2025ರಲ್ಲಿ ಬರಲಿವೆ ಸಖತ್ ಐಪಿಒಗಳು; 3 ಲಕ್ಷ ಕೋಟಿ ರೂಗೂ ಅಧಿಕ ಬಂಡವಾಳ ಸಂಗ್ರಹಣೆ ನಿರೀಕ್ಷೆ

|

Updated on: Jan 12, 2025 | 11:08 AM

IPOs in 2025: 2024ರಲ್ಲಿ ಭಾರೀ ಸಂಖ್ಯೆಯಲ್ಲಿ ಐಪಿಒಗಳು ಅಡಿ ಇಟ್ಟು ಪ್ರಾಥಮಿಕ ಮಾರುಕಟ್ಟೆಯಿಂದ ಲಕ್ಷಾಂತರ ಕೋಟಿ ರೂ ಬಂಡವಾಳ ಪಡೆದಿದ್ದವು. 2025ರಲ್ಲೂ ಇದೇ ಟ್ರೆಂಡ್ ಇರಲಿದ್ದು, 12 ತಿಂಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಐಪಿಒಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ವರ್ಷ ಒಎಫ್​ಎಸ್ ಪ್ರಮಾಣ ಕಡಿಮೆ ಆಗಿ, ಹೊಸ ಷೇರುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಕೆಲ ತಜ್ಞರು ನಿರೀಕ್ಷಿಸಿದ್ದಾರೆ.

2025ರಲ್ಲಿ ಬರಲಿವೆ ಸಖತ್ ಐಪಿಒಗಳು; 3 ಲಕ್ಷ ಕೋಟಿ ರೂಗೂ ಅಧಿಕ ಬಂಡವಾಳ ಸಂಗ್ರಹಣೆ ನಿರೀಕ್ಷೆ
ಷೇರು ಮಾರುಕಟ್ಟೆ
Follow us on

ನವದೆಹಲಿ, ಜನವರಿ 12: ಕಳೆದ ವರ್ಷ (2024) ಸಾಕಷ್ಟು ಐಪಿಒಗಳು ಬಿಡುಗಡೆಯಾಗಿ ಲಕ್ಷಾಂತರ ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹಣೆ ಆಗಿತ್ತು. ಈ ವರ್ಷವೂ ಅದೇ ಟ್ರೆಂಡ್ ಮುಂದುವರಿಯಲಿದೆ. ಮಾರುಕಟ್ಟೆ ಹಿನ್ನಡೆಯಲ್ಲಿದ್ದರೂ ಐಪಿಒಗಳು ಅಬಾಧಿತವಾಗಿ ಮುಂದುವರಿಯುವ ನಿರೀಕ್ಷೆ ಇದೆ. ಕೋಟಕ್ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಮುಂದಿನ 12 ತಿಂಗಳಲ್ಲಿ 35 ಬಿಲಿಯನ್ ಡಾಲರ್ (ಮೂರು ಲಕ್ಷ ಕೋಟಿ ರೂ) ಮೌಲ್ಯದ ಐಪಿಒಗಳು ಪ್ರಾಥಮಿಕ ಮಾರುಕಟ್ಟೆಗೆ (primary market) ಅಡಿ ಇಡುವ ಸಾಧ್ಯತೆ ಇದೆ.

2024ರಲ್ಲಿ ಐಪಿಒಗಳಿಂದ ಭಾರೀ ಮೊತ್ತದ ಬಂಡವಾಳ ಸಂಗ್ರಹವಾಗಿತ್ತು. ಪ್ರಾಥಮಿಕ ಮಾರುಕಟ್ಟೆಯಲ್ಲಿ ಬರೋಬ್ಬರಿ 74 ಬಿಲಿಯನ್ ಡಾಲರ್ (ಆರು ಲಕ್ಷ ರೂಗೂ ಅಧಿಕ) ಮೊತ್ತದ ಬಂಡವಾಳವನ್ನು ವಿವಿಧ ಕಂಪನಿಗಳು ಪಡೆದಿದ್ದವು. ಈ ವಿಚಾರದಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ.

ಇದನ್ನೂ ಓದಿ: Startup India: ಹೊಸ ಉದ್ಯಮಿಗಳಿಗೆ ಕನಸಿನ ಉದ್ಯಮ ಆರಂಭಿಸಲು ಸರ್ಕಾರದಿಂದ ಸಿಗಲಿದೆ ಸೌಲಭ್ಯ, ಅರ್ಜಿ ಸಲ್ಲಿಸುವುದು ಹೇಗೆ?

ಕುತೂಹಲ ಎಂದರೆ, ಜಾಗತಿಕ ಈಕ್ವಿಟಿ ಬಂಡವಾಳ ಮಾರುಕಟ್ಟೆಗಳಲ್ಲಿ ಭಾರತದ ಪಾಲು ಶೇ. 14ರಷ್ಟಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಐಪಿಒಗಳಿಂದ ಬಂಡವಾಳ ಸಂಗ್ರಹ ಆಗಿದ್ದು ನಿಜಕ್ಕೂ ಬೆರಗಾಗಿಸುವಂತಹದ್ದು ಎನ್ನುತ್ತಾರೆ ಕೋಟಕ್ ಇನ್ವೆಸ್ಟ್​ಮೆಂಟ್ ಬ್ಯಾಕಿಂಗ್​ನ ಎಂಡಿಯಾಗಿರುವ ವಿ ಜಯಶಂಕರ್.

2025ರಲ್ಲಿ ಈಕ್ವಿಟಿ ಮಾರುಕಟ್ಟೆಗೆ ಬರಲಿವೆ 90ಕ್ಕೂ ಅಧಿಕ ಕಂಪನಿಗಳು

ಕಳೆದ ವರ್ಷ 91 ಕಂಪನಿಗಳು ಐಪಿಒ ಬಿಡುಗಡೆ ಮಾಡಿ ಬಂಡವಾಳ ಕಲೆಹಾಕಿದ್ದವು. ಈ ವರ್ಷವೂ 90ಕ್ಕೂ ಅಧಿಕ ಐಪಿಒಗಳು ಬರುವ ನಿರೀಕ್ಷೆ ಇದೆ ಎಂದು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸಿಇಒ ಸುಂದರರಾಮನ್ ರಾಮಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಸದ್ಯ ಐಪಿಒ ಬೂಮ್ ನಡೆಯುತ್ತಿದ್ದು, ಇದರಲ್ಲಿ ಹೊಸದಾಗಿ ಷೇರು ವಿತರಣೆ ಜೊತೆಗೆ ಒಎಫ್​ಎಸ್ ಮೂಲಕವೂ ಷೇರು ವಿತರಣೆ ಆಗುತ್ತಿದೆ. ಒಎಫ್​ಎಸ್ ಎಂದರೆ ಆಫರ್ಸ್ ಫಾರ್ ಸೇಲ್. ಇಲ್ಲಿ ದೊಡ್ಡ ಮೊತ್ತದ ಷೇರುಗಳನ್ನು ಹೊಂದಿರುವವರು ಕೆಲ ಷೇರುಗಳನ್ನು ಒಎಫ್​ಎಸ್ ಮೂಲಕ ಮಾರುಕಟ್ಟೆಯಲ್ಲಿ ಬಿಕರಿ ಮಾಡುತ್ತಾರೆ. ಇದರಿಂದ ಬರುವ ಹಣವು ಆ ಷೇರುದಾರರಿಗೆ ಹೋಗುತ್ತದೆ. ಕಂಪನಿಗೆ ಹೊಸದಾಗಿ ಬಂಡವಾಳ ಸೃಷ್ಟಿಯಾಗುವುದಿಲ್ಲ.

ಇದನ್ನೂ ಓದಿ: ಕಾಶ್ಮೀರ ಕಣಿವೆಯ ದುರ್ಗಮ ಹಾದಿಯಲ್ಲಿ ರೈಲು ಪ್ರಯೋಗ ಯಶಸ್ವಿ; ಶೀಘ್ರದಲ್ಲೇ ಜಮ್ಮು-ಕಾಶ್ಮೀರಕ್ಕೆ ನೇರ ರೈಲು ಸಂಪರ್ಕ

ಬಿಎಸ್​ಇ ಸಿಇಒ ಅವರು ಈ ವರ್ಷ ಒಎಫ್​ಎಸ್ ಪ್ರಮಾಣ ಕಡಿಮೆ ಆಗಬಹುದು. ಹೊಸ ಬಂಡವಾಳ ಹೆಚ್ಚಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಅಂದಹಾಗೆ, 2024-25ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್​ನಿಂದ ಸೆಪ್ಟೆಂಬರ್) ಲಿಸ್ಟಿಂಗ್ ಫೀಸ್ ಮೂಲಕವೇ ಬಿಎಸ್​ಇ 157 ಕೋಟಿ ರೂ ಆದಾಯ ಗಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ