TCS Confusion: ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ತೆರಿಗೆ; ಫಾರೀನ್ ಟ್ರಿಪ್ ಗಲಿಬಿಲಿ; ತಿಳಿದಿರಬೇಕಾದ ಕೆಲ ಸಂಗತಿಗಳು

|

Updated on: May 19, 2023 | 11:32 AM

International Credit Card Spend: ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾಗುವ ವೆಚ್ಚಕ್ಕೆ ಸರ್ಕಾರ ಜುಲೈ 1ರಿಂದ ಶೇ. 20ರಷ್ಟು ಟಿಸಿಎಸ್ ತೆರಿಗೆ ವಿಧಿಸುತ್ತಿದೆ. ಇದರಿಂದ ಸರ್ಕಾರಕ್ಕೆ ಏನು ಪ್ರಯೋಜನ, ಜನರು ತಿಳಿದಿರಬೇಕಾದ ಸಂಗತಿಗಳೇನು, ಈ ವಿವರ ಇಲ್ಲಿದೆ...

TCS Confusion: ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ತೆರಿಗೆ; ಫಾರೀನ್ ಟ್ರಿಪ್ ಗಲಿಬಿಲಿ; ತಿಳಿದಿರಬೇಕಾದ ಕೆಲ ಸಂಗತಿಗಳು
ಕ್ರೆಡಿಟ್ ಕಾರ್ಡ್
Follow us on

ನವದೆಹಲಿ: ವಿದೇಶಗಳಿಗೆ ಹೋಗಿ ಅಲ್ಲಿ ಭಾರತೀಯರು ಕ್ರೆಡಿಟ್ ಕಾರ್ಡ್ (International Credit Card) ಬಳಸಿ ಮಾಡುವ ವೆಚ್ಚವನ್ನು ಎಲ್​ಆರ್​ಎಸ್ ಸ್ಕೀಮ್ (LRS- Liberalized Remittance Scheme) ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರ ಬಹಳ ಮಂದಿಗೆ ಗೊಂದಲ ಮೂಡಿಸಿದೆ. ಈ ಸ್ಕೀಮ್ ಪ್ರಕಾರ ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದರೆ ಶೇ. 20ರಷ್ಟು ಟಿಸಿಎಸ್ ಕಟ್ಟಬೇಕಾಗುತ್ತದೆ. ಟಿಸಿಎಸ್ ಅಂದರೆ ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್. ಟಿಡಿಎಸ್ ರೀತಿಯಲ್ಲೇ ಟಿಸಿಎಸ್ ಕೂತ ತೆರಿಗೆಯಾಗಿದ್ದು, ಪಾವತಿ ಮಾಡುವಾಗಲೇ ಮೂಲದಲ್ಲೇ ಅದನ್ನು ಮುರಿದುಕೊಳ್ಳಲಾಗುತ್ತದೆ. ಉದಾಹರಣೆಗೆ, ನೀವು ವಿದೇಶಕ್ಕೆ ಹೋಗಿ ಅಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ 2,000 ರೂ ಬೆಲೆಯ ಒಂದು ವಸ್ತು ಖರೀದಿಸಿದರೆ, ಅದಕ್ಕೆ 20% ಟಿಸಿಎಸ್ ಕಟ್ಟಬೇಕಾಗುತ್ತದೆ. ಅಂದರೆ 2,200 ರುಪಾಯಿ ಪಾವತಿಸಿ ಈ ವಸ್ತುವನ್ನು ಖರೀದಿ ಮಾಡಬೇಕು.

ಸರ್ಕಾರ ಎಲ್​ಆರ್​ಎಸ್ ಅಡಿಯಲ್ಲಿ ವರ್ಷಕ್ಕೆ 2 ಕೋಟಿ ರೂವರೆಗೂ ಮಿತಿ ಹಾಕಿದೆ. ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್​ಗಳ ವೆಚ್ಚವನ್ನೂ ಈ ಮಿತಿಯೊಳಗೆ ಸೇರಿಸಲಾಗಿದೆ. ಈ ಮುಂಚೆ ಎಲ್​ಆರ್​ಎಸ್ ಅಡಿಯಲ್ಲಿ ವಿದೇಶಗಳಲ್ಲಿ ಮಾಡುವ ವೆಚ್ಚಕ್ಕೆ ಶೇ. 5ರಷ್ಟು ಟಿಸಿಎಸ್ ವಿಧಿಸಲಾಗುತ್ತಿತ್ತು. ಕಳೆದ ಬಜೆಟ್​ನಲ್ಲಿ ಇದನ್ನು ಶೇ. 20ಕ್ಕೆ ಹೆಚ್ಚಿಸಲಾಗಿದೆ. ಜುಲೈ 1ರಿಂದ ಹೊಸ ಟಿಸಿಎಸ್ ದರಗಳು ಚಾಲನೆಗೆ ಬರಲಿವೆ.

ಇದನ್ನೂ ಓದಿ: Credit Card Shocker: ಭಾರತದ ಹೊರಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ. 20ರಷ್ಟು ಟಿಸಿಎಸ್; ಸರ್ಕಾರದಿಂದ ಅಧಿಸೂಚನೆ; ಏನಿದು ಟಿಸಿಎಸ್?

ಸರ್ಕಾರದ ಈ ನಿರ್ಧಾರವು ಫಾರೀನ್ ಟೂರ್​ಗೆ ಹೋಗುವ ಮಂದಿಗೆ ಗೊಂದಲ ಮತ್ತು ಆತಂಕ ಮೂಡಿಸಿರುವುದು ಹೌದು. ಇಷ್ಟೊಂದು ತೆರಿಗೆ ಪಾವತಿಸಿದರೆ ತಮ್ಮ ಪ್ರವಾಸ ದುಬಾರಿಯಾಗಿ ಪರಿಣಮಿಸುತ್ತದೆ ಎಂಬುದು ಆತಂಕ. ಅಮೆರಿಕ ಮೊದಲಾದ ಕಡೆ ಓದಲು ಹೋಗುವವರೂ ಚಿಂತಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಗಳಿಗೆ ಹೋಗುವವರಿಗೆ ಒಂದಷ್ಟು ಸಲಹೆಗಳು ಇಲ್ಲಿವೆ:

  • ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಮೂಲಕ ವಿದೇಶೀ ಕರೆನ್ಸಿಗಳಲ್ಲಿ ನೀವು ಹಣ ಪಾವತಿ ಮಾಡಿದಾಗ ಮಾತ್ರ ಶೇ. 20ರಷ್ಟು ಟಿಸಿಎಸ್ ಇರುತ್ತದೆ. ಭಾರತೀಯ ರುಪಾಯಿ ಕರೆನ್ಸಿಯಲ್ಲಿ ಹಣ ಪಾವತಿಸಿದರೆ ತೆರಿಗೆ ಇರುವುದಿಲ್ಲ.
  • ಎಲ್​ಆರ್​ಎಸ್​ಗೆ ಹಾಕಲಾಗಿದ್ದ ಮಿತಿಗಿಂತ ಜನರು ಹೆಚ್ಚು ವ್ಯಯಿಸಲು ಕ್ರೆಡಿಟ್ ಕಾರ್ಡ್ ಕಾರಣವಾಗಿತ್ತು. ಹೀಗಾಗಿ, ಇದನ್ನು ಎಲ್​ಆರ್​ಎಸ್ ವ್ಯಾಪ್ತಿಗೆ ತರಲಾಗಿದೆ.
  • ವಿದೇಶಗಳಲ್ಲಿ ನಿಮ್ಮ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ಕಟ್ಟಿದರೆ ನಿಮ್ಮ ವೆಚ್ಚ ಶೇ. 20ರಷ್ಟು ಹೆಚ್ಚುತ್ತದೆ. 5 ಲಕ್ಷ ರೂ ಬಜೆಟ್​ನ ನಿಮ್ಮ ಫಾರೀನ್ ಟೂರ್ ವೆಚ್ಚ ಐದೂವರೆ ಲಕ್ಷ ಆಗುತ್ತದೆ.
  • ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ ನೀವು ಕಟ್ಟುವ ಟಿಸಿಎಸ್ ಅನ್ನು ಐಟಿ ರಿಟರ್ಸ್ ವೇಳೆ ರೀಫಂಡ್​ಗೆ ಕ್ಲೇಮ್ ಮಾಡಬಹುದು.
  • ವಿದೇಶಗಳಲ್ಲಿ ಓದಲು ಪಡೆದ ಶಿಕ್ಷಣ ಸಾಲಕ್ಕೆ ಮಾಡಲಾಗುವ ಪಾವತಿಗೆ ಶೇ. 0.5ರಷ್ಟು ಮಾತ್ರ ಟಿಸಿಎಸ್ ಇರುತ್ತದೆ.
  • ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕೆ ಹೆಚ್ಚು ಟಿಸಿಎಸ್ ಇರುವುದಿಲ್ಲ. ಈ ಬಗ್ಗೆ ಸರ್ಕಾರದಿಂದ ಸದ್ಯದಲ್ಲೇ ಸ್ಪಷ್ಟೀಕರಣ ಬರಬಹುದು.
  • ವಿದೇಶಗಳಲ್ಲಿ ಇರುವ ಭಾರತೀಯ ಕಂಪನಿಯ ಉದ್ಯೋಗಿಗಳು ಮಾಡುವ ಭಾರೀ ವೆಚ್ಚಕ್ಕೆ ಟಿಸಿಎಸ್ ಇರುವುದಿಲ್ಲ.
  • ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಎಲ್​ಆರ್​ಎಸ್ ವ್ಯಾಪ್ತಿಗೆ ತರುವುದರಿಂದ ಸರ್ಕಾರವು ಭಾರತೀಯರು ವಿದೇಶಗಳಲ್ಲಿ ಮಾಡುವ ವೆಚ್ಚವನ್ನು ಟ್ರ್ಯಾಕ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ