
ನವದೆಹಲಿ, ಡಿಸೆಂಬರ್ 8: ಜಾಗತಿಕವಾಗಿ ಡಿಫೆನ್ಸ್ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ವೆಚ್ಚ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖ ದೇಶಗಳ ಮಿಲಿಟರಿ ವೆಚ್ಚ ವಿಪರೀತ ಹೆಚ್ಚಿದೆ. ಶಸ್ತ್ರಾಸ್ತ್ರ ತಯಾರಿಸುವ ಸಂಸ್ಥೆಗಳಿಗೆ ಆದಾಯಗಳ ಸುಗ್ಗಿ ಆಗಿದೆ. ಸ್ಟಾಕ್ಹಾಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ವರದಿಯೊಂದರ ಪ್ರಕಾರ, 2024ರಲ್ಲಿ ವಿಶ್ವದ ಟಾಪ್ 100 ಶಸ್ತ್ರಾಸ್ತ್ರ ತಯಾರಕ ಸಂಸ್ಥೆಗಳ (Arms producing companies) ಒಟ್ಟಾರೆ ಆದಾಯ 679 ಬಿಲಿಯನ್ ಡಾಲರ್ ಆಗಿದೆಯಂತೆ. ಇಷ್ಟು ಮೊತ್ತದ ಆದಾಯ ದಾಖಲಾಗಿರುವುದು ಇದೇ ಮೊದಲು ಎಂದು ಈ ವರದಿ ಹೇಳುತ್ತಿದೆ.
ಜಾಗತಿಕ ಶಸ್ತ್ರಾಸ್ತ್ರ ತಯಾರಕ ಕಂಪನಿಗಳು 2024ರಲ್ಲಿ ಗಳಿಸಿದ ಆದಾಯದಲ್ಲಿ ಭಾರತೀಯ ಕಂಪನಿಗಳ ಪಾಲು ಶೇ. 1.1 ಮಾತ್ರ. ಅಮೆರಿಕದ ಪಾರಮ್ಯ ಅತಿಹೆಚ್ಚು ಇದೆ. ಶೇ. 49ರಷ್ಟು ಆದಾಯವು ಅಮೆರಿಕನ್ ಕಂಪನಗಳಿಗೆ ಹೋಗಿದೆ. ಚೀನಾ ಶೇ. 13 ಮತ್ತು ಯುನೈಟೆಡ್ ಕಿಂಗ್ಡಂ ಶೇ. 7.7ರಷ್ಟು ಪಾಲು ಹೊಂದಿವೆ.
ಇದನ್ನೂ ಓದಿ: ಇಂಡಿಗೋ ಏರ್ಲೈನ್ಸ್ ದಿಢೀರ್ ಬಿಕ್ಕಟ್ಟಿಗೆ ಸಿಲುಕಲು ಹೊಸ ಎಫ್ಡಿಟಿಎಲ್ ನಿಯಮಗಳೇ ಕಾರಣ; ಏನಿದೆ ರೂಲ್ಸ್?
ಸಿಪ್ರಿ ಪ್ರಕಟಿಸಿರುವ ವರದಿ ಪ್ರಕಾರ 2024ರಲ್ಲಿ ಅತಿದೊಡ್ಡ ಟಾಪ್-100 ಡಿಫೆನ್ಸ್ ಕಂಪನಿಗಳಲ್ಲಿ 77 ಸಂಸ್ಥೆಗಳ ಆದಾಯ ಹೆಚ್ಚಳ ಆಗಿದೆ. ಜಪಾನ್ ಡಿಫೆನ್ಸ್ ಕಂಪನಿಗಳು ಶೇ. 40ರಷ್ಟು ಆದಾಯ ಹೆಚ್ಚಳ ಕಂಡಿವೆ. ಜರ್ಮನಿ, ಸೌತ್ ಕೊರಿಯಾ, ರಷ್ಯಾ ದೇಶಗಳ ಕಂಪನಿಗಳೂ ಕೂಡ ಶೇ. 20ಕ್ಕಿಂತ ಹೆಚ್ಚು ಆದಾಯ ಹೆಚ್ಚಳ ಕಂಡಿವೆ. ಭಾರತೀಯ ಡಿಫೆನ್ಸ್ ಕಂಪನಿಗಳ ಆದಾಯ ಶೇ. 8.2ರಷ್ಟು ಹೆಚ್ಚಿದೆ. ಕುತೂಹಲದ ಸಂಗತಿ ಎಂದರೆ 2024ರಲ್ಲಿ ಚೀನೀ ಕಂಪನಿಗಳ ಶಸ್ತ್ರಾಸ್ತ್ರ ಆದಾಯ ಶೇ. 10ರಷ್ಟು ಕಡಿಮೆ ಆಗಿದೆ. ಅಮೆರಿಕ, ಯುಕೆ ಮತ್ತು ಯೂರೋಪ್ನ ಡಿಫೆನ್ಸ್ ಕಂಪನಿಗಳ ಆದಾಯ ಹೆಚ್ಚಳವು ಭಾರತದಕ್ಕಿಂತ ಕಡಿಮೆ ಇದೆ.
ವಿಶ್ವದ ಅತಿಹೆಚ್ಚು ಆದಾಯದ 100 ಶಸ್ತ್ರಾಸ್ತ್ರ ತಯಾರಕರ ಪಟ್ಟಿಯಲ್ಲಿ ಭಾರತದ ಮೂರು ಕಂಪನಿಗಳಿವೆ. ಎಚ್ಎಎಲ್, ಬಿಇಎಲ್ ಮತ್ತು ಮಜಗಾಂವ್ ಡಾಕ್ ಶಿಪ್ಬ್ಯುಲ್ಡರ್ ಕಂಪನಿಗಳು ಈ ಸಿಪ್ರಿ ಪಟ್ಟಿಯಲ್ಲಿವೆ. ಇವು ಮೂರೂ ಕೂಡ ಸರ್ಕಾರಿ ಕಂಪನಿಗಳೇ ಆಗಿವೆ. ಈ ಪೈಕಿ ಎಚ್ಎಎಲ್ ಮತ್ತು ಬಿಇಎಲ್ ಬೆಂಗಳೂರು ಮೂಲದ ಕಂಪನಿಗಳಾಗಿವೆ. ಎಚ್ಎಎಲ್ 44, ಬಿಇಎಲ್ 58 ಮತ್ತು ಮಜಗಾಂವ್ ಡಾಕ್ 91ನೇ ಸ್ಥಾನ ಪಡೆದಿವೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್ನಿಂದ ಭಾರತೀಯ ಚಿತ್ರೋದ್ಯಮ ಕಂಗಾಲು; ಸಿನಿಮಾ ರಂಗದ ಆತಂಕವೇನು?
ಎಲ್ಸಿಎ ತೇಜಸ್ ಸೇರಿದಂತೆ ಹಲವು ಪ್ರಮುಖ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಎಚ್ಎಎಲ್ನ ಆದಾಯ 3.8 ಬಿಲಿಯನ್ ಡಾಲರ್ ಇದೆ. ಎಲೆಕ್ಟ್ರಾನಿಕ್ಸ್ ವಾರ್ಫೇರ್ ಸಲಕರಣೆಗಳ ತಯಾರಿಕೆಯಲ್ಲಿ ಪಳಗಿರುವ ಬಿಇಎಲ್ ಸಂಸ್ಥೆ 2.5 ಬಿಲಿಯನ್ ಡಾಲರ್ ಆದಾಯ ಹೊಂದಿದೆ. 2024ರಲ್ಲಿ ಇದರ ಆದಾಯ ಶೇ. 24ರಷ್ಟು ಹೆಚ್ಚಾಗಿದೆ. ಇನ್ನು, ಸಬ್ಮರೀನ್ಗಳನ್ನು ತಯಾರಿಸುವ ಮಜಗಾಂವ್ ಡಾಕ್ ಸಂಸ್ಥೆ 2024ರಲ್ಲಿ 1.23 ಬಿಲಿಯನ್ ಡಾಲರ್ ಆದಾಯ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ