಪಸ್ಥಿತರಿರುವ ಷೇರುದಾರರೇ ಸೇರಿ ಕೋರಂ ರಚಿಸಬಹುದು.
ಇಜಿಎಂ ಅಜೆಂಡಾ ಏನು?
ಬೈಜುಸ್ನಲ್ಲಿ ಅಸಮರ್ಪಕ ಆಡಳಿತ, ಹಣಕಾಸು ನಿರ್ವಹಣೆ ಲೋಪ, ಕಾನೂನು ಬದ್ಧತೆ ಇಲ್ಲದಿರುವುದು ಇದೇ ವಿಚಾರದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ, ಕಂಪನಿಯ ನಾಯಕತ್ವ ಬದಲಾವಣೆ ಆಗುವ ನಿಟ್ಟಿನಲ್ಲಿ ಮಂಡಳಿ ಪುನಾರಚನೆ ಆಗಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಇದು ಹೂಡಿಕೆದಾರರು ಇಟ್ಟಿರುವ ಅಜೆಂಡಾ ಆಗಿದೆ.
ಇದನ್ನೂ ಓದಿ: ಭಾರತದ ಕಾರು ಮಾರಾಟ ಕ್ಷೇತ್ರಕ್ಕೆ ಇಳಿದ ಮಿಟ್ಸುಬಿಶಿ; ಭಾರತದ ಟಿವಿಎಸ್ ಮೊಬಿಲಿಟಿಯಲ್ಲಿ ಪಾಲು ಖರೀದಿಸಿದ ಜಪಾನೀ ಕಂಪನಿ
ಒಂದು ವೇಳೆ, ಈ ನಿರ್ಣಯಗಳಿಗೆ ಷೇರುದಾರರ ಮತಗಳ ಮೂಲಕ ಗೆಲುವು ಸಾಧ್ಯವಾಗದೇ ಹೋದಲ್ಲಿ ಹೂಡಿಕೆದಾರರು ಬೈಜುಸ್ ವಿರುದ್ಧ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ದೂರು ಸಲ್ಲಿಸುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ