ನವದೆಹಲಿ, ಡಿಸೆಂಬರ್ 15: ಭಾರತದ ಅಂತಾರಾಷ್ಟ್ರೀಯ ಸರಕು ವಹಿವಾಟಿನಲ್ಲಿ (Merchandise trading) ಟ್ರೇಡ್ ಡೆಫಿಸಿಟ್ ಅಥವಾ ವ್ಯಾಪಾರ ಅಂತರ (Trade Deficit) ನವೆಂಬರ್ ತಿಂಗಳಲ್ಲಿ 20.58 ಬಿಲಿಯನ್ ಡಾಲರ್ಗೆ ಇಳಿದಿದೆ. ಹಿಂದಿನ ಅಕ್ಟೋಬರ್ ತಿಂಗಳಲ್ಲಿ ಇದ್ದ 31.46 ಬಿಲಿಯನ್ ಡಾಲರ್ಗೆ ಹೋಲಿಸಿದರೆ ನವೆಂಬರ್ನಲ್ಲಿ ಟ್ರೇಡ್ ಡೆಫಿಸಿಟ್ ಗಣನೀಯವಾಗಿ ತಗ್ಗಿದೆ. 2022ರ ನವೆಂಬರ್ನಲ್ಲಿ ವ್ಯಾಪಾರ ಅಂತರ 32 ಬಿಲಿಯನ್ ಡಾಲರ್ ಇತ್ತು. ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ನವೆಂಬರ್ನಲ್ಲಿ ಆಮದು ಮತ್ತು ರಫ್ತು ಎರಡೂ ಕೂಡ ಕಡಿಮೆ ಆಗಿವೆ. ಆದರೆ, ರಫ್ತು ಕಡಿಮೆ ಆಗಿರುವುದಕ್ಕಿಂತ ಆಮದು ಕಡಿಮೆ ಆಗಿರುವ ಪ್ರಮಾಣ ಹೆಚ್ಚಿದೆ. ಹೀಗಾಗಿ, ಟ್ರೇಡ್ ಡೆಫಿಸಿಟ್ ಕೂಡ ಕಡಿಮೆ ಆಗಿದೆ.
ಸರ್ಕಾರ ಇಂದು ಶುಕ್ರವಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ 2023ರ ನವೆಂಬರ್ ತಿಂಗಳಲ್ಲಿ 54.48 ಬಿಲಿಯನ್ ಡಾಲರ್ನಷ್ಟು ಆಮದು ಮಾಡಿಕೊಳ್ಳಲಾಗಿದೆ. ಇನ್ನು, ರಫ್ತು 33.90 ಬಿಲಿಯನ್ ಡಾಲರ್ ಆಗಿದೆ.
2022ರ ನವೆಂಬರ್ನಲ್ಲಿ ಆಮದುಗಳ ಪ್ರಮಾಣ 56.95 ಬಿಲಿಯನ್ ಡಾಲರ್ ಇದ್ದರೆ, ರಫ್ತುಗಳು 34.89 ಬಿಲಿಯನ್ ಡಾಲರ್ ಆಗಿದ್ದವು. ರಫ್ತು ಈ ವರ್ಷ ಶೇ. 2.8ರಷ್ಟು ಕಡಿಮೆ ಆಗಿದ್ದರೆ, ಆಮದುಗಳು ಶೇ. 4.3ರಷ್ಟು ಇಳಿಮುಖ ಆಗಿವೆ.
ಇದನ್ನೂ ಓದಿ: ಪಾಂಡಿ, ಕರ್ನಾಟಕ, ಯುಪಿಗೆ ಹೆಚ್ಚು ಅಬಕಾರಿ ಆದಾಯ; ಮದ್ಯ ಮಾರಾಟದಿಂದ ಯಾವ್ಯಾವ ಸರ್ಕಾರಗಳ ಖಜಾನೆ ಎಷ್ಟು ಭರ್ತಿ? ಇಲ್ಲಿದೆ ಪಟ್ಟಿ
ಹಾಗೆಯೇ, ಈ ಹಣಕಾಸು ವರ್ಷದ ಮೊದಲ ಎಂಟು ತಿಂಗಳು, ಅಂದರೆ ಏಪ್ರಿಲ್ನಿಂದ ನವೆಂಬರ್ವರೆಗಿನ ಅವಧಿಯಲ್ಲಿ ರಫ್ತು ಪ್ರಮಾಣ 278.8 ಬಿಲಿಯನ್ ಡಾಲರ್ನಷ್ಟಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಶೇ. 6.51ರಷ್ಟು ಕಡಿಮೆ ಆಗಿದೆ. ಇನ್ನು, ಆಮದು ಶೇ. 8.67ರಷ್ಟು ಕಡಿಮೆ ಆಗಿರುವುದು ಗಮನಾರ್ಹ.
ಕಳೆದ ಕೆಲ ತಿಂಗಳಿಂದಲೂ ರಫ್ತು ಮತ್ತು ಆಮದು ಎರಡೂ ಕೂಡ ಕಡಿಮೆ ಆಗುತ್ತಿವೆ. ಇದಕ್ಕೆ ಕಾರಣಗಳು ಭಿನ್ನ. ಸರ್ಕಾರ ಸಾಧ್ಯವಾದೆಡೆಯೆಲ್ಲಾ ಆಮದನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದೆ.
ಇನ್ನು, ರಫ್ತು ಕಡಿಮೆಗೊಳ್ಳಲು ಬೇರೆ ಕಾರಣಗಳಿವೆ. ಅಂತಾರಾಷ್ಟ್ರೀಯ ವಿದ್ಯಮಾನ, ಹೆಚ್ಚಿನ ಹಣದುಬ್ಬರ, ಮುಂದುವರಿದ ದೇಶಗಳಲ್ಲಿ ಮಂದಗತಿಯ ಆರ್ಥಿಕತೆ, ರಷ್ಯಾ ಉಕ್ರೇನ್ ಸಮಸ್ಯೆ, ಇಸ್ರೇಲ್ ಪ್ಯಾಲಸ್ಟೀನ್ ಬಿಕ್ಕಟ್ಟು, ಚೀನಾ, ತೈವಾನ್, ಅಮೆರಿಕ ಇತ್ಯಾದಿ ಅಂಶಗಳೆಲ್ಲವೂ ಭಾರತದ ರಫ್ತಿನ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ