
ನವದೆಹಲಿ, ಅಕ್ಟೋಬರ್ 27: ಟಾಟಾ ಗ್ರೂಪ್ ಸಂಸ್ಥೆ (Tata group) ಭಾರತದಲ್ಲಿ ಆ್ಯಪಲ್ನ ಐಫೋನ್ಗಳನ್ನು ತಯಾರಿಸುವುದು ಖಚಿತವಾಗಿದೆ. ವಿಸ್ಟ್ರಾನ್ ಇನ್ಫೋಕಾಮ್ (Wistron Infocomm Manufacturing Ltd) ಸಂಸ್ಥೆಯನ್ನು ಟಾಟಾಗೆ ಮಾರುವುದಕ್ಕೆ ಅದರ ಮಾತೃ ಸಂಸ್ಥೆ ಒಪ್ಪಿಗೆ ನೀಡಿದೆ. ಈ ವಿಚಾರವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chadrashekhar) ತಮ್ಮ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ. ವಿಸ್ಟ್ರಾನ್ ಕಾರ್ಪೊರೇಶನ್ ಸಂಸ್ಥೆ ಈ ನಿಟ್ಟಿನಲ್ಲಿ ಅಧಿಕೃತ ಘೋಷಣೆ ಮಾಡಿರುವ ಪತ್ರವನ್ನೂ ಅವರು ತಮ್ಮ ಟ್ವೀಟ್ ಜೊತೆಗೆ ಲಗತ್ತಿಸಿದ್ದಾರೆ. ಈ ವಹಿವಾಟು 125 ಡಾಲರ್ಗೆ (ಸುಮಾರು 1,000 ರುಪಾಯಿ) ಆಗಿರುವುದು ತಿಳಿದುಬಂದಿದೆ. ಇದರೊಂದಿಗೆ ಅತಿಶೀಘ್ರದಲ್ಲಿ ಕೋಲಾರದ ವಿಸ್ಟ್ರಾನ್ ಘಟಕದಲ್ಲಿ ಟಾಟಾ ವತಿಯಿಂದ ಐಫೋನ್ ತಯಾರಿಕೆ ಆರಂಭವಾಗಲಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪಿಎಲ್ಐ ಸ್ಕೀಮ್ನಿಂದಾಗಿ ಸ್ಮಾರ್ಟ್ಫೋನ್ ಮ್ಯಾನುಫ್ಯಾಕ್ಚರಿಂಗ್ ಮತ್ತು ರಫ್ತಿನಲ್ಲಿ ಭಾರತ ಪ್ರಮುಖ ಅಡ್ಡೆಯಾಗಿ ಬೆಳೆದಿದೆ. ಎರಡೂವರೆ ವರ್ಷದೊಳಗೆಯೇ ಟಾಟಾ ಕಂಪನಿ ಭಾರತದಲ್ಲಿ ಐಫೋನ್ಗಳ ತಯಾರಿಕೆಯನ್ನು ಈಗ ಆರಂಭಿಸುತ್ತಿದೆ. ವಿಸ್ಟ್ರಾನ್ ಆಪರೇಷನ್ಸ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಟಾಟಾ ಟೀಮ್ಗೆ ಧನ್ಯವಾದಗಳು.
ಇದನ್ನೂ ಓದಿ: ಭಾರತಕ್ಕೆ ಓವರ್ವೈಟ್ ರೇಟಿಂಗ್ ಕೊಟ್ಟ ಜೆಪಿ ಮಾರ್ಗನ್; ಪ್ರಮುಖ ಜಾಗತಿಕ ಬ್ರೋಕರೇಜ್ ಕಂಪನಿಗಳಿಂದ ಭಾರತದ ಬಗ್ಗೆ ಭಾರೀ ನಿರೀಕ್ಷೆ
‘ಜಾಗತಿಕ ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿಗಳ ಬೆಳವಣಿಗೆಗೆ ಸರ್ಕಾರ ಪೂರ್ಣ ಬೆಂಬಲ ನೀಡುತ್ತದೆ. ಇದರಿಂದ ಭಾರತವನ್ನು ಪಾಲುದಾರನಾಗಿ ಮಾಡಿಕೊಳ್ಳಬಯಸುವ ಜಾಗತಿಕ ಎಲೆಕ್ಟ್ರಾನಿಕ್ ಬ್ರ್ಯಾಂಡ್ಗಳಿಗೆ ಅನುಕೂಲವಾಗುತ್ತದೆ’ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಆ್ಯಪಲ್ ಸಂಸ್ಥೆ ಬೇರೆ ಕಂಪನಿಗಳ ಮೂಲಕ ತನ್ನ ಐಫೋನ್ ಮೊದಲಾದ ಉತ್ಪನ್ನಗಳನ್ನು ತಯಾರಿಸುತ್ತದೆ. ಇದರಲ್ಲಿ ತೈವಾನ್ ಮೂಲದ ಫಾಕ್ಸ್ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಕಂಪನಿಗಳಿದ್ದವು. ಈಗ ಟಾಟಾ ಗ್ರೂಪ್ ಈ ಪಟ್ಟಿಗೆ ಸೇರಿದೆ.
ಟಾಟಾ ಸಂಸ್ಥೆಗೆ ಆ್ಯಪಲ್ ಉತ್ಪನ್ನಗಳ ತಯಾರಿಕೆ ಹೊಸದೇನಲ್ಲ. ಅದರ ತಮಿಳುನಾಡು ಘಟಕದಲ್ಲಿ ಐಫೋನ್ನ ಚಾಸಿಸ್ ತಯಾರಿಸಿ ಕೊಡುತ್ತಾ ಬರುತ್ತಿದೆ. ಈಗ ಇದೇ ಮೊದಲ ಬಾರಿಗೆ ಐಫೋನ್ ಅಸೆಂಬ್ಲಿಂಗ್ ಅನ್ನು ಟಾಟಾ ನಡೆಸಲಿದೆ. ಐಫೋನ್ ಅಸೆಂಬ್ಲಿಂಗ್ ಅನ್ನು ಮಾಡಲಿರುವ ಮೊದಲ ಭಾರತೀಯ ಕಂಪನಿ ಟಾಟಾ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ