ನೀವು ಇಪಿಎಸ್ ಪಿಂಚಣಿದಾರರೇ? ಇನ್ನು ಯಾವಾಗ ಬೇಕಾದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು

| Updated By: Ganapathi Sharma

Updated on: Nov 17, 2022 | 2:32 PM

Life Certificate; ‘ಇಪಿಎಸ್​ 95’ರ ಅಡಿಯಲ್ಲಿ ಪಿಂಚಣಿ ಪಡೆಯುವವರು ಯಾವಾಗ ಬೇಕಿದ್ದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು. ಇದು ಒಂದು ವರ್ಷಕ್ಕೆ ಮಾನ್ಯತೆ ಹೊಂದಿರಲಿದೆ’ ಇಪಿಎಫ್ಒ ತಿಳಿಸಿದೆ.

ನೀವು ಇಪಿಎಸ್ ಪಿಂಚಣಿದಾರರೇ? ಇನ್ನು ಯಾವಾಗ ಬೇಕಾದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಪಿಂಚಣಿ ಪಡೆಯುತ್ತಿರುವವರು ಜೀವನ ಪ್ರಮಾಣಪತ್ರ (life certificate) ಸಲ್ಲಿಸಲು ಇರುವ ಗಡುವಿನಿಂದ ಕೆಲವರಿಗೆ ವಿನಾಯಿತಿ ದೊರೆತಿದೆ. ಉದಾಹರಣೆಗೆ; ನವೆಂಬರ್ 30ಕ್ಕೆ ಜೀವನ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನ ಎಂದಿಟ್ಟುಕೊಳ್ಳಿ. ಈ ಗಡುವು ಎಪಿಎಫ್​ಒದ (EPFO) ಅಧೀನದಲ್ಲಿ ಬರುವ ‘ಉದ್ಯೋಗಿಗಳ ಪಿಂಚಣಿ ಯೋಜನೆ (EPS) 1995’ರ ಅಡಿಯಲ್ಲಿ ಬರುವವರಿಗೆ ಅನ್ವಯವಾಗುವುದಿಲ್ಲ. ಇಪಿಎಫ್​ಒದ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೀಡಿದ ಮಾಹಿತಿ ಪ್ರಕಾರ, ಪಿಂಚಣಿದಾರು ಯಾವಾಗ ಬೇಕಿದ್ದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಇದು ಸಲ್ಲಿಸಿದ ನಂತರ ಒಂದು ವರ್ಷದ ಅವಧಿಗೆ ಮಾನ್ಯವಾಗಿರಲಿದೆ.

‘ಇಪಿಎಸ್​ 95’ರ ಅಡಿಯಲ್ಲಿ ಪಿಂಚಣಿ ಪಡೆಯುವವರು ಯಾವಾಗ ಬೇಕಿದ್ದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು. ಇದು ಒಂದು ವರ್ಷಕ್ಕೆ ಮಾನ್ಯತೆ ಹೊಂದಿರಲಿದೆ’ ಇಪಿಎಫ್ಒ​ ಟ್ವೀಟ್ ಮಾಡಿದೆ. ಹೀಗಾಗಿ ಕಳೆದ ವರ್ಷ ಡಿಸೆಂಬರ್ 31ಕ್ಕೆ ಜೀವನ ಪ್ರಮಾಣಪತ್ರ ಸಲ್ಲಿಸಿದ್ದಲ್ಲಿ ಈ ವರ್ಷ ಡಿಸೆಂಬರ್ 31ರ ಮೊದಲು ಸಲ್ಲಿಸಿದರೆ ಸಾಕಾಗಲಿದೆ. ಒಂದು ವೇಳೆ ನೀವು ಡಿಸೆಂಬರ್ 31ರ ಗಡುವಿನ ಒಳಗೆ ಸಲ್ಲಿಸದಿದ್ದರೆ ಮಾತ್ರ 2023ರ ಜನವರಿ 1ರಿಂದ ಪಿಂಚಣಿ ಬರುವುದು ಸ್ಥಗಿತಗೊಳ್ಳಲಿದೆ.

ಈವರೆಗೆ ಹೇಗಿತ್ತು ವ್ಯವಸ್ಥೆ?

ಈವರೆಗೆ ಪಿಂಚಣಿದಾರರು ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಇದರಿಂದ ಪಿಂಚಣಿದಾರರಿಗೆ ಬಹಳ ಸಮಸ್ಯೆಯಾಗುತ್ತಿತ್ತು. ಡಿಜಿಟಲ್ ಜೀವನ ಪ್ರಮಾಣಪತ್ರ ಜನರೇಟ್ ಮಾಡಲು ಜನ ಸರದಿಯಲ್ಲಿ ನಿಂತು ಕಾಯಬೇಕಾಗುತ್ತಿತ್ತು.

ಎಲ್ಲೆಲ್ಲಿ ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸಬಹುದು?

  • ಪಿಂಚಣಿ ವಿತರಣಾ ಬ್ಯಾಂಕ್
  • ಸಾಮಾನ್ಯ ಸೇವಾ ಕೇಂದ್ರ (CSC)
  • ಐಪಿಪಿಬಿ / ಭಾರತೀಯ ಅಂಚೆ ಕಚೇರಿ / ಪೋಸ್ಟ್​ಮ್ಯಾನ್
  • ಉಮಂಗ್ ಆ್ಯಪ್
  • ಸಮೀಪದ ಇಪಿಎಫ್​ಒ ಕಚೇರಿ

ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಏನೇನು ದಾಖಲೆಗಳು ಬೇಕು?

  • ಪಿಪಿಒ ಸಂಖ್ಯೆ
  • ಆಧಾರ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರ
  • ಆಧಾರ್ ಜತೆ ಲಿಂಕ್ ಆಗಿರುವ ಮೊಬೈಲ್ ದೂರವಾಣಿ ಸಂಖ್ಯೆ

‘ಇಪಿಎಸ್ 1995’ ಎಂಬುದು ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದಕ್ಕೆ ಮಾಸಿಕ 15,000 ರೂ.ವರೆಗೆ ಉದ್ಯೋಗಿಯ ವೇತನಕ್ಕೆ ಅನುಗುಣವಾಗಿ ಉದ್ಯೋಗದಾತರು ಶೇಕಡಾ 8.33 ಹಾಗೂ ಕೇಂದ್ರ ಸರ್ಕಾರದಿಂದ ವೇತನದ ಶೇಕಡಾ 1.16ರಷ್ಟು ಕೊಡುಗೆ ನೀಡುತ್ತಾರೆ. ಹೀಗೆ ಸಂಗ್ರಹಿಸಿದ ಮೊತ್ತದಿಂದಲೇ ಯೋಜನೆಯಡಿ ಎಲ್ಲ ರೀತಿಯ ಪ್ರಯೋಜನಗಳನ್ನು ನೀಡಲಾಗುತ್ತದೆ. ಎಪಿಎಸ್​, 1995ರ ನಿಯಮದ 32ನೇ ಪ್ಯಾರದಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಯೋಜನೆ ಕಡ್ಡಾಯವಾಗಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ