2022ರ ಮೇ 31ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 11ನೇ ಕಂತಿನ ಆರ್ಥಿಕ ನೆರವನನ್ನು ರೈತ ಫಲಾನುಭವಿಗಳಿಗಾಗಿ ಬಿಡುಗಡೆ ಮಾಡಿದರು. ಪ್ರಧಾನಿ ಮೋದಿ ಅವರು 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ಸುಮಾರು 21,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ದೇಶದಾದ್ಯಂತ ಪಿಎಂ-ಕಿಸಾನ್ನ ಪ್ರತಿಯೊಬ್ಬ ಫಲಾನುಭವಿಯು ತಮ್ಮ ಬ್ಯಾಂಕ್ ಖಾತೆಗೆ ರೂ. 2000 ಪಡೆಯಲು ಅರ್ಹರಾಗಿದ್ದಾರೆ. ರೈತರ ಆಧಾರ್ ಕಾರ್ಡ್‌ನೊಂದಿಗೆ ಜೋಡಣೆ ಮಾಡಿದ ರೈತರ ಬ್ಯಾಂಕ್ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕಂತುಗಳನ್ನು ತಲುಪಿಸಲಾಗುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿ ಪ್ರತಿ ವರ್ಷ 6000 ರೂಪಾಯಿಗಳ ವಾರ್ಷಿಕ ನಗದು ವರ್ಗಾವಣೆಯನ್ನು ರೈತರಿಗೆ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಮೊದಲ ಕಂತು ಏಪ್ರಿಲ್-ಜುಲೈ ನಡುವೆ, ಎರಡನೇ ಕಂತು ಆಗಸ್ಟ್-ನವೆಂಬರ್ ನಡುವೆ ಮತ್ತು ಮೂರನೇ ಕಂತು ಡಿಸೆಂಬರ್-ಮಾರ್ಚ್ ನಡುವೆ ಇರುತ್ತದೆ.
ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಮಾತ್ರ ಯೋಜನೆ?
ಆರಂಭದಲ್ಲಿ ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದಾಗ (ಫೆಬ್ರವರಿ, 2019) ಅದರ ಪ್ರಯೋಜನಗಳು 2 ಹೆಕ್ಟೇರ್ವರೆಗೆ ಸಂಯೋಜಿತ ಭೂ ಹಿಡುವಳಿಯೊಂದಿಗೆ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಮಾತ್ರ ಇತ್ತು. ಯೋಜನೆಯನ್ನು ಆ ನಂತರ ಜೂನ್ 2019ರಲ್ಲಿ ಪರಿಷ್ಕರಿಸಲಾಯಿತು ಮತ್ತು ಅವರ ಜಮೀನುಗಳ ಗಾತ್ರವನ್ನು ಲೆಕ್ಕಿಸದೆ ಎಲ್ಲ ರೈತ ಕುಟುಂಬಗಳಿಗೆ ವಿಸ್ತರಿಸಲಾಯಿತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷಕ್ಕೆ 6,000 ರೂಪಾಯಿಗಳ ಲಾಭವನ್ನು ದೇಶದ ಎಲ್ಲ 14.5 ಕೋಟಿ ರೈತರಿಗೆ ವಿಸ್ತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಅವರ ಭೂ ಹಿಡುವಳಿಯ ಗಾತ್ರವನ್ನು ಲೆಕ್ಕಿಸದೆ ಅಧಿಸೂಚನೆ ಹೊರಡಿಸಿದೆ.
ಪಿಎಂ-ಕಿಸಾನ್ ಯೋಜನೆಯಿಂದ ಯಾವ ರೈತ ಕುಟುಂಬಗಳನ್ನು ಹೊರಗಿಡಲಾಗಿದೆ?
ಸಾಂಸ್ಥಿಕ ಭೂಮಿ ಹೊಂದಿರುವವರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ನೌಕರರನ್ನು ಪಿಎಂ-ಕಿಸಾನ್ನಿಂದ ಹೊರಗಿಡಲಾಗಿದೆ. ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು ಹಾಗೂ 10,000 ರೂಪಾಯಿಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು ಹಾಗೂ ಕಳೆದ ಅಸೆಸ್ಮೆಂಟ್ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು ಸಹ ಈ ಬೆನಿಫಿಟ್ ಪಡೆಯುವುದಕ್ಕೆ ಅರ್ಹರಲ್ಲ.
Published On - 3:55 pm, Mon, 11 July 22