ಬ್ರಿಟಿಷ್ ಕಂಪೆನಿಯೊಂದರ ನಡೆ ಈಚೆಗೆ ಭಾರೀ ಸುದ್ದಿಯಾಗಿದೆ. ಇಂಧನ ಹಾಗೂ ವಿದ್ಯುತ್ನಂಥ ಅಗತ್ಯ ವಸ್ತುಗಳ ಬೆಲೆ ಏರಿಕೆ (Price Hike) ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಉದ್ಯೋಗಿಗೆ 750 ಪೌಂಡ್ (ಭಾರತದ ರೂಪಾಯಿ ಲೆಕ್ಕದಲ್ಲಿ 74,091) ನೀಡಿದೆ. ಎಮೆರೀಸ್ ಟಿಂಬರ್ ಅಂಡ್ ಬಿಲ್ಡರ್ಸ್ ಮರ್ಚೆಂಟ್ಸ್ನಲ್ಲಿನ 60ರಷ್ಟು ಉದ್ಯೋಗಿಗಳಿಗೆ ಈ ಮೊತ್ತವನ್ನು ಪಾವತಿಸಲಾಗಿದೆ. ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ತಮ್ಮ ಜೇಬಿನಿಂದ ಈ ಮೊತ್ತವನ್ನು ನೀಡಿದ್ದಾರೆ. ಇದರಿಂದಾಗಿ ಅವರಿಗೆ 45,000 ಪೌಂಡ್ಸ್ (44.46 ಲಕ್ಷ ರೂಪಾಯಿ) ವೆಚ್ಚ ಆಗುತ್ತದೆ ಎಂದು LADbible ವರದಿ ಮಾಡಿದೆ. “ಹೆಚ್ಚುತ್ತಿರುವ ಇಂಧನ/ಪೆಟ್ರೋಲ್ ಮತ್ತು ವಿದದ್ಯುತ್/ಅನಿಲ ಬೆಲೆಯಿಂದಾಗಿ ನಾವು ಎಲ್ಲ ಎಮೆರೀಸ್ನ ಎಲ್ಲ ಸಿಬ್ಬಂದಿಗೆ 750 ಪೌಂಡ್ ನೀಡಲು ನಿರ್ಧರಿಸಿದ್ದೇವೆ. ನಿಶ್ಚಿತವಲ್ಲದ ಹಣಕಾಸು ಸಮಯದಲ್ಲಿ ಇದರಿಂದ ನಮ್ಮ ತಂಡಕ್ಕೆ ದೀರ್ಘಾವಧಿಯಲ್ಲಿ ಸಹಾಯ ಆಗುತ್ತದೆ. ಕುಟುಂಬದ ರೀತಿಯಲ್ಲೇ ಎಮೆರೀಸ್ನಿಂದ ಒಬ್ಬರು ಮತ್ತೊಬ್ಬರ ಬಗ್ಗೆ ಇಂಥ ಕಷ್ಟದ ಸಮಯದಲ್ಲಿ ಕಾಳಜಿ ವಹಿಸುತ್ತದೆ!” ಎಂದು ಕಂಪೆನಿ ಟ್ವೀಟ್ ಮಾಡಿದೆ.
“ಎಲ್ಲರೂ ಕಷ್ಟ ಪಡುತ್ತಿರುವಾಗ ನಾವು ಸಿಬ್ಬಂದಿಯೊಂದಿಗೆ ಆ ಸಂಪತ್ತನ್ನು ಹಂಚಿಕೊಳ್ಳಲು ಬಯಸುತ್ತೇವೆ. ಅವರು ಅದನ್ನು ನಿರೀಕ್ಷಿಸಿರಲಿಲ್ಲ ಮತ್ತು ಅವರು ತುಂಬಾ ಸಂತೋಷಪಟ್ಟರು,” ಎಂದು 51 ವರ್ಷದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೂರು ಮಕ್ಕಳ ತಂದೆ ಜೇಮ್ಸ್ ಹಿಪ್ಕಿನ್ಸ್ ಹೇಳಿದ್ದಾರೆ ಎಂದು ದ ಸನ್ ವರದಿ ಮಾಡಿದೆ. 2022ರ ಅಂತ್ಯದ ವೇಳೆಗೆ ಯುನೈಟೆಡ್ ಕಿಂಗ್ಡಮ್ನ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಸರ್ಕಾರವು ಮುನ್ಸೂಚನೆ ನೀಡಿದ್ದರಿಂದ ಏರುತ್ತಿರುವ ವೆಚ್ಚಗಳೊಂದಿಗೆ ಹೋರಾಡುತ್ತಿರುವ ಬ್ರಿಟನ್ನರಿಗೆ ಸಹಾಯ ಮಾಡಲು ತಮ್ಮ ಸರ್ಕಾರವು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಕಳೆದ ತಿಂಗಳು ಪ್ರಧಾನಿ ಬೋರಿಸ್ ಜಾನ್ಸನ್ ಒಪ್ಪಿಕೊಂಡಿದ್ದರು.
ನೆರೆಯ ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ಮತ್ತು ಕೊರೊನಾ ಲಾಕ್ಡೌನ್ಗಳಿಂದ ದೇಶಗಳು ತಮ್ಮ ಆರ್ಥಿಕತೆಯನ್ನು ಪುನಃ ಮುಕ್ತಗೊಳಿಸಿದ ನಂತರ ಸರಕುಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ವಿಶ್ವದಾದ್ಯಂತ ಹೆಚ್ಚುತ್ತಿರುವ ಹಣದುಬ್ಬರವನ್ನು ಎದುರಿಸಲಾಗುತ್ತಿದೆ. ಭಾರತದಲ್ಲಿ ಕಳೆದ 16 ದಿನಗಳಿಂದ 14ನೇ ಸುತ್ತಿನ ಹೆಚ್ಚಳದಲ್ಲಿ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್ಗೆ 80 ಪೈಸೆಗಳಷ್ಟು ಏರಿಕೆಯಾಗಿದೆ. ಇತ್ತೀಚಿನ ಏರಿಕೆಯು ಇಂಧನದ ವೆಚ್ಚದಲ್ಲಿ ಒಟ್ಟು ಹೆಚ್ಚಳವನ್ನು 10 ರೂಪಾಯಿ ಮಾಡಿದೆ.
ಇದನ್ನೂ ಓದಿ: ಬೆಲೆ ಏರಿಕೆ ನಮಗೆ ನುಂಗಲಾರದ ತುತ್ತಾಗಿದೆ, ತಿಂಡಿ ಬೆಲೆ ಶೇ. 10 ಜಾಸ್ತಿ ಮಾಡ್ತಿದ್ದೇವೆ -ಸಹಿಸಿಕೊಳೀ ಎಂದ ಹೋಟೆಲು ಮಾಲೀಕರು