
ನವದೆಹಲಿ, ಜುಲೈ 9: ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಸವಾಲುಗಳಿದ್ದಾಗ್ಯೂ, ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಟಿಸಿಎಸ್ (TCS), ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ ಅವಧಿ) ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಕಳೆದೆರಡು ವರ್ಷಗಳಿಂದ ಐಟಿ ವಲಯದಲ್ಲಿ ಕಂಡುಬಂದಿದ್ದ ಉದ್ಯೋಗ ಕಡಿತದ ಆತಂಕದ ನಡುವೆ, ಕಂಪನಿಯು ಈ ಬಾರಿ ಭರ್ಜರಿ ಚೇತರಿಕೆ ದಾಖಲಿಸಿದೆ. ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚು ಎನ್ನುವಂತೆ, ಟಿಸಿಎಸ್ ಈ ತ್ರೈಮಾಸಿಕದಲ್ಲಿ ಒಟ್ಟು 9,279 ಉದ್ಯೋಗಿಗಳನ್ನು (Net addition) ಹೊಸದಾಗಿ ಸೇರ್ಪಡೆಗೊಳಿಸಿಕೊಂಡಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಬಲ 5,93,798 ಕ್ಕೆ ತಲುಪಿದೆ.
ಕಂಪನಿಯನ್ನು ಸ್ವಇಚ್ಛೆಯಿಂದ ಬಿಟ್ಟು ಹೋಗುವ ಟಿಸಿಎಸ್ ಉದ್ಯೋಗಿಗಳ ಪ್ರಮಾಣ (Attrition Rate) ಕಳೆದ 12 ತಿಂಗಳುಗಳಲ್ಲಿ ಶೇ. 13.6 ಕ್ಕೆ ಇಳಿಕೆಯಾಗಿದೆ. ಇದು ಕಳೆದ ತ್ರೈಮಾಸಿಕದಲ್ಲಿ ಶೇ. 13.7 ರಷ್ಟಿತ್ತು. ಸವಾಲಿನ ಸಂದರ್ಭದಲ್ಲೂ ಕಂಪನಿಯು ತನ್ನ ಎಲ್ಲಾ ಹಂತದ ಜಾಗತಿಕ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳವನ್ನು (Salary Hike) ಯಶಸ್ವಿಯಾಗಿ ಜಾರಿಗೊಳಿಸಿದೆ.
ಟಾಟಾ ಕನ್ಸಲ್ಟೆನ್ಸಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಭವಿಷ್ಯದ ತಂತ್ರಜ್ಞಾನಗಳ ತರಬೇತಿ ನೀಡಲು ಆದ್ಯತೆ ನೀಡಿದ್ದು, ಸದ್ಯ 3,12,000ಕ್ಕೂ ಹೆಚ್ಚು ಉದ್ಯೋಗಿಗಳು ಕೃತಕ ಬುದ್ಧಿಮತ್ತೆ (AI) ಮತ್ತು ಮಷಿನ್ ಲರ್ನಿಂಗ್ (ML) ತಂತ್ರಜ್ಞಾನದಲ್ಲಿ ಉನ್ನತ ಪ್ರಾವೀಣ್ಯತೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ಫೀನಿಕ್ಸ್ನಂತೆ ಎದ್ದು ಸಂಜೆ ಠುಸ್ ಎಂದು ಕುಸಿದ ಷೇರುಬಜಾರು; ಇಲ್ಲಿದೆ ಇಂಟರೆಸ್ಟಿಂಗ್ ಕಾರಣ
ಉದ್ಯೋಗಿಗಳ ನೇಮಕಾತಿಯ ಜೊತೆಗೆ ಟಿಸಿಎಸ್ ಆರ್ಥಿಕವಾಗಿಯೂ ಬಲವಾದ ಸಾಧನೆ ಮಾಡಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು ಶೇ. 14 ರಷ್ಟು ಏರಿಕೆಯಾಗಿ ₹72,275 ಕೋಟಿಗೆ ತಲುಪಿದೆ. ಹಾಗೆಯೇ ಕಂಪನಿಯ ನಿವ್ವಳ ಲಾಭವು ಶೇ. 4.61 ರಷ್ಟು ಜಿಗಿತ ಕಂಡು ₹13,349 ಕೋಟಿ ದಾಖಲಿಸಿದೆ. ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹12 ರಷ್ಟು ಮಧ್ಯಂತರ ಲಾಭಾಂಶವನ್ನು (Interim Dividend) ಸಹ ಟಿಸಿಎಸ್ ಪ್ರಕಟಿಸಿದೆ.
“ಜಾಗತಿಕ ಆರ್ಥಿಕ ಮತ್ತು ರಾಜಕೀಯ ಸವಾಲುಗಳ ನಡುವೆಯೂ ನಮ್ಮ ಕಂಪನಿಯು ಉತ್ತಮ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂಬುದನ್ನು ಈ ತ್ರೈಮಾಸಿಕದ ಫಲಿತಾಂಶಗಳು ಸಾಬೀತುಪಡಿಸಿವೆ,” ಎಂದು ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಕೃತಿವಾಸನ್ ತಿಳಿಸಿದ್ದಾರೆ.
ಟಿಸಿಎಸ್ (TCS) ಕಂಪನಿಯು ಜುಲೈ 9 ರಂದು ಪ್ರಕಟಿಸಿದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ (Q1 FY27) ಸಂಪೂರ್ಣ ಆರ್ಥಿಕ ವಿವರಗಳು ಮತ್ತು ಲಾಭಾಂಶದ (Dividend) ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:
ಇದನ್ನೂ ಓದಿ: ವಿಕಿಪೀಡಿಯಾ ಸಹ-ಸ್ಥಾಪಕನಿಗೇ ನಿಷೇಧ: ‘ಅನಾಮಧೇಯ ಗುಂಪುಗಳ’ ಕೈಯಲ್ಲಿದೆ ಜಗತ್ತಿನ ಅತಿ ದೊಡ್ಡ ಜ್ಞಾನಕೋಶ
ಟಿಸಿಎಸ್ ಮಂಡಳಿಯು ತನ್ನ ಅರ್ಹ ಷೇರುದಾರರಿಗೆ ಭರ್ಜರಿ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ