ಒಳ್ಳೆಯ ಲಾಭದಲ್ಲಿದ್ದರೂ ಲೇ ಆಫ್ ಮಾಡ್ತಾರೆ… ಇದು ಅಪ್ಪಟ ದುರಾಸೆ… ಫ್ರೆಷ್ವರ್ಕ್ಸ್ಗೆ ತಿವಿದ ಜೋಹೋ ಸಿಇಒ ಶ್ರೀಧರ್ ವೆಂಬು
Zoho CEO unhappy with Freshworks layoffs: ಫ್ರೆಷ್ವರ್ಕ್ಸ್ ಸಂಸ್ಥೆ 660 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರ ಮಾಡಿದೆ. ಅಮೆರಿಕ ಮೂಲದ ಈ ಕಂಪನಿಯ ಈ ಕ್ರಮವನ್ನು ಜೋಹೋ ಸಿಇಒ ಶ್ರೀಧರ್ ವೆಂಬು ಕಟುವಾಗಿ ಟೀಕಿಸಿದ್ದಾರೆ. ಕಂಪನಿ ಲಾಭದಲ್ಲಿದ್ದರೂ ಉದ್ಯೋಗಿಗಳನ್ನು ಲೇ ಆಫ್ ಮಾಡುವುದು ದುರಾಸೆಯಲ್ಲದೆ ಮತ್ತೇನಿಲ್ಲ ಎಂದು ಬಣ್ಣಿಸಿದ್ದಾರೆ.
ಚೆನ್ನೈ, ನವೆಂಬರ್ 10: ಅಮೆರಿಕ ಮೂಲದ ಫ್ರೆಶ್ವರ್ಕ್ಸ್ ಸಂಸ್ಥೆ ಶೇ. 12ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುವ ನಿರ್ಧಾರಕ್ಕೆ ಭಾರತದ ಸಿಇಒವೊಬ್ಬರು ಖಾರದ ಪ್ರತಿಕ್ರಿಯೆ ನೀಡಿದ್ದಾರೆ. ಫ್ರೆಶ್ವರ್ಕ್ಸ್ನ ಹೆಸರು ಎತ್ತದೆಯೇ ಕಂಪನಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಇದು ಅಪ್ಪಟ ದುರಾಸೆಯ ಧೋರಣೆ ಎಂದು ಟೀಕಿಸಿದ್ದಾರೆ. ತನ್ನ ವಾರ್ಷಿಕ ಆದಾಯದ ಒಂದೂವರೆ ಪಟ್ಟು ಕ್ಯಾಷ್ ಅನ್ನು ಹೊಂದಿದ ಮತ್ತು ಇಪ್ಪತ್ತು ಪ್ರತಿಶತ ದರದಲ್ಲಿ ಬೆಳೆಯುತ್ತಿರುವ ಕಂಪನಿಯೊಂದು ಶೇ. 12-13ರಷ್ಟು ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತದೆ ಎಂದರೆ ಆ ಉದ್ಯೋಗಿಗಳು ಯಾವತ್ತಾದರೂ ನಿಷ್ಠೆಯಿಂದ ಕೆಲಸ ಮಾಡಲು ಆಗುತ್ತದಾ ಎಂದು ಝೋಹೋ ಕಾರ್ಪೊರೇಶನ್ನ ಸಿಇಒ ಶ್ರೀಧರ್ ವೆಂಬು ಹೇಳಿದ್ದಾರೆ.
ತಮ್ಮ ಎಕ್ಸ್ ಅಕೌಂಟ್ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ ಅವರು, ಲಾಭದಲ್ಲಿ ನಡೆಯುತ್ತಿರುವ ಕಂಪನಿಯೊಂದು ಉದ್ಯೋಗಿಗಳನ್ನು ಲೇ ಆಫ್ ಮಾಡುವ ಕ್ರಮ ತೆಗೆದುಕೊಳ್ಳುವುದನ್ನು ಬಲವಾಗಿ ವಿರೋಧಿಸಿದ್ದಾರೆ.
ಉದ್ಯೋಗಿಗಳ ಗಾಯದ ಮೇಲೆ ಬರೆ ಎಳೆದಂತೆ ಈ ಕಂಪನಿ 400 ಬಿಲಿಯನ್ ಡಾಲರ್ನಷ್ಟು ಸ್ಟಾಕ್ ಬಯ್ಬ್ಯಾಕ್ ಮಾಡುತ್ತಿದೆ. ಒಂದು ಬಿಸಿನೆಸ್ ಸಂಕಷ್ಟದಲ್ಲಿದ್ದಾಗ ಲೇ ಆಫ್ ಮಾಡುವ ನಿರ್ಧಾರವನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಈ ಕಂಪನಿಯ ವಿಚಾರದಲ್ಲಿ ಇದು ಅಪ್ಪಟ ದುರಾಸೆಯೇ ಎಂದು ತಮಿಳುನಾಡು ಮೂಲದ ಕಂಪನಿಯ ಸಿಇಒ ಹೇಳಿದ್ದಾರೆ.
ಇದನ್ನೂ ಓದಿ: ರಿಷಿತ್, ಈ ಬೆಂಗಳೂರು ಹುಡುಗ ಈಗ ಸ್ವೀಡನ್ ಮೂಲದ ಟ್ರೂಕಾಲರ್ ಸಿಇಒ; ಯಾರು ಈ ಜುಂಜುನವಾಲ?
400 ಮಿಲಿಯನ್ ಡಾಲರ್ ಮೊತ್ತವನ್ನು ಸ್ಟಾಕ್ ಬಯ್ಬ್ಯಾಕ್ಗೆ ಉಪಯೋಗಿಸುತ್ತಿರುವ ಕಂಪನಿಯ ನಿರ್ಧಾರವನ್ನು ಪ್ರಶ್ನಿಸಿದ ಅವರು, ‘ಈ 400 ಮಿಲಿಯನ್ ಡಾಲರ್ ಹಣವನ್ನು ಬೇರೆ ಬಿಸಿನೆಸ್ಗೆ ಹೂಡಿಕೆ ಮಾಡಿ, ಈ ಉದ್ಯೋಗಿಗಳನ್ನು ಅಲ್ಲಿಗೆ ಜೋಡಿಸಬಹುದಿತ್ತಲ್ಲವಾ? ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಥ ಅವಕಾಶಗಳು ಇಲ್ಲವಾ? ನಿಮಗೆ ಕುತೂಹಲ, ಕಲ್ಪನೆ, ದೂರದೃಷ್ಟಿ ಇವ್ಯಾವುದೂ ಇಲ್ಲವಾ? ಕನಿಕರ ಎನ್ನುವುದೂ ಕನಿಷ್ಠವೂ ಇಲ್ಲವಾ?’ ಎಂದು ಶ್ರೀಧರ್ ವೆಂಬು ತಮ್ಮ ಪೋಸ್ಟ್ನಲ್ಲಿ ಫ್ರೆಶ್ವರ್ಕ್ಸ್ ಕಂಪನಿಯ ಹೆಸರು ಎತ್ತದೆಯೇ ಕಿಡಿಕಾರಿದ್ದಾರೆ.
A company that has $1 billion cash, which is about 1.5 times its annual revenue, and is actually still growing at a decent 20% rate and making a cash profit, laying off 12-13% of its workforce should not expect any loyalty from its employees ever. And to add insult to injury,…
— Sridhar Vembu (@svembu) November 7, 2024
‘ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಈ ರೀತಿಯ ವರ್ತನೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ದುರದೃಷ್ಟಕರವೆಂಬಂತೆ ಭಾರತದಲ್ಲೂ ಇದನ್ನು ಅನುಸರಿಸುತ್ತಿದ್ದೇವೆ’ ಎಂದು ವೆಂಬು ಖೇದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತವೇನಾದರೂ ರಷ್ಯಾದಿಂದ ತೈಲ ಖರೀಸದೇ ಹೋಗಿದ್ದರೆ ಜಾಗತಿಕವಾಗಿ ಬೆಲ ದುಬಾರಿಯಾಗುತ್ತಿತ್ತು: ಸಚಿವ ಹರ್ದೀಪ್ ಸಿಂಗ್ ಪುರಿ
ತಮ್ಮ ಜೋಹೋ ಸಂಸ್ಥೆ ಯಾಕೆ ಇನ್ನೂ ಷೇರುಮಾರುಕಟ್ಟೆ ಬರದೇ ಪ್ರೈವೇಟ್ ಕಂಪನಿಯಾಗಿದೆ ಎಂಬುದಕ್ಕೆ ಅವರು ಇದೇ ಕಾರಣ ನೀಡಿದ್ದಾರೆ. ‘ಗ್ರಾಹಕರು ಮತ್ತು ಉದ್ಯೋಗಿಗಳು ನಮಗೆ ಮೊದಲ ಆದ್ಯತೆ. ಷೇರುದಾರರಿಗೆ ಕೊನೆಯ ಆದ್ಯತೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ