
ನವದೆಹಲಿ, ಜನವರಿ 15: ಟೆಸ್ಲಾ ಕಂಪನಿ (Tesla Inc) ಬೆಂಗಳೂರಿನಲ್ಲಿ ತನ್ನ ಶೋರೂಂ ತೆರೆಯುತ್ತಿದೆ. ಇದೇ ವೇಳೆ, ಟೆಸ್ಲಾದ ಮಾಡಲ್ ವೈ ಎಲೆಕ್ಟ್ರಿಕ್ ಕಾರುಗಳ ಟೆಸ್ಟ್ ಡ್ರೈವ್ ಅವಕಾಶ ಕೊಡಲಾಗಿದೆ. ಹೊಸ ಮತ್ತು ಹಳೆಯ ಕಾರುಗಳ ಮಾರಾಟ ವೇದಿಕೆಯಾದ ಆಕೋ ಡ್ರೈವ್ನಿಂದ (ACKO Drive) ಬೆಂಗಳೂರಿನಲ್ಲಿ ಟೆಸ್ಲಾ ಕಾರುಗಳ ಟೆಸ್ಟ್ ಡ್ರೈವ್ ಅಭಿಯಾನ ನಡೆದಿದೆ. ಇವತ್ತಿನಿಂದಲೇ ಇದು ಶುರುವಾಗಿದ್ದು ಜನವರಿ 31ರವರೆಗೂ ಇರುತ್ತದೆ.
ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ಶೋರೂಮ್ ತೆರೆಯುವುದಾಗಿ ಹೇಳಿದೆ. ಇನ್ನೂ ಅದು ಆರಂಭವಾಗಿಲ್ಲ. ಬೆಂಗಳೂರಿನ ಯಾವ ಸ್ಥಳದಲ್ಲಿ ಶೂರೂಮ್ ಇರುತ್ತದೆ ಎನ್ನುವ ಮಾಹಿತಿ ಇಲ್ಲ. ಆದರೆ, ಶೂರೂಮ್ ಆರಂಭಕ್ಕೆ ಮುನ್ನ ಆಕೋ ಡ್ರೈವ್ ಮೂಲಕ ಟೆಸ್ಲಾ ಕಾರುಗಳ ಪ್ರತ್ಯಕ್ಷ ಅನುಭವವನ್ನು ಸಂಭಾವ್ಯ ಗ್ರಾಹಕರಿಗೆ ಒದಗಿಸುವ ಪ್ರಯತ್ನ ನಡೆದಿದೆ.
ಟೆಸ್ಲಾ ಕಂಪನಿ ಭಾರತದಲ್ಲಿ ಮೂರು ಕಡೆ ಶೋರೂಮ್ ಹೊಂದಿದೆ. ದೆಹಲಿ, ಮುಂಬೈ ಮತ್ತು ಗುರುಗ್ರಾಮ್ನಲ್ಲಿ ಶೋರೂಮ್ ಇದೆ. ಬೆಂಗಳೂರಿನಲ್ಲಿ ಆರಂಭವಾದರೆ ಅದರ ನಾಲ್ಕನೇ ಶೋರೂಮ್ ಆಗುತ್ತದೆ. ಅತಿಹೆಚ್ಚು ಕಾರುಗಳನ್ನು ಹೊಂದಿರುವ ಭಾರತೀಯ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಹೀಗಾಗಿ, ಟೆಸ್ಲಾ ಬೆಂಗಳೂರಿನ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ
ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ಭಾರತದ ಮಾರುಕಟ್ಟೆಯನ್ನು ತಡವಾಗಿ ಪ್ರವೇಶಿಸಿದೆ. 2023 ಮತ್ತು 2024ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಮಾರಾಟವಾದ ಮಾಡಲ್ ವೈ ಕಾರನ್ನು ಭಾರತದಲ್ಲಿ 2025ರಲ್ಲ ಬಿಡುಗಡೆ ಮಾಡಿದೆ. ಆದರೆ, ಭಾರತಕ್ಕೆ ಇದನ್ನು ಆಮದು ಮಾಡಲಾಗುತ್ತಿರುವುದರಿಂದ ಶೇ. 110ರಷ್ಟು ದುಬಾರಿ ಸುಂಕಗಳ ಹೊರೆ ಇದೆ. ಹೀಗಾಗಿ, ಮಾಡಲ್ ವೈ ಕಾರು ಭಾರತದಲ್ಲಿ ದುಬಾರಿ ಬೆಲೆ ಹೊಂದಿದೆ.
ಇದೇ ವೇಳೆ, ಟೆಸ್ಲಾ ಕಾರುಗಳಿಗೆ ಭಾರತದಲ್ಲಿ ನೀರಸ ಪ್ರತಿಕ್ರಿಯೆ ಸಿಗುತ್ತಿದೆ. ಮಾಡಲ್ ವೈ ಕಾರುಗಳಿಗೆ ಭಾರತದಲ್ಲಿ ಬುಕಿಂಗ್ ಆಗಿರುವುದು 600ರ ಆಸುಪಾಸು ಮಾತ್ರವೇ. 500 ಕಾರುಗಳನ್ನು ಭಾರತಕ್ಕೆ ಸಾಗಿಸಲಾಗಿದೆ. ಆದರೆ, ಇವು ವಾಸ್ತವವಾಗಿ ಗ್ರಾಹಕರನ್ನು ಪಡೆದಿರುವುದು ಬಹಳ ಕಡಿಮೆ. 2025ರಲ್ಲಿ ಕೇವಲ 227 ಕಾರುಗಳು ಮಾತ್ರ ರಿಜಿಸ್ಟರ್ ಆಗಿವೆಯಂತೆ. ಈಗ ಮಾರಾಟವಾಗದೇ ಇನ್ವೆಂಟ್ರಿಯಲ್ಲಿ ಉಳಿದಿರುವ ಕಾರುಗಳಿಗೆ ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಡಿಸ್ಕೌಂಟ್ ಕೊಡಲಾಗುತ್ತಿದೆ. ಒಂದು ಕಾರಿಗೆ ಎರಡು ಲಕ್ಷ ರೂವರೆಗೆ ಡಿಸ್ಕೌಂಟ್ ಆಫರ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇದೆ.
ಇದನ್ನೂ ಓದಿ: 2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್ನಷ್ಟು ಹೆಚ್ಚಳ
ಲಕ್ಷುರಿ ಸೆಗ್ಮೆಂಟ್ನಲ್ಲಿ ಚೀನಾದ ಬಿವೈಡಿ, ಜರ್ಮನಿಯ ಬಿಎಂಡಬ್ಲ್ಯು ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಭಾರತೀಯರನ್ನು ಆಕರ್ಷಿಸುತ್ತಿವೆ. ಟೆಸ್ಲಾದ ಮಾಡಲ್ ವೈ ಕಾರು ಗ್ರಾಹಕರನ್ನು ಆಕರ್ಷಿಸಲು ವಿಫಲವಾದಂತಿದೆ.
ಅಂದಹಾಗೆ, ಜನರು ಟೆಸ್ಲಾದ ಮಾಡಲ್ ವೈ ಕಾರನ್ನು ಸ್ವತಃ ಡ್ರೈವ್ ಮಾಡಿ ಅದರ ಅನುಭವ ಪಡೆಯಬಹುದು. ಬೆಂಗಳೂರಿನಲ್ಲಿ ಆಸಕ್ತರು ಟೆಸ್ಲಾ ಇಂಡಿಯಾದ ವೆಬ್ಸೈಟ್ಗೆ ಹೋಗಿ ಟೆಸ್ಟ್ ಡ್ರೈವ್ಗೆ ಸಮಯ ಬುಕ್ ಮಾಡಬಹುದು. ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಒಂದು ಟೈಮ್ ಸ್ಲಾಟ್ ಪಡೆಯಬಹುದು. ಕೂಡ್ಲು ಗೇಟ್ ಬಳಿ ಟೆಸ್ಟ್ ಡ್ರೈವ್ ಸೌಲಭ್ಯ ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ