ಪರ್ತ್, ಸೆ. 1: ಆಸ್ಟ್ರೇಲಿಯಾದಲ್ಲಿ ಉದ್ಯೋಗಿಗಳಿಗೆ ಬಹಳ ಸ್ವೇಚ್ಛೆ ವಾತಾವರಣ ಇದೆ. ಈಗಲೂ ಹೆಚ್ಚಿನ ಕಂಪನಿಗಳು ವಾರದಲ್ಲಿ ಕೆಲ ದಿನ ವರ್ಕ್ ಫ್ರಂ ಹೋಮ್ ಮಾಡುವ ಅವಕಾಶವನ್ನು ತಮ್ಮ ಉದ್ಯೋಗಿಗಳಿಗೆ ನೀಡುತ್ತವೆ. ಈ ಮಧ್ಯೆ ಇಲ್ಲಿಯ ಗಣಿಗಾರಿಕೆ ಕಂಪನಿಯೊಂದು ವರ್ಕ್ ಫ್ರಂ ಹೋಮ್ ಸೌಲಭ್ಯವನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಅಷ್ಟೇ ಅಲ್ಲ, ಉದ್ಯೋಗಿಗಳು ಕಾಫಿ ಕುಡಿಯಲೂ ಹೊರಗೆ ಹೋಗದಂತೆ ಕಟ್ಟಿ ಹಾಕುತ್ತಿದೆ. ಈ ಕಂಪನಿ ಹೆಸರು ಮಿನರಲ್ ರಿಸೋರ್ಸಸ್. ಇದೊಂದು ಮೈನಿಂಗ್ ಕಂಪನಿ. ಇದರ ಸಿಇಒ ಕ್ರಿಸ್ ಎಲಿಸನ್ ಪಕ್ಕಾ ಟ್ಯಾಸ್ಕ್ಮಾಸ್ಟರ್. ಉದ್ಯೋಗಿಗಳು ಕೆಲಸಕ್ಕೆ ನಿಂತರೆ ಇಡೀ ದಿನ ಕೆಲಸ ಮಾಡಬೇಕು. ಯಾವುದಕ್ಕೂ ಟೈಮ್ ವೇಸ್ಟ್ ಮಾಡಬಾರದು ಎಂಬ ಧೋರಣೆಯುಳ್ಳ ಪಕ್ಕಾ ಸಂಪ್ರದಾಯಿ ಅವರು.
‘ಅವರನ್ನು (ಉದ್ಯೋಗಿಗಳು) ಇಡೀ ದಿನ ಕೂಡಿಡ ಬಯಸುತ್ತೇನೆ. ಅವರು ಕಟ್ಟಡ ಬಿಟ್ಟು ಹೋಗಬಾರದು. ಕಾಫಿಗೂ ಹೊರಗೆ ಹೋಗಬಾರದು. ಹೀಗೆ ಹೊರಗೆ ಹೋಗುವುದರಿಂದ ಏನು ನಷ್ಟ ಆಗುತ್ತೆ ಎಂಬುದನ್ನು ಕೆಲ ವರ್ಷಗಳ ಹಿಂದೆ ಕಂಡುಕೊಂಡಿದ್ದೇವೆ,’ ಎಂದು ಕ್ರಿಸ್ ಎಲಿಸನ್ ಹೇಳುತ್ತಾರೆ.
ಇದನ್ನೂ ಓದಿ: 3 ಕೋಟಿ ರೂ ಇದೆ, ಎಲ್ಲಿ ಹೂಡಿಕೆ ಮಾಡಬೇಕು? ರ‍್ಯಾಪರ್ ಬಾದ್ಶಾಗೆ ನಿಖಿಲ್ ಕಾಮತ್ ನೀಡಿದ ಸಲಹೆ ಇದು…
ಮೈನಿಂಗ್ನಲ್ಲಿ ಕಾರ್ಮಿಕರು ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಫೀಲ್ಡ್ಗೆ ಬರಲೇಬೇಕು. ಎಲಿಸನ್ ಹೇಳುತ್ತಿರುವುದು ಈ ಕಂಪನಿ ಮುಖ್ಯಕಚೇರಿಯ ಕುರಿತಾದ್ದು. ಪರ್ತ್ ನಗರದಲ್ಲಿ ಹೆಡ್ಕ್ವಾರ್ಟರ್ಸ್ ಇದೆ. ಇಲ್ಲಿ ಕೆಫೆ ಇದೆ, ರೆಸ್ಟೋರೆಂಟ್, ಜಿಮ್, ವೆಲ್ನೆಸ್ ಸೆಂಟರ್, ರಿಫ್ಲೆಕ್ಷನ್ ರೂಮ್ ಹೀಗೆ ನಾನಾ ಸೌಲಭ್ಯಗಳಿವೆ. ಕುತೂಹಲ ಎಂದರೆ ಇವೆಲ್ಲವೂ ಕೂಡ ಉದ್ಯೋಗಿಗಳು ಆರಾಮವಾಗಿ ಇರಲೆಂದು ಇಲ್ಲ, ಬದಲಾಗಿ ಅವರು ನಿಷ್ಠೆಯಿಂದ ಕೆಲಸ ಮಾಡಬೇಕೆಂದು. ಯಾರೂ ಕೂಡ ಬೇರೆ ಬೇರೆ ನೆವಗಳನ್ನು ಹೇಳಿ ವರ್ಕ್ ಫ್ರಂ ಹೋಮ್ ಕೇಳಲೋ, ಅಥವಾ ಕಟ್ಟಡದಿಂದ ಹೊರಗೆ ಹೋಗಲೋ ಪ್ರಯತ್ನಿಸಬಾರದು ಎಂಬುದು ಉದ್ದೇಶ.
ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಮನೆಯಿಂದ ಕೆಲಸ ಮಾಡಬೇಕಿಲ್ಲ. ಹೆಡ್ಕ್ವಾರ್ಟರ್ಸ್ನಲ್ಲೇ ಒಂದು ಡೇಕೇರ್ ಸೆಂಟರ್ ತೆರೆಯಲಾಗಿದ್ದು, ಅಲ್ಲಿ ಕಡಿಮೆ ಶುಲ್ಕಕ್ಕೆ ಮಕ್ಕಳನ್ನು ಪಾಲನೆ ಮಾಡಲಾಗುತ್ತದೆ. ಅಂದರೆ ಉದ್ಯೋಗಿಗಳು ಕೆಲಸಕ್ಕೆ ಹೋಗುವಾಗ ತಮ್ಮ ಮಕ್ಕಳನ್ನೂ ಕರೆದುಕೊಂಡು ಹೋಗಿ ಈ ಡೇಕೇರ್ ಸೆಂಟರ್ಗೆ ಬಿಟ್ಟು, ವಾಪಸ್ ಮನೆಗೆ ಹೋಗುವಾಗ ಇವರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬಹುದು.
ಇದನ್ನೂ ಓದಿ: ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ
ಈ ವರ್ಕ್ ಫ್ರಂ ಹೋಮ್ ಸಂಪ್ರದಾಯವನ್ನು ಕ್ರಿಸ್ ಎಲಿಸನ್ ಕಟುವಾಗಿ ವಿರೋಧಿಸುತ್ತಾರೆ. ಎಲ್ಲಾ ಕಂಪನಿಗಳು ಈ ಸಂಪ್ರದಾಯಕ್ಕೆ ಎಷ್ಟು ಬೇಗ ತಿಲಾಂಜಲಿ ಹೇಳುತ್ತಾರೋ ಅಷ್ಟು ಒಳ್ಳೆಯದು ಎನ್ನುತ್ತಾರೆ ಅವರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ