Tomato: 300 ರೂ ಮುಟ್ಟಲಿದೆ ಟೊಮೆಟೋ ಬೆಲೆ; ಇತರ ತರಕಾರಿಗಳೂ ತುಟ್ಟಿ; ನಷ್ಟ ಮಾಡಿಕೊಳ್ಳುತ್ತಿರುವ ಸಗಟು ವ್ಯಾಪಾರಿಗಳು

Tomato Price May Reach Rs 300: ಗಗನಕ್ಕೇರುತ್ತಿರುವ ಟೊಮೆಟೋ ಬೆಲೆ ಸದ್ಯದಲ್ಲೇ 300 ರೂ ಗಡಿ ದಾಟಲಿದೆ ಎಂದು ಎಪಿಎಂಸಿ ಸದಸ್ಯರೊಬ್ಬರು ಹೇಳಿದ್ದಾರೆ. ತರಕಾರಿ ದುಬಾರಿಯಾದ್ದರಿಂದ ವ್ಯಾಪಾರವೂ ಕಡಿಮೆಗೊಂಡ ಪರಿಣಾಮ ಸಗಟು ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ.

Tomato: 300 ರೂ ಮುಟ್ಟಲಿದೆ ಟೊಮೆಟೋ ಬೆಲೆ; ಇತರ ತರಕಾರಿಗಳೂ ತುಟ್ಟಿ; ನಷ್ಟ ಮಾಡಿಕೊಳ್ಳುತ್ತಿರುವ ಸಗಟು ವ್ಯಾಪಾರಿಗಳು
ಟೊಮೆಟೋImage Credit source: Photo by engin akyurt on Unsplash
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 03, 2023 | 11:08 AM

ನವದೆಹಲಿ, ಆಗಸ್ಟ್ 3: ಕಿಲೋಗೆ 200ಕ್ಕೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿರುವ ಟೊಮೆಟೋ (Tomato price) ಮುಂದಿನ ದಿನಗಳಲ್ಲಿ 300 ರೂ ಮುಟ್ಟಬಹುದು ಎಂದು ಸಗಟು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ಧಾರೆ. ಪಿಟಿಐ ಸುದ್ದಿಸಂಸ್ಥೆಯ ವರದಿ ಪ್ರಕಾರ ಟೊಮೆಟೋ ಜೊತೆಗೆ ಇತರ ತರಕಾರಿ ಬೆಲೆಗಳೂ ದುಬಾರಿಯಾಗಲಿವೆಯಂತೆ. ಎಪಿಎಂಸಿ ಸದಸ್ಯ ಕೌಶಿಕ್ ಹೇಳುವ ಪ್ರಕಾರ, ಸಗಟು ಮಾರುಕಟ್ಟೆಯಲ್ಲಿ ಕಿಲೋಗೆ 160 ರೂ ಇದ್ದ ಟೊಮೆಟೋ ಬೆಲೆ 220 ರುಪಾಯಿಗೆ ಏರಿದೆ. ಇದರಿಂದ ರೀಟೇಲ್ ದರಗಳೂ ಹೆಚ್ಚಲಿವೆ.

ಮದರ್ ಡೈರಿ ಸಂಸ್ಥೆ ತನ್ನ ಸಫಲ್ ರೀಟೇಲ್ ಮಳಿಗೆಗಳಲ್ಲಿ ಟೊಮೆಟೋವನ್ನು 259 ರುಪಾಯಿಗೆ ಮಾರುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ 300 ರೂ ಗಡಿ ದಾಟಿ ಹೋಗುವ ಸಾಧ್ಯತೆ ಇದೆ.

ಸಗಟು ವ್ಯಾಪಾರಿಗಳಿಗೆ ನಷ್ಟ

ಟೊಮೆಟೋ ಮತ್ತು ಇತರ ತರಕಾರಿಗಳ ಬೆಲೆ ಏರಿಕೆಯ ಬಿಸಿ ಸಗಟು ವ್ಯಾಪಾರಿಗಳಿಗೆ ಹೆಚ್ಚು ತಾಕಿರುವಂತಿದೆ. ಟೊಮೆಟೋ ಹಾಗು ತರಕಾರಿಗಳು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಖರೀದಿಸುವವರ ಪ್ರಮಾಣ ಕಡಿಮೆ ಆಗಿದೆ. ಇದರಿಂದ ಹೋಲ್​ಸೇಲ್ ಟ್ರೇಡರ್​ಗಳಿಗೆ ಭಾರೀ ನಷ್ಟವಾಗುತ್ತಿದೆ ಎಂದು ಎಪಿಎಂಸಿ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ: Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು

ಮಹಾರಾಷ್ಟ್ರದಿಂದ ಟೊಮೆಟೋ ಪೂರೈಕೆಯಾದರೂ ಯಾಕೆ ಬೆಲೆ ಏರಿಕೆ?

ಜುಲೈ ತಿಂಗಳಲ್ಲಿ ಹಿಮಾಚಲಪ್ರದೇಶ ಮತ್ತು ಕರ್ನಾಟದಿಂದ ಎಲ್ಲೆಡೆಗೆ ಟೊಮೆಟೋ ಪೂರೈಕೆ ಆಗಬೇಕಿತ್ತು. ಹಿಮಾಚಲದಲ್ಲಿ ಪ್ರವಾಹದಿಂದ ತರಕಾರಿ ಬೆಳೆಗಳು ಹಾಳಾಗಿವೆ. ಈಗ ಮಹಾರಾಷ್ಟ್ರದಿಂದಲೂ ಟೊಮೆಟೋ ಪೂರೈಕೆ ಆಗುತ್ತಿದೆ. ಆದರೂ ಟೊಮೆಟೋ ಬೆಲೆ ಏರಿಕೆ ಆಗುವುದು ನಿಲ್ಲುತ್ತಿಲ್ಲ. ದೆಹಲಿಯ ಆಜಾದ್​ಪುರ್ ಮಂಡಿಯ ವರ್ತಕರೊಬ್ಬರು ಮಾಧ್ಯಮಕ್ಕೆ ನೀಡಿರುವ ಮಾಹಿತಿ ಪ್ರಕಾರ ದೆಹಲಿಯ ಟೊಮೆಟೋ ಅಗತ್ಯತೆಗಳು ಹೆಚ್ಚಾಗಿ ಹಿಮಾಚಲದಿಂದಲೇ ಆಗಬೇಕು. ಹಿಮಾಚಲದಲ್ಲಿ ಮಳೆಯಿಂದ ತರಕಾರಿ ಬೆಳೆ ಕಡಿಮೆ ಆಗಿದೆ. ಉಳಿದಿರುವ ಸರಕುಗಳನ್ನು ಸಾಗಿಸಲು ಕಷ್ಟಕರವಾದಂಥ ಸ್ಥಿತಿ ಇದೆ. ಇದರಿಂದ ಟೊಮೆಟೋ ಬೆಲೆ ಇನ್ನಷ್ಟು ಹೆಚ್ಚಾಗಬಹುದು. ಹಾಗೆಯೇ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬರುತ್ತಿರುವ ಟೊಮೆಟೋದ ಗುಣಮಟ್ಟವೂ ಕಡಿಮೆ ಆಗಿದೆ ಎಂದು ವರ್ತಕರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ