3 ಕೋಟಿ ರೂ ಇದೆ, ಎಲ್ಲಿ ಹೂಡಿಕೆ ಮಾಡಬೇಕು? ರ‍್ಯಾಪರ್ ಬಾದ್ಶಾಗೆ ನಿಖಿಲ್ ಕಾಮತ್ ನೀಡಿದ ಸಲಹೆ ಇದು…
Nikhil Kamath podcast with rapper Badshah, actress Kriti Sanon: ನಿಖಿಲ್ ಕಾಮತ್ ಅವರ ಇತ್ತೀಚಿನ ಪಾಡ್ಕ್ಯಾಸ್ಟ್ನಲ್ಲಿ ಗಾಯಕ ಬಾದ್ಶಾ ಮತ್ತು ನಟಿ ಕೃತಿ ಸನೋನ್ ಭಾಗವಹಿಸಿದ್ದರು. ಈ ವೇಳೆ ಹೂಡಿಕೆದಾರರು, ಉದ್ಯಮಿಗಳಿಗೆ ಝೀರೋಧ ಸಂಸ್ಥಾಪಕರು ಒಂದಷ್ಟು ಕಿವಿಮಾತು ಹೇಳಿದ್ದಾರೆ. ಹೂಡಿಕೆದಾರರು ಯಾವ ಕ್ಷೇತ್ರದಲ್ಲಿ ಗಮನ ಹರಿಸಬೇಕು, ಆಂಟ್ರಪ್ರನ್ಯೂರ್ಗಳು ಯಾವ ಅಂಶ ಗಮನಿಸಬೇಕು ಎಂಬುದನ್ನು ತಿಳಿಸಿದ್ದಾರೆ.
ನವದೆಹಲಿ, ಸೆ. 1: ಷೇರು ಮಾರುಕಟ್ಟೆಯ ಬ್ರೋಕರ್ ಸಂಸ್ಥೆಯಾದ ಝೀರೋಧದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ನಿಯಮಿತವಾಗಿ ಪಾಡ್ಕ್ಯಾಸ್ಟ್ಗಳಲ್ಲಿ ಮಾತನಾಡುತ್ತಿರುತ್ತಾರೆ. ವಿಶೇಷ ಅತಿಥಿಗಳನ್ನು ಕರೆಸಿ ಅವರೊಂದಿಗೆ ಹೂಡಿಕೆ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅಂತೆಯೇ ಅವರ ಡಬ್ಲ್ಯುಟಿಎಫ್ ಎನ್ನುವ ಪೋಡ್ಕ್ಯಾಸ್ಟ್ ಬಹಳ ಜನಪ್ರಿಯವಾಗಿದೆ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ. ಕಳೆದ ಬಾರಿಯ ಪಾಡ್ಕ್ಯಾಸ್ಟ್ನಲ್ಲಿ ಅವರು ಬಾಲಿವುಡ್ನ ರ‍್ಯಾಪ್ ಗಾಯಕ ಬಾದ್ಶಾ ಮತ್ತು ನಟಿ ಕೃತಿ ಸನೋನ್ ಅವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಹೂಡಿಕೆ ವಿಚಾರವಾಗಿ ರ‍್ಯಾಪರ್ ಬಾದ್ಶಾ ಕೇಳಿದ ಒಂದು ನೇರ ಹಾಗು ಸರಳ ಪ್ರಶ್ನೆಗೆ ನಿಖಿಲ್ ಕಾಮತ್ ಅಷ್ಟೇ ನೇರವಾಗಿ ಉತ್ತರ ಕೊಟ್ಟಿದ್ದಾರೆ.
3 ಕೋಟಿ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು?
ರ‍್ಯಾಪರ್ ಬಾದ್ಶಾ ಆ ಎಪಿಸೋಡ್ನಲ್ಲಿ ಬಹಳ ಸರಳ ಪ್ರಶ್ನೆ ಕೇಳಿದರು. ‘ಒಬ್ಬರ ಬಳಿ 3 ಕೋಟಿ ರೂ ಇದ್ದರೆ, ನಿಶ್ಚಿತ ಲಾಭಕ್ಕಾಗಿ ಅವರು ಆ ಹಣ ಎಲ್ಲಿ ಹೂಡಿಕೆ ಮಾಡಬಹುದು?’ ಎಂದು ಕೇಳಿದ್ದಾರೆ. ಇದಕ್ಕೆ ನಿಖಿಲ್ ಕಾಮತ್ ಅವರು ಮರುಬಳಕೆ ಇಂಧನ ಕ್ಷೇತ್ರ ಮುಂದಿನ ದಿನಗಳಲ್ಲಿ ಎಷ್ಟು ಪ್ರಾಮುಖ್ಯ ಪಡೆಯಲಿದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಮೂವತ್ತು ವರ್ಷ ಮುಗಿಸಿದ ಮ್ಯೂಚುವಲ್ ಫಂಡ್ಗಳ ಸಾಧನೆ ಹೇಗೆ? ತಿಂಗಳಿಗೆ ಕೇವಲ 1,000 ಹೂಡಿಕೆ ಈಗ ಆಗಿದೆ 2 ಕೋಟಿ ರೂ
ನಿಖಿಲ್ ಕಾಮತ್ ಪ್ರಕಾರ ಸೌರಶಕ್ತಿ ಕಂಪನಿಗಳು, ಎಲೆಕ್ಟ್ರಿಕ್ ಕಾರ್ ಕಂಪನಿಗಳು, ಬ್ಯಾಟರಿ ತಯಾರಕರು ಇಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಮಾಡಬಹುದು. ಸರ್ಕಾರದಿಂದ ಈ ಕ್ಷೇತ್ರಕ್ಕೆ ಉತ್ತೇಜನ ಕೂಡ ನೀಡುತ್ತದೆ. ಹೀಗಾಗಿ, ಇಲ್ಲಿ ಹೂಡಿಕೆ ಮಾಡಬಹುದು ಎಂದು ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ತುಂಬಿಹೋಗಿರುವ ಮಾರುಕಟ್ಟೆ ಬಿಟ್ಟು ಭವಿಷ್ಯದ ಕ್ಷೇತ್ರಗಳತ್ತ ಕಣ್ಣಿಡಬೇಕು
ಈ ಪಾಡ್ಕ್ಯಾಸ್ಟ್ನಲ್ಲಿ ನಿಖಿಲ್ ಕಾಮತ್ ಅವರು ಆಂಟ್ರಪ್ರನ್ಯೂರ್ ಅಥವಾ ಉದ್ದಿಮೆದಾರರಿಗೆ ಸಲಹೆ ಕೊಟ್ಟಿದ್ದಾರೆ. ಅವರ ಪ್ರಕಾರ ಉದ್ಯಮಿಗಳು ಸ್ಯಾಚುರೇಟೆಡ್ ಮಾರ್ಕೆಟ್ ಅಥವಾ ತುಂಬಿಹೋಗಿರುವ ಮಾರುಕಟ್ಟೆ ಬದಲು ಮುಂದಿನ ದಶಕದಲ್ಲಿ ಉತ್ತಮ ಬೆಳವಣಿಗೆ ಅವಕಾಶ ಇರುವಂತಹ ಕ್ಷೇತ್ರಗಳತ್ತ ಗಮನ ಹರಿಸಬೇಕು.
ಸ್ಯಾಚುರೇಟೆಡ್ ಮಾರ್ಕೆಟ್ ವಿಚಾರಕ್ಕೆ ಅವರು ಬಾಲಿವುಡ್ ಉದಾರಣೆ ನೀಡಿದ್ದಾರೆ. ಸೆಲಬ್ರಿಟಿಗಳ ಒಡನಾಟಕ್ಕಾಗಿ ಹೂಡಿಕೆದಾರರು ಚಿತ್ರೋದ್ಯಮಕ್ಕೆ ಅಡಿ ಇಡುತ್ತಾರೆ. ಆದರೆ, ಅವರ ಹೂಡಿಕೆ ನಿಷ್ಫಲವಾಗುತ್ತದೆ. ಬಾಲಿವುಡ್ಗೆ ಹರಿದುಬರುವ ಹಣ ಹಾಗೆಯೇ ಮುರುಟಿ ಹೋಗುತ್ತದೆ ಎನ್ನುತ್ತಾರೆ ಝೀರೋಧ ಸಹ-ಸಂಸ್ಥಾಪಕರು.
ಇದನ್ನೂ ಓದಿ: ಐದು ವರ್ಷಕ್ಕೆ ಮಾತ್ರ ಹೂಡಿಕೆ ಮಾಡಬೇಕಾ? ಇಲ್ಲಿವೆ ಕೆಲ ಉತ್ತಮ ಆಯ್ಕೆಗಳು
ಕುತೂಹಲ ಹುಟ್ಟಿಸಿತೆಂದು ಬಿಸಿನೆಸ್ ಬೇಡ
ಯಾವುದೇ ಒಂದು ಬಿಸಿನೆಸ್ ಬಗ್ಗೆ ನಿಮಗೆ ಆಸಕ್ತಿ ಹುಟ್ಟಿತೆಂಬ ಕಾರಣಕ್ಕೆ ಬಿಸಿನೆಸ್ ಮಾಡಲು ಹೋಗಬಾರದು. ಪ್ಯಾಶನ್ ಮುಖ್ಯವೇನೋ ಹೌದು. ಆದರೆ, ಆ ಕ್ಷೇತ್ರದಲ್ಲಿ ಸ್ಪರ್ಧೆ ಹೇಗಿದೆ, ಯಶಸ್ಸಿನ ಸಾಧ್ಯತೆ ಎಷ್ಟು ಎಂಬ ಅಂಶಗಳನ್ನು ಅವಲೋಕಿಸುವುದು ಬಹಳ ಮುಖ್ಯ ಎಂದು ನಿಖಿಲ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ